Advertisement
ಮೇಲ್ನೋಟಕ್ಕೆ ಕಾಂಗ್ರೆಸ್-ಜೆಡಿಎಸ್ ನಾಯಕರ ಒಳಜಗಳ ಕಡಿಮೆಯಾದಂತಿದ್ದರೂ ಒಳಬೇಗುದಿ ಮುಂದಿವರಿದಿದೆ ಎಂಬ ಮಾತುಗಳಿವೆ. ಹಾಗಾಗಿ, ಮೈತ್ರಿ ಪಕ್ಷ ತಾನಾಗಿಯೇ ಪತನವಾದರೆ ಮುಂದಿನ ಪ್ರಯತ್ನ ನಡೆಸುವ ಲೆಕ್ಕಾಚಾರದಲ್ಲಿ ಬಿಜೆಪಿ ದಿನ ಕಳೆಯುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗುತ್ತಿದ್ದಂತೆ ಬಿಜೆಪಿ ಕೂಡ ಕಾರ್ಯತಂತ್ರ ಬದಲಾಯಿಸಿದ್ದು, ಸಂಘಟನೆಗೆ ಆದ್ಯತೆ ನೀಡಿದೆ.
Related Articles
Advertisement
ಅತೃಪ್ತರಲ್ಲಿ ದ್ವಂದ್ವ: ಮೈತ್ರಿ ಸರ್ಕಾರದ ಪಕ್ಷಗಳಲ್ಲಿನ ಅತೃಪ್ತರೆನ್ನಲಾದ ಶಾಸಕರನ್ನು ಸೆಳೆಯುವ, ವಿಶ್ವಾಸದಲ್ಲಿರಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ತೆರೆಮರೆಯಲ್ಲೇ ಮುಂದುವರಿಸಿದೆ. ಹಾಗಿದ್ದರೂ, ಅತೃಪ್ತ ಶಾಸಕರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಈ ನಡುವೆ ಕೆಲ ಅತೃಪ್ತ ಶಾಸಕರು ದ್ವಂದ್ವ ನಿಲುವು ತೋರುತ್ತಿರುವುದು ಸಹ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿರುವ ಅತೃಪ್ತ ಶಾಸಕರೊಂದಿಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ, ಮುಂದಿನ ರಾಜಕೀಯ ಬೆಳವಣಿಗೆ ಆಧರಿಸಿ ಮುಂದುವರಿಯಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಈ ಕಾರಣಗಳ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆ, ಅತೃಪ್ತ ಶಾಸಕರ ರಾಜೀನಾಮೆ ಇತರ ವಿಚಾರಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿಲ್ಲ. ಇನ್ನೊಂದೆಡೆ, ಮೈತ್ರಿ ಸರ್ಕಾರದ ವೈಫಲ್ಯಗಳ ಬಗ್ಗೆ ಜನಾಂದೋಲನ ರೂಪಿಸುವ ಪ್ರಯತ್ನ ನಡೆಸಿದ್ದು, ಸೂಕ್ತ ಸನ್ನಿವೇಶದ ನಿರೀಕ್ಷೆಯಲ್ಲಿದೆ.
ಮುಖ್ಯಮಂತ್ರಿಗಳು ಸರ್ಕಾರದ ಹಣದಲ್ಲಿ ಪಕ್ಷದ ಜಾತ್ರೆ ನಡೆಸುತ್ತಿದ್ದಾರೆ. ತೆರಿಗೆದಾರರ ಹಣದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅದಕ್ಕಾಗಿ ಜೆಡಿಎಸ್ ಶಾಸಕರಿರುವ ಕ್ಷೇತ್ರಗಳನ್ನೇ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎರಡೂ ಪಕ್ಷಗಳು ಸಂಘಟನೆಯತ್ತ ಗಮನ ಹರಿಸಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇಲ್ಲದೆ ಇಲ್ಲ. ಅದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ಸದ್ಯ ಸಂಘಟನೆ ಹಾಗೂ ಸದಸ್ಯತ್ವ ನೋಂದಣಿಗೆ ಒತ್ತು ನೀಡಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಬಿಜೆಪಿ ಸೂಕ್ತ ರಾಜಕೀಯ ನಿರ್ಧಾರ ಕೈಗೊಳ್ಳಲಿದೆ.-ಎನ್.ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ * ಎಂ. ಕೀರ್ತಿಪ್ರಸಾದ್