Advertisement
ನಗರದ ಅರಮನೆ ಮೈದಾನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಸಭೆಯ ಕುರಿತು ಮಾಹಿತಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ನಿಯೋಗ ಕರೆದೊಯ್ಯಲೂ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಈ ಕುರಿತು ಗಿರೀಶ್ ಪಟೇಲ್ ಮಂಡಿಸಿದ ನಿರ್ಣಯಕ್ಕೆ ಹಾಜರಿದ್ದ ಸುಮಾರು ಒಂದೂವರೆ ಸಾವಿರ ಅತೃ ಪ್ತರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ.
Related Articles
ಬೆಂಗಳೂರು: ಬಿಜೆಪಿಯ ಅಸಮಾಧಾನಿತ ಮುಖಂಡರು ಕರೆದಿದ್ದ ಸಂಘಟನೆ ಉಳಿಸಿ ಸಭೆಯಲ್ಲಿ ಕಾರ್ಯಕರ್ತನೊಬ್ಬ ಗದ್ದಲ ಎಬ್ಬಿಸಿದ್ದರಿಂದ ಇತರೆ ಕಾರ್ಯಕರ್ತರು ಆತನ ಕತ್ತಿನ ಪಟ್ಟಿ ಹಿಡಿದು, ಬಲವಂತವಾಗಿ ಬಾಯಿಮುಚ್ಚಿ ಸಭೆಯಿಂದ ಎಳೆದು ಹೊರಗೆ ಹಾಕಿದ ಘಟನೆ ನಡೆಯಿತು.
Advertisement
ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಅವರು, ಸಭೆಗೆ ಹೋದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರ ಬಗ್ಗೆ ಕಿಡಿ ಕಾರುತ್ತಾ, ಹತ್ತಾರು ಪಾರ್ಟಿಗೆ ಹೋಗಿ ಬಂದಿದ್ದ ಅಯೋಗ್ಯರು ನಿಷ್ಠಾವಂತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಆದರೆ, ಈ ಮಾತನ್ನು ಯಡಿಯೂರಪ್ಪ ಅವರ ಕುರಿತಾಗಿ ಹೇಳಿದ್ದು ಎಂದು ತಪ್ಪಾಗಿ ಭಾವಿಸಿದ ಸಭೆಯಲ್ಲಿದ್ದ ಶಿವಣ್ಣ ಎಂಬ ಕಾರ್ಯಕರ್ತ, ವೇದಿಕೆಯ ಮುಂಬಾಗ ತೆರಳಿ ಭಾನುಪ್ರಕಾಶ್ ಅವರ ಜತೆ ಜಗಳಕ್ಕೆ ನಿಂತರು. ಅಲ್ಲದೆ, ಜೋರು ದನಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಇತರ ಕಾರ್ಯಕರ್ತರು ಶಿವಣ್ಣ ಅವರನ್ನು ಹಿಡಿದುಕೊಂಡು ಬಲವಂತವಾಗಿ ಬಾಯಿ ಮುಚ್ಚಿಸಿದರಲ್ಲದೆ, ಕತ್ತಿನ ಪಟ್ಟಿ ಹಿಡಿದು ಸಭೆಯಿಂದ ಹೊರಗೆ ಎಳೆತಂದರು. ಅಷ್ಟರಲ್ಲಿ ಸ್ಥಳದಲ್ಲಿದ್ದ ಪೊಲೀಸರು ಶಿವಣ್ಣನನ್ನು ತಮ್ಮ ವಶಕ್ಕೆ ಪಡೆದರು.ಈ ಕುರಿತು ಪ್ರತಿಕ್ರಿಯಿಸಿದ ಸಭೆಯಲ್ಲಿದ್ದ ಮುಖಂಡರು, ಇಂತಹ ವ್ಯಕ್ತಿಗಳನ್ನು ಕಳುಹಿಸಿಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಹೀಗಾಗಿ ಈ ಬಗ್ಗೆ ಗೊಂದಲ ಬೇಡ ಎಂದು ಹೇಳಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಪಕ್ಷ ಬಲಿಕೊಟ್ಟು ಸರ್ಕಾರ ರಚನೆ ಬೇಡ:ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಅಸಮಾಧಾನಿತರ ಗುಂಪಿನ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥ್, ಮುಖಂಡ ಎಂ.ಬಿ.ನಂದೀಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಮತ್ತು ಅವರ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷವನ್ನು ಬಲಿಕೊಟ್ಟು ಅಧಿಕಾರಕ್ಕೆ ಬರುವುದು ಬೇಡ. ನಿಷ್ಠಾವಂತರನ್ನು ಕಡೆಗಣಿಸಬಾರದು. ಸಂಘಟನೆ ಬೆಳೆಸಿ ಸರ್ಕಾರ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ದುರ್ಬಲ ಅಧ್ಯಕ್ಷ ಎಂದು ಕೆಲವರಿಂದ ಅನಿಸಿಕೊಂಡಿದ್ದ ಸಂಸದ ಪ್ರಹ್ಲಾದ ಜೋಶಿ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ನಡೆದ ಉಪ ಚುನಾವಣೆ, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಮೇಲೆ ನಡೆದ ವಿಧಾನ ಪರಿಷತ್ ಮತ್ತು ವಿಧಾನಸಭೆ ಉಪ ಚುನಾವಣೆಗಳಲ್ಲಿ ಪಕ್ಷ ಸೋತಿದೆ. ಇದಕ್ಕೆ ಯಡಿಯೂರಪ್ಪ ಅವರು ಕಾರಣ ಅಲ್ಲದೇ ಇದ್ದರೂ ಅವರು ನಿಷ್ಠಾವಂತರನ್ನು ದೂರ ಇಟ್ಟಿದ್ದು ಕಾರಣವಾಗಿದೆ. ಪಕ್ಷ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಹೊಗಳುವ ಮುಖಂಡರಿಗಿಂತ ನಿಷ್ಠಾವಂತರಾಗಿ ಕೆಲಸ ಮಾಡುವ ಕಾರ್ಯಕರ್ತರು ಬೇಕಾಗಿದ್ದಾರೆ. ಹೀಗಾಗಿ ಅವರಿಗೆ ಅಸಮಾಧಾನವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಲವು ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಹುತೇಕ ಜಿಲ್ಲೆಯವರು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರೆ, ಇನ್ನು ಕೆಲವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಪಕ್ಷದ ನಾಯಕತ್ವವನ್ನು ಈಶ್ವರಪ್ಪ ಅವರಿಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇಟ್ಟು ಈ ಕುರಿತು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಆದರೆ, ಈ ಕುರಿತು ನಿರ್ಣಯ ಕೈಗೊಳ್ಳಲು ಮುಖಂಡರು ನಿರಾಕರಿಸಿದರು.