ಬೆಂಗಳೂರು: ಮಂಗಳೂರಿನ ಕಾಟಿಪಳ್ಳದಲ್ಲಿ ಬುಧವಾರ ನಡೆದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಬರ್ಭರ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಕೈವಾಡವಿದೆ ಎ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವಂತೆ ಆಗ್ರಹಿಸಿದೆ.
ಜತೆಗೆ ಈ ಹತ್ಯೆಯ ನೈತಿಕ ಹೊಣೆ ಹೊತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್.ಅಶೋಕ್ ಮತ್ತು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಕಾಟಿಪಳ್ಳದಲ್ಲಿ ಚಿಕನ್‌ಕಟ್ ರೀತಿ ಅಮಾನುಷವಾಗಿ ದೀಪಕ್‌ರಾವ್‌ನನ್ನು ಹತ್ಯೆ ಮಾಡಲಾಗಿದ್ದು, ಇದರ ಹಿಂದೆಯೂ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಸಂಚು ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಉಳಿದಿಲ್ಲ. ಈ ಹಿಂದೆ ನಡೆದ ಹತ್ಯೆಗಳ ಸಂದರ್ಭದಲ್ಲಿ ಸರ್ಕಾರ ಅನುಸರಿಸಿದ ಉದಾಸೀನ ಭಾವವೇ ಈ ಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹಲ್ಲೆ ಮತ್ತು ಹತ್ಯೆ ನಡೆಸುವ ವ್ಯವಸ್ಥಿತ ಜಾಲವೇ ಸಕ್ರಿಯವಾಗಿದೆ. ಆದರೆ ರಾಜ್ಯ ಸರ್ಕಾರ ಪ್ರತಿಯೊಂದು ಹತ್ಯೆಯನ್ನು ಪ್ರತ್ಯೇಕಿಸಿ ಪರಿಸ್ಥಿತಿಯ ಗಂಭೀರತೆಯನ್ನು ಕಡೆಗಣಿಸುತ್ತಿದೆ. 2012-13ರಲ್ಲಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಆರೋಪಿಗಳ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಈಗ ರಾಜ್ಯದಲ್ಲಿ ಮಾರಣಹೋಮ ನಡೆಯಲು ಕಾರಣವಾಗಿದೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ನಂತರ ಅಥವಾ ಭೇಟಿಗಿಂತ ಮೊದಲು ಇಂತಹ ಕೃತ್ಯ ನಡೆಯುತ್ತಿರುವುದು ಕಾಕತಾಳೀಯವೋ, ಆಕಸ್ಮಿಕವೋ ಎಂಬುದನ್ನು ಸ್ಪಷ್ಟಪಡಿಸಬೇಕು. ದೀಪಕ್ ರಾವ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಮೃತ ದೀಪಕ್ ರಾವ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.