ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ ದತ್ತ ಪೀಠ ವಿವಾದವನ್ನು ಪರಿಹರಿಸುವಂತೆ ಬಿಜೆಪಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.
ಮಾಜಿ ಸಚಿವರಾದ ಸಿ.ಟಿ. ರವಿ ಹಾಗೂ ಜೀವರಾಜ್ ಅವರ ನೇತೃತ್ವದ ನಿಯೋಗ ಮಂಗಳವಾರ ಭೇಟಿ ಮಾಡಿ, ಸುಪ್ರೀಂ ಕೊರ್ಟ್ ಸೂಚನೆಯಂತೆ ಮೇ 9 ರೊಳಗೆ ದತ್ತ ಪೀಠ ವಿವಾದವನ್ನು ಬಗೆ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದತ್ತ ಪೀಠ ಹಾಗೂ ಬಾಬಾ ಬುಡನ್‌ಗಿರಿ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡುವುದು ಹಾಗೂ ರಾಜ್ಯ ಸರ್ಕಾರ ರಚಿಸಿರುವ ಸಂಪುಟ ಉಪ ಸಮಿತಿಯ ಮುಂದೆ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸುವಂತೆ ಕೋರಿದರು.
ನಂತರ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ದತ್ತ ಪೀಠ ಮತ್ತು ಬಾಬಾ ಬುಡನ್‌ಗಿರಿ ಎರಡೂ ಸ್ಥಳಗಳೂ ಬೇರೆ ಬೇರೆ ಎನ್ನುವುದನ್ನು ಮುಖ್ಯಮಂತ್ರಿಗೆ ದಾಖಲೆ ಸಮೇತ ವಿವರ ನೀಡಿದ್ದೇವೆ. ಸರ್ಕಾರಿ ದಾಖಲೆಯಂತೆ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಂಡು ಎರಡೂ ಧರ್ಮದವರಿಗೂ ಪ್ರತ್ಯೇಕ ಪೂಜಾ ಸ್ಥಳ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ರಾಜಕೀಯ ದೃಷ್ಠಿಯಿಂದ ನೋಡದೇ, ನ್ಯಾಯ ಸಮ್ಮತ ತೀರ್ಮಾನ ಮಾಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಕರಣವನ್ನು ತೀರ್ಮಾನ ಮಾಡಬಹುದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು. ಆ ಸಂದರ್ಭದಲ್ಲಿ ಈ ಪ್ರಕರಣ ಕೋರ್ಟ್‌ನಲ್ಲಿತ್ತು. ಈಗ ಸುಪ್ರಿಂ ಕೊರ್ಟ್ ರಾಜ್ಯ ಸರ್ಕಾರಕ್ಕೆ ವಿವಾದ ಬಗೆ ಹರಿಸುವಂತೆ ಸೂಚನೆ ನೀಡಿದೆ.
ಹೀಗಾಗಿ ರಾಜ್ಯ ಸರ್ಕಾರ ಇದನ್ನು ಬಗೆ ಹರಿಸಬೇಕಿದೆ. ನಮ್ಮ ಮನವಿಗೆ ಮುಖ್ಯಮಂತ್ರಿ ಸ್ಪಂದಿಸುವ ವಿಶ್ವಾಸ ಇದೆ. ನಮ್ಮ ನಿರೀಕ್ಷೆ ಸುಳ್ಳಾದರೆ, ಹೋರಾಟ ಅನಿವಾರ್ಯ ಎಂದು ಸಿಟಿ ರವಿ ತಿಳಿಸಿದರು. ನಿಯೋಗದಲ್ಲಿ ಧಾರ್ಮಿಕ ಮುಖಂಡರೂ ಪಾಲ್ಗೊಂಡಿದ್ದರು. ಬಿಜೆಪಿ ನಿಯೋಗ ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದತ್ತ ಪೀಠ ವಿವಾದ ಕೋರ್ಟ್‌ನಲ್ಲಿದೆ.
ಪ್ರಕರಣದ ಬಗ್ಗೆ ಪರಿಶೀಲನೆ ಮಾಡಿ, ಕಾನೂನು ಸಲಹೆ ಪಡೆಯುತ್ತೇವೆ ಎಂದು ಹೇಳಿದರು. ದತ್ತ ಪೀಠ ವಿವಾದ ಬಗೆ ಹರಿಸುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಗೃಹ ಸಚಿವ ಪರಮೇಶ್ವರ್, ರೋಷನ್ ಬೇಗ್ ಮತ್ತು ತನ್ವೀರ್ ಸೇs… ಅವರನ್ನೊಳಗೊಂಡ ಸಂಪುಟ ಉಪ ಸಮಿತಿ ರಚನೆ ಮಾಡಿದೆ.