ಹಾರಾಡಿ ಶೈಲಿಯ ಕಲಾವಿದನಾಗಿ ಯಕ್ಷಗಾನ ಕಲೆಗೂ ಮೇಳಕ್ಕೂ ಘನತೆಯನ್ನು ತಂದಿತ್ತ ಹಾರಾಡಿ ಕುಷ್ಟ ಗಾಣಿಗರು ಬದುಕಿದ್ದರೆ ಅವರಿಗೀಗ ಪ್ರಾಯ ನೂರರ ಆಸುಪಾಸು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಯಶಸ್ವಿ ಕಲಾವೃಂದ(ರಿ.) ತೆಕ್ಕಟ್ಟೆ ಜಂಟಿಯಾಗಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಿದ್ದು, ಮೇ 20ರಂದು ತೆಕ್ಕಟ್ಟೆ ಹಯಗ್ರೀವ ಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಗೋಷ್ಠಿಗಳು ಮತ್ತು ವಿವಿಧ ಕಲಾ ಪ್ರಕಾರಗಳ ಪ್ರದರ್ಶನವಿದೆ.ಸಂಜೆ ನಡುತಿಟ್ಟಿನ ಕಲಾವಿದರಿಂದ ಸುದನ್ವ ಕಾಳಗ ಯಕ್ಷಗಾನವಿದೆ.
ಹಾರಾಡಿ ಎನ್ನುವ ಮೂರಕ್ಷರವು ಯಕ್ಷಗಾನ ಪ್ರಿಯರ ಮೈರೋಮಾಂಚನಗೊಳ್ಳುವಷ್ಟು ಪ್ರಸಿದ್ಧವಾಗಿದೆ. ಯಕ್ಷಗಾನಕ್ಕೆ ಹೊಸ ಶೈಲಿಯನ್ನು ಸೃಷ್ಟಿಸಿದ ಕೀರ್ತಿ ಈ ಮನೆತನಕ್ಕಿದೆ.ಈ ಮನೆತನದ ಕುಷ್ಟ ಗಾಣಿಗರು ಬದುಕಿರುವಾಗಲೇ ದಂತಕಥೆಯಾದವರು. ಇವರು ಮೇಳಕ್ಕೆ ಸೇರಿದಾಗ ಈ ಮನೆತನದ ಇಪ್ಪತ್ತು ಕಲಾವಿದರು ರಂಗಸ್ಥಳದಲ್ಲಿದ್ದರು. ಹಾಗಾಗಿ ರಂಗಸ್ಥಳವೇ ಇವರ ಗುರುಕುಲ.ಇವರ ಮನೆತನವೇ ಯಕ್ಷಗಾನ ಕುಟುಂಬ. ಇವರ ಉದ್ಯೋಗವೂ ಕೂಡ ಅದೇ ಆಗಿತ್ತು. ಕುಷ್ಟ ಗಾಣಿಗರೆಂದೇ ಖ್ಯಾತಿವೆತ್ತ ಹಾರಾಡಿ ಕೃಷ್ಣ ಗಾಣಿಗರ ತಿರುಗಾಟದ ಕಾಲ ಯಕ್ಷಗಾನದ ಸುವರ್ಣಯುಗವಾಗಿತ್ತು. ಹಾರಾಡಿಯಲ್ಲಿ 1916ರಲ್ಲಿ ಜನಿಸಿದ ಕುಷ್ಟ ಗಾಣಿಗರು ಶಾಲೆಯ ಮೆಟ್ಟಿಲನ್ನೂ ಏರಿದವರಲ್ಲ. ಆಗಿನ ಹಿರಿಯ ಕಲಾವಿದರಂತೆ ಸುತ್ತಮುತ್ತಲೂ ಮನೆತನದಲ್ಲೂ ಯಕ್ಷಗಾನದ ವಾತಾವರಣ ದಟ್ಟವಾಗಿದ್ದರಿಂದ ತಮ್ಮ ಮಾವ ಹಾರಾಡಿ ರಾಮ ಗಾಣಿಗರೊಂದಿಗೆ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ದಿಢೀರ್ ಪುರುಷವೇಷದಾರಿಯಾಗದೇ ಕೋಡಂಗಿ, ಬಾಲಗೋಪಾಲ, ಪೀಠಿಕಾ ವೇಷ, ಒಡ್ಡೋಲಗ ಹೀಗೆ ಹಂತ ಹಂತವಾಗಿ ಮೇಲೇರಿ ಪುರುಷ ವೇಷದಾರಿಯಾಗಿ ಮೆರೆದವರು.ರಾಮ ಗಾಣಿಗರ ಎರಡನೇ ವೇಷ, ಕುಷ್ಟ ಗಾಣಿಗರ ಪುರುಷವೇಷ, ನಾರಾಯಣ ಗಾಣಿಗರ ಸ್ತ್ರೀವೇಷ, ಮಹಾಬಲ ಗಾಣಿಗರ ಮುಂಡಾಸುವೇಷ ಮಂದಾರ್ತಿ ಮೇಳಕ್ಕೆ ಕೀರ್ತಿ ಘನತೆಯನ್ನು ತಂದಿತ್ತು. ಕರ್ಣಾರ್ಜುನ ಕಾಳಗದಲ್ಲಿ ರಾಮ ಗಾಣಿಗರ ಕರ್ಣನಿಗೆ ಕುಷ್ಟ ಗಾಣಿಗರ ಅರ್ಜುನ, ನಾರಾಯಣ ಗಾಣಿಗರ ಕೃಷ್ಣ ,ವಂಡ್ಸೆ ಮುತ್ತ ಗಾಣಿಗರ ಶಲ್ಯ ಒಂದು ಅಪೂರ್ವ ಜೋಡಿಯಾಗಿತ್ತು.ಸೌಕೂರು ಮತ್ತು ಅಮೃತೇಶ್ವರಿ ಮೇಳದಲ್ಲೂ ಸ್ವಲ್ಪ ಸಮಯ ಇದ್ದ ಕುಷ್ಟ ಗಾಣಿಗರು ಜೀವಿತದ ಕೊನೆಯವರಿಗೂ ಮಂದಾರ್ತಿ ಮೇಳವಂದರಲ್ಲೇ ಸೇವೆ ಸಲ್ಲಿಸಿದ್ದರು.
ಮಂದಾರ್ತಿ ಮೇಳದಲ್ಲಿ ಗಾಣಿಗರು ಹೆಚ್ಚು ಪ್ರಸಿದ್ದರಾದದ್ದು ಕಟ್ಟು ಮೀಸೆಯೊಂದಿಗೆ ಅಟ್ಟೆ ನಿರ್ಮಿತ ಕೇದಲೆಮುಂದಲೆಯೊಂದಿಗೆ ಕಂಗೊಳಿಸುವ ಪುರುಷವೇಷದಲ್ಲಿ. ಅಚ್ಚುಕಟ್ಟಿನ ರಂಗನಡೆ, ಚುರುಕಿನ ನಾಟ್ಯ ವಿಶಿಷ್ಟವಾದ ಹಾರಾಡಿ ಶೈಲಿಯ ಒಂಟಿ ಕಾಲಿನಲ್ಲಿ ಬಿಲ್ಲುಬಾಣ ಸೊಂಟಕ್ಕೆ ತಾಗಿಸುವ ನಿಲುವು,ವೈಶಿಷ್ಟ್ಯಪೂರ್ಣ ನಡೆ,ಪದ್ಯದ ಎತ್ತುಗಡೆ,ಕೈತಟ್ಟಿ ಮಿಂಚಿನಂತೆ ಸೆಳೆಯುವ,ಎಡಗೈ ಮೇಲೆ ಹೋದಾಗ ಎಡಗಣ್ಣು ಅದೇ ಭಂಗಿಯಲ್ಲಿ ತಿರುಗುವ ಅಪೂರ್ವವಾದ ಹಾರಾಡಿ ಶೈಲಿಯ ಏಕತಾಳದ ಪದ್ಯಗಳ ಕಿರುಹೆಜ್ಜೆ ,” ದೀಮ್ ತದ್ದೀಂ ದಿಮಿತದೀಂ’ ನಡೆಯ ಪದ್ಯಗಳ ಅಪೂರ್ವ ಕಿರುಹೆಜ್ಜೆ ಗಾಣಿಗರ ಸಂಪತ್ತು.ಅಪೂರ್ವವಾದ ಶ್ರುತಿಬದ್ದತೆ ಅವರ ಇನ್ನೊಂದು ಧನಾತ್ಮಕ ಅಂಶ.