Advertisement

“ಕೈ’ಬಿಟ್ಟವರಿಗೆ ಬಿಜೆಪಿ ಬುಲಾವ್‌

03:12 PM Jul 24, 2017 | Team Udayavani |

ವಾಡಿ: ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಏಳೆಂಟು  ತಿಂಗಳು ಇರುವಾಗಲೇ ಚಿತ್ತಾಪುರ ತಾಲೂಕಿನ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರ ಅಸಮಾಧಾನ ಸ್ಪೋಟಗೊಂಡಿದ್ದು, ಕ್ಷೇತ್ರದಲ್ಲಿ ರಾಜಕೀಯ ಚರ್ಚೆ ಆರಂಭವಾಗಿದೆ. 

Advertisement

ವಿಧಾನಸಭೆ ಮೀಸಲುಮತ ಕ್ಷೇತ್ರವಾಗಿರುವ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಭಿನ್ನಮತ ಹೊಗೆಯಾಡುತ್ತಿದೆ. ನಾಲ್ಕು ವರ್ಷ ಮೌನ ವಹಿಸಿ ವೇದಿಕೆ ಹಂಚಿಕೊಂಡಿದ್ದ ವಾಡಿ ಬ್ಲಾಕ್‌ ಕಾಂಗ್ರೆಸ್‌ನ ಏಳು ಜನ ಹಿರಿಯ ಮುಖಂಡರು, ಏಕಾಏಕಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮೂಲಕ ಶಾಖ್‌ ನೀಡಿದ್ದಾರೆ.

ನಾಲವಾರ ಮತ್ತು ರಾವೂರ ವಲಯದ ರಾಜಕೀಯದ ಮೇಲೆ ಹಿಡಿತ ಹೊಂದಿದ್ದ ಪ್ರಭಾವಿ ನಾಯಕರುಗಳಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶ್ರೀನಿವಾಸ ಸಗರ, ಮಲ್ಲಣ್ಣಗೌಡ ಪೊಲೀಸ್‌ ಪಾಟೀಲ, ಭೀಮರೆಡ್ಡಿಗೌಡ ಪಾಟೀಲ ಕುರಾಳ, ಶಿವುರೆಡ್ಡಿ ಪೊಲೀಸ್‌ ಪಾಟೀಲ, ಶಶಿಕಾಂತ
ಪಾಟೀಲ ಭಂಕೂರ, ಸಾಯಬಣ್ಣ ಅಡ್ಡೇಶಿ, ವಿಶ್ವನಾಥ ಮಾಸ್ತಾರ ಬೆಳಗುಂಪಾ ಅವರ ರಾಜೀನಾಮೆ ಪ್ರಹಸನದಿಂದ ಕಾಂಗ್ರೆಸ್‌ನಲ್ಲಿ ಆಘಾತ ಸೃಷ್ಟಿಯಾಗಿದ್ದರೆ, ಕಮಲ ಪಾಳೆಯದ ನಾಯಕರ ಮುಖ ಅರಳಿ ನಿಂತಿದೆ. ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಮಾಜಿ ಸಚಿವ ಬಿಜೆಪಿಯ ಜನಾರ್ಧನ ರೆಡ್ಡಿ ಅವರು ರೆಡ್ಡಿ ಸಮಾಜವನ್ನು ಸಂಘಟಿಸುವ ನೆಪದಲ್ಲಿ ಕೈ ಪಕ್ಷದ ಮುಖಂಡರಿಗೆ ಗಾಳ ಹಾಕಿದರೇ ಎನ್ನುವ ಅನುಮಾನದ ಚರ್ಚೆಗಳು ಕೇಳಿಬರುತ್ತಿವೆ.

ಈ ಮುಖಂಡರುಗಳ ರಾಜೀನಾಮೆ ಅಂಗೀಕಾರವಾಗುವ ಮುಂಚೆಯೇ ಅತೃಪ್ತ ನಾಯಕರಿಗೆ ಬಿಜೆಪಿಯಿಂದ ಬುಲಾವ್‌ ಬಂದಿದ್ದು, ಇವರೊಂದಿಗೆ ಇನ್ನಷ್ಟು ಜನ ಮುಖಂಡರು ಹಾಗೂ ಕಾರ್ಯಕರ್ತರುಪಕ್ಷ ತೊರೆಯಲಿದ್ದಾರೆ ಎಂಬ ಗುಪ್ತ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಕೈ ಕೊಟ್ಟ ನಾಯಕರಿಗೆ ಕಮಲ ಪಟ್ಟ ಕಟ್ಟಲು ಬಿಜೆಪಿ ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್‌ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗಿದ್ದು, ನಮ್ಮ ಎದುರಾಳಿ ಯಾರೂ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ಲೆಕ್ಕಾಚಾರ ಹಾಕುತ್ತಿರುವ ಸಂದರ್ಭದಲ್ಲಿಯೇ ರಾಜೀನಾಮೆ ಎಂಬ ಸುಂಟರಗಾಳಿ ಬೀಸಿ ಗರಬಡಿದಂತಾಗಿದೆ. ಕಾಂಗ್ರೆಸ್‌ಗೆ ಸಂಕಟದ ದಿನಗಳು ಎದುರಾಗುತ್ತಿವೆ ಎಂಬ ಚರ್ಚೆ ಕ್ಷೇತ್ರದ ಜನರಲ್ಲಿ ಬಿರುಸಿನಿಂದ ನಡೆದಿದೆ.

ಮುಖಂಡರ ಮನವೊಲಿಸುವೆವು

Advertisement

ಪಕ್ಷದ ನಾಯಕರು ಹೀಗೆ ದಿಢೀರ್‌ ರಾಜೀನಾಮೆ ಸಲ್ಲಿಸಿರುವುದು ನಿಜಕ್ಕೂ ನನಗೆ ಆಶ್ಚರ್ಯ ತರಿಸಿದೆ. ಅಸಮಾಧಾನ ಹಾಗೂ ಅತೃಪ್ತಿಯಿದ್ದರೆ
ಅದನ್ನು ನನ್ನ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದಾಗಿತ್ತು. ನೋವು ಹೇಳಿಕೊಳ್ಳದೆ ರಾಜೀನಾಮೆಗೆ ಮುಂದಾಗಿದ್ದು ನೋವು ತರಿಸಿದೆ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಯಾವತ್ತೂ ಕೈಬಿಡುವುದಿಲ್ಲ. ಅವರ ಮನೆಗಳಿಗೆ ಭೇಟಿ ನೀಡಿ ಅವರ ಮನವೊಲಿಸುವ ಮೂಲಕ ಅವರನ್ನು ಪಕ್ಷದಲ್ಲಿಯೇಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ.
 ಸೈಯ್ಯದ್‌ ಮಹೆಮೂದ್‌ ಸಾಹೇಬ, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌

ಬಿಜೆಪಿಗೆ ಸ್ವಾಗತ: ಕಾಂಗ್ರೆಸ್‌ ಪಕ್ಷದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಆ ಪಕ್ಷದಲ್ಲಿ ಹಿರಿಯರಿಗೆ ಮತ್ತು ನಿಷ್ಠಾವಂತರಿಗೆ ಬೆಲೆ ಇಲ್ಲ ಎಂಬುದೇ ಅತೃಪ್ತಿಗೆ ಕಾರಣ ಎನ್ನಲಾಗಿದೆ. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಈ ಕುರಿತು ಪಕ್ಷದ ಪ್ರಮುಖರು ನಿರ್ಣಯ
ಕೈಗೊಳ್ಳಲಿದ್ದಾರೆ. 
ವಾಲ್ಮೀಕಿ ನಾಯಕ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next