Advertisement
ಜು.12ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನ ಪ್ರಕಟವಾಗುತ್ತಿದ್ದಂತೆ ಬಿಜೆಪಿಯು ಯೋಜಿತ ರೀತಿಯಲ್ಲೇ ಸಜ್ಜಾಗಿತ್ತು. ಆಡಳಿತ ಪಕ್ಷಗಳ 15 ಶಾಸಕರ ರಾಜೀನಾಮೆ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ಶಾಸಕರು, ಇಡೀ ಅಧಿವೇಶನ ಇದೇ ವಿಚಾರದ ಬಗ್ಗೆ ಚರ್ಚೆಗೆ ಸೀಮಿತವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
Related Articles
Advertisement
ಪಕ್ಷದ 105 ಶಾಸಕರ ಪೈಕಿ ಯಾರೊಬ್ಬರು ಗೈರಾಗದಂತೆ ಎಚ್ಚರ ವಹಿಸಿದ ಬಿಜೆಪಿ, ಅಧಿವೇಶನದುದ್ದಕ್ಕೂ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿಗೊಳಿಸಿ ಅದನ್ನು ಅಚ್ಚುಕಟ್ಟಾಗಿ ಪಾಲಿಸಿತು. ಮುಖ್ಯಮಂತ್ರಿಗಳು ಜು.18ರಂದು ವಿಶ್ವಾಸಮತ ಯಾಚಿಸುವುದಾಗಿ ಹೇಳಿದರೂ ನಂತರವೂ ವಿಳಂಬವಾಗಿದ್ದರಿಂದ ಸೋಮವಾರ ಮಧ್ಯರಾತ್ರಿ 11.45ರವರೆಗೆ ಸದನ ಮುಂದುವರಿಯಿತು.
ಎಷ್ಟೇ ಹೊತ್ತಾದರೂ ಮುಗಿಸುವಂತೆ ಯಡಿಯೂರಪ್ಪ ಪಟ್ಟು ಹಿಡಿದರು. ಕೊನೆಗೆ ಸ್ಪೀಕರ್ ಮಂಗಳವಾರ ಸಂಜೆ 6 ಗಂಟೆ ಹೊತ್ತಿಗೆ ಮತಕ್ಕೆ ಹಾಕುವ ಭರವಸೆ ನೀಡಿದರು. ಅಲ್ಲಿಗೆ ಬಿಜೆಪಿಯ ಕಾರ್ಯತಂತ್ರ ಬಹುತೇಕ ಯಶಸ್ವಿಯಾದಂತಾಗಿತ್ತು. ಮಂಗಳವಾರದ ಕಲಾಪದಲ್ಲೂ ಬಿಜೆಪಿ ಶಾಸಕರು ಮೌನವಾಗಿಯೇ ಇದ್ದರು. ಮತದಾನ ಪ್ರಕ್ರಿಯೆ ನಡೆಯುವ ಹೊತ್ತಿಗೆ ಎಲ್ಲ ಶಾಸಕರು ಸದನದಲ್ಲಿರುವಂತೆ ನೋಡಿಕೊಳ್ಳುವಲ್ಲಿಯೂ ಎಚ್ಚರ ವಹಿಸಿತ್ತು.
ಬಿಜೆಪಿ ಕಚೇರಿ, ಮೊಗಸಾಲೆಯಲ್ಲಿ ಹತ್ತಾರು ಮಂದಿಯನ್ನಿರಿಸಿ ಯಾವ ಶಾಸಕರೂ ಹೊರಗುಳಿಯದಂತೆ ನೋಡಿಕೊಂಡಿತು. ಮುಖ್ಯಮಂತ್ರಿಗಳು ಮಂಡಿಸಿದ್ದ ವಿಶ್ವಾಸ ಮತ ನಿರ್ಣಯ ಬಿದ್ದು ಹೋಗುತ್ತಿದ್ದಂತೆ ಬಿಜೆಪಿ ನಾಯಕರು ಗೆಲುವಿನ ನಗೆ ಬೀರಿದರು.
ನಾಯಕರಲ್ಲಿ ಸಂತಸ: ಸ್ಪೀಕರ್ ರಮೇಶ್ ಕುಮಾರ್ ಅವರು ಮುಖ್ಯಮಂತ್ರಿಗಳ ವಿಶ್ವಾಸ ಮತ ನಿರ್ಣಯ ಬಿದ್ದು ಹೋಗಿದೆ ಎಂದು ಪ್ರಕಟಿಸುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ಸಂಭ್ರಮ ಮನೆ ಮಾಡಿತು. ಬಳಿಕ, ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಬಳಿಕ ಬಿಜೆಪಿ ಶಾಸಕರೆಲ್ಲಾ ಯಡಿಯೂರಪ್ಪ ಅವರನ್ನು ಸುತ್ತುವರಿದು ಅಭಿನಂದನೆ ಸಲ್ಲಿಸಿದರು. ಬಳಿಕ ಯಡಿಯೂರಪ್ಪ ಅವರು ಗೆಲುವಿನ ಸಂಕೇತ ತೋರಿ ಕೈಮುಗಿದರು. ಸದನದಿಂದ ಹೊರಗೆ ಬರುತ್ತಿದ್ದಂತೆ ಯಡಿಯೂರಪ್ಪ ಅವರು ಸಹಾಯಕರಿಗೆ ಸಿಹಿ ತರಿಸಿ ಹಂಚುವಂತೆ ಸೂಚಿಸಿದರು.
* ಎಂ. ಕೀರ್ತಿಪ್ರಸಾದ್