Advertisement

ಬರ್ತಡೇ ಪಾರ್ಟಿ ತಂದ ಆಪತ್ತು: ಇಬ್ಬರ ಬಂಧನ

11:41 AM Oct 30, 2017 | |

ಬೆಂಗಳೂರು: ಮಧ್ಯರಾತ್ರಿ ನಡುರಸ್ತೆಯಲ್ಲಿಯೇ ಬರ್ತ್‌ಡೇ ಪಾರ್ಟಿ ಆಚರಿಸಿ ಕೂಗಾಟ ನಡೆಸಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಧಮ್ಕಿ ಹಾಕಿದ ಇಬ್ಬರನ್ನು ಬ್ಯಾಡರಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ. ಸ್ಥಳೀಯ ಕೇಬಲ್‌ ಟಿವಿ ಮಾಲೀಕ ಮುರುಳಿ ಹಾಗೂ ಅಭಿಷೇಕ್‌ ಬಂಧಿತರು. ಆರೋಪಿಗಳ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಬೆದರಿಕೆ ಸಂಬಂಧ ಎಫ್ಐಆರ್‌ ದಾಖಲಾಗಿದೆ.

Advertisement

ಆಂಧ್ರಹಳ್ಳಿ ಮುಖ್ಯರಸ್ತೆಯಲ್ಲಿ ಶನಿವಾರ ತಡರಾತ್ರಿ 1ಗಂಟೆ ಸುಮಾರಿಗೆ ಮುರುಳಿ ಜನ್ಮದಿನ ಆಚರಿಸುತ್ತಿದ್ದು, ಕಾರಿನಲ್ಲಿ ಜೋರಾಗಿ ಹಾಡು ಹಾಕಿ, ಹೊರಗೆ ಪಟಾಕಿ ಸಿಡಿಸಿ ಕುಣಿಯುತ್ತಿದ್ದರು. ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂದು ಕೇಳಿದವರಿಗೆ ನಾವು ಪತ್ರಕರ್ತರು ಎಂದು ಹೇಳಿ ಬೆದರಿಸಿ ಕಳುಹಿಸಿದ್ದರು. ಹೀಗಾಗಿ ಪೇದೆಗಳಿಬ್ಬರು ಸ್ಥಳಕ್ಕೆ ಆಗಮಿಸಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಮಾತಿಗೂ ಬಗ್ಗದ ಮುರುಳಿ, ಅಭಿಷೇಕ್‌, ಪ್ರಶಾಂತ್‌, ನಮಗೆ ಯಾಕೆ ಹೇಳ್ತೀರಾ? ನಮ್ಮನ್ನು ಎದುರು ಹಾಕಿಕೊಂಡರೆ ನಿಮ್ಮ ಡ್ನೂಟಿ ಇರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಬ್ಯಾಡರಹಳ್ಳಿ ಠಾಣೆ ಇನ್ಸಪೆಕ್ಟರ್‌ ಹಾಗೂ ಪಿಎಸ್‌ಐ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಬಂಧಿಸಿದ್ದು, ಪ್ರಶಾಂತ್‌ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪತ್ರಕರ್ತರು ಎಂದು ಹೇಳಿಕೊಂಡು ಕೆಲವರ ಬಳಿ ಹಣ ಸುಲಿಗೆ ಮಾಡಿರುವ ಆರೋಪವಿದೆ. ಹಲವು ತಿಂಗಳುಗಳಿಂದ ಬಲವಂತದಲ್ಲಿ ಬೆದರಿಸಿ ಹಣ ಪಡೆದುಕೊಂಡ ಬಗ್ಗೆ ಕೆಲಠಾಣೆಗಳಲ್ಲಿ ದೂರುಗಳು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next