ಅರ್ಜುನ, ಪುಷ್ಕಳ, ವಿಭೀಷಣ, ಪರಶುರಾಮ,ದೇವವ್ರತ,ಭರತ ಮುಂತಾದವುಗಳು ಗಾಣಿಗರಿಗೆ ಆ ಕಾಲದಲ್ಲಿ ಖ್ಯಾತಿ ತಂದಿತ್ತ ಪಾತ್ರಗಳು. ಕೃಷ್ಣಾರ್ಜುನ ಕಾಳಗದಲ್ಲಿ ಹಾರಾಡಿ ರಾಮಗಾಣಿಗರ ಅರ್ಜುನನಿಗೆ ಕುಷ್ಟ ಗಾಣಿಗರ ಕೃಷ್ಣ ,ಜಂಬೂರು ರಾಮಚಂದ್ರ ಶ್ಯಾನುಭೋಗರ ಅಭಿಮನ್ಯು ಸಹ ಆ ಕಾಲದ ಅಪೂರ್ವ ಜೋಡಿಯಾಗಿತ್ತು. ಯಾವುದೇ ಕಲ್ಯಾಣ ಪ್ರಸಂಗದಲ್ಲಿ ಬರುವ ರಾಮ ಗಾಣಿಗರ ಬಲರಾಮನಿಗೆ ಕುಷ್ಟ ಗಾಣಿಗರ ಕೃಷ್ಣ ಸಹ ಮರೆಯಲಾಗದ ಜೋಡಿಯಾಗಿತ್ತಂತೆ.
ಸಂಪ್ರದಾಯವೆಂದರೆ ಏನೆಂದು ತಿಳಿಯಲು ಗಾಣಿಗರ ವೇಷ ನೋಡಬೇಕು ಅನ್ನುವುದು ವಿಮರ್ಶಕರ ಅಭಿಪ್ರಾಯವಾಗಿತ್ತು.ಕುಷ್ಟ ಗಾಣಿಗರ ಛಾಯೆಯನ್ನು ಮುಂದಿನ ತಲೆಮಾರಿಗೆ ದಾಟಿಸಿದವರಲ್ಲಿ ದಿ. ಶಿರಿಯಾರ ಮಂಜು ನಾಯ್ಕ, ದಿ. ಮೊಳಹಳ್ಳಿ ಹೆರಿಯ ನಾಯ್ಕರು, ಐರೋಡಿ ಗೋವಿಂದಪ್ಪ ನೀಲಾವರ ಮಹಾಬಲ ಶೆಟ್ಟಿ ಕೋಟ ಸುರೇಶ,ಐರಬೈಲು ಆನಂದ ಶೆಟ್ಟಿ ಮತ್ತು ಹಾರಾಡಿ ಸರ್ವೋತ್ತಮ ಗಾಣಿಗ ಮುಂತಾದವರು ಪ್ರಮುಖರಾಗಿ ನಿಲ್ಲುತ್ತಾರೆ.
ಇಂತಹ ಉತ್ಕೃಷ್ಟ ಕಲಾವಿದನ ಜೀವನ ಸಾಧನೆ ಎಲ್ಲಿಯೂ ದಾಖಲಾಗದಿದ್ದದ್ದು ದೌರ್ಭಾಗ್ಯ. ಜೀವಂತ ಇರುವಾಗಲೇ ಆಗಬೇಕಿದ್ದ ಅವರ ಕುಣಿತದ ಶೈಲಿ,ಒಂಟಿ ಕಾಲಲ್ಲಿ ಬಿಲ್ಲು ಹಿಡಿದು ನಿಲ್ಲುವ ಅವರ ನಡುತಿಟ್ಟಿನ ವಿಶಿಷ್ಟ ಶೈಲಿ, ಬಡಗುತಿಟ್ಟಿನಲ್ಲಿ ಛಾಲ್ತಿ ಇರುವ ನಾಮ ಮುಖವರ್ಣಿಕೆ ಕೇದಗೆ ಮುಂದಲೆ ಕಟ್ಟೋಣ ಕಟ್ಟು ಮೀಸೆಗಳ ವೇಷಗಳನ್ನು ದಾಖಲಿಕರಣಮಾಡಿ ಪುಸ್ತಕರೂಪವಾಗಿ ಪ್ರಕಟಿಸುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯೋಜನೆ ಯೋಗ್ಯವಾದದ್ದು.
ಉದಯಕುಮಾರ್