Advertisement

ದ್ವಿತೀಯ ಮಹಾ ಯುದ್ಧದ ಬಳಿಕದ ಅತೀ ದೊಡ್ಡ ಸಂಕಷ್ಟ

12:52 PM Apr 02, 2020 | Suhan S |

ನ್ಯೂಯಾರ್ಕ್‌: ಜಗತ್ತನ್ನು ಕಾಡುತ್ತಿರುವ ಕೋವಿಡ್ 19 ವೈರಸ್‌ ಎರಡನೆಯ ಮಹಾಯುದ್ಧದ ಅನಂತರ ಜಗತ್ತಿಗೆ ದೊಡ್ಡ ಸವಾಲಾಗಿದೆ ಎಂದು ಯುಎನ್‌ ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್‌ ಎಚ್ಚರಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದರು.

Advertisement

ಸಾವಿನ ಸಂಖ್ಯೆ 42,000 ಸಾವಿರಕ್ಕೂ ಮಿಕ್ಕಿದ್ದು ಜಗತ್ತನ್ನು ಗಾಬರಿಯನ್ನಾಗಿಸಿದೆ. ಅಮೆರಿಕದಲ್ಲಿ ಶೇ. 75ರಷ್ಟು ಮಂದಿ ಈಗ ಲಾಕ್‌ಡೌನ್‌ ಅಡಿಯಲ್ಲಿದ್ದಾರೆ ಎಂದ ಅವರು, ವಿಶ್ವಸಂಸ್ಥೆ ಸ್ಥಾಪನೆಯಾದ ಬಳಿಕ ಜಗತ್ತು ಇಂತಹ ಸಮಸ್ಯೆಯನ್ನು ಕಂಡಿರಲಿಲ್ಲ. ಎರಡನೇ ವಿಶ್ವ ಯುದ್ಧದ ಬಳಿಕ ಜಗತ್ತನ್ನು ಒಟ್ಟುಗೂಡಿಸಲು ವಿಶ್ವಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇದು ಅಂತಾರಾಷ್ಟ್ರೀಯ ಶಾಂತಿಯನ್ನು ಕಾಯ್ದುಕೊಳ್ಳುತ್ತಾ ಬಂದಿತ್ತು. ತೃತೀಯ ಮಹಾಯುದ್ಧವನ್ನು ತಡೆಗಟ್ಟುವುದು ಇದರ ಪ್ರಮುಖ ಧ್ಯೇಯವಾಗಿತ್ತು ಎಂದರು.

25 ಮಿಲಿಯ ಉದ್ಯೋಗ ನಷ್ಟ : ವಿಶ್ವಸಂಸ್ಥೆಯ ವರದಿಯಂತೆ ಕೋವಿಡ್ 19  ವೈರಸ್‌ ಬಳಿಕ ಜಗತ್ತು ಸ್ತಬ್ಧವಾಗಿದ್ದು, ಯಾವುದೇ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿಲ್ಲ. ಇದರಿಂದ ವಿತ್ತೀಯ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತಂತೆ ವಿಶ್ವಸಂಸ್ಥೆ ವರದಿ ತಯಾರಿಸಿದ್ದು, ಅಂದಾಜು 25 ಮಿಲಿಯ ಉದ್ಯೋಗ ನಷ್ಟ ವಾಗಲಿದೆ. ಎಫ್‌ಡಿಐ ಅಥವಾ ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ಶೇ. 40ರಷ್ಟು ಕುಂಠಿತವಾಗಲಿದೆ ಎಂದಿದ್ದಾರೆ. ಇವೆಲ್ಲವೂ ಭಾರತಕ್ಕೂ ಅನ್ವಯವಾಗಲಿದೆ. ದೇಶದಲ್ಲಿ ಮೊದಲೇ ನಿರುದ್ಯೋಗ ಪ್ರಮಾಣ ಹೆಚ್ಚು ಇದ್ದು, ಮತ್ತಷ್ಟು ಅಪಾಯ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಏಳು ದಿನಗಳಲ್ಲಿ ಸಂಖ್ಯೆಗಳು ದ್ವಿಗುಣಗೊಳ್ಳುವುದರೊಂದಿಗೆ ಜಗತ್ತಿನಾದ್ಯಂತ ಕೋವಿಡ್ 19 ಪ್ರಕರಣ ಆತಂಕಕಾರಿಯಾಗಿ ಬದಲಾಗುತ್ತಿದೆ. ಅಲ್ಲದೆ, ಈ ಅವಧಿಯಲ್ಲಿ ಸಾವಿನ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮಾರ್ಚ್‌ 24ರಲ್ಲಿ ಜಾಗತಿಕವಾಗಿ ಪ್ರಕರಣಗಳ ಸಂಖ್ಯೆ 4 ಲಕ್ಷ ಇದ್ದರೆ ಅದರ ಬಳಿಕ 4 ಲಕ್ಷ ಹೆಚ್ಚಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅಮೆರಿಕನ್ನರು ಮುಂದಿನ ಎರಡು ವಾರಗಳು ಕಠಿಣವಾಗಿರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next