Advertisement

ಅಭಿವೃದ್ಧಿ ಪಥದಲ್ಲಿದ್ದರೂ ಚರಂಡಿ- ಒಳಚರಂಡಿ ಕೊರತೆಯೇ ದೊಡ್ಡ ಸಮಸ್ಯೆ!

10:10 PM Oct 19, 2019 | mahesh |

ಮಹಾನಗರ: ಮನಪಾ ವ್ಯಾಪ್ತಿಯ ಅಂಚಿನಲ್ಲಿ ರುವ ಕಣ್ಣೂರು ವಾರ್ಡ್‌ ನಗರ ಹಾಗೂ ಗ್ರಾಮೀಣ ಪ್ರದೇಶದ ಸ್ವರೂಪವನ್ನು ಒಳಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ 75ರ ಇಕ್ಕೆಲಗಳ ಪ್ರದೇಶ ಇದಾಗಿದೆ. ಪಾಲಿಕೆಯಲ್ಲಿ 52ನೇ ವಾರ್ಡ್‌ ಆಗಿ ಗುರುತಿಸಿಕೊಂಡಿರುವ ಕಣ್ಣೂರು ಗುಡ್ಡ, ತಗ್ಗು ಪ್ರದೇಶಗಳಿಂದ ಕೂಡಿದೆ.

Advertisement

ಈ ವಾರ್ಡ್‌ ಮೊದಲು ಗ್ರಾ.ಪಂ. ಆಗಿದ್ದು, ಮನಪಾ ವ್ಯಾಪ್ತಿಯ ಎರಡನೇ ಹಂತದ ವಿಸ್ತರಣೆಯಲ್ಲಿ ಪಾಲಿಕೆಗೆ ಈ ವಾರ್ಡ್‌ ಸೇರ್ಪಡೆಗೊಂಡಿದೆ. ಪ್ರಸಿದ್ಧ ಕಣ್ಣೂರು ಮಸೀದಿ, ವೈದ್ಯನಾಥ ದೈವಸ್ಥಾನ ಈ ವಾರ್ಡ್‌ ನಲ್ಲಿದೆ. ಬಿಎಂಡಬ್ಲ್ಯು, ಲ್ಯಾನ್ಡ್ ರೋವರ್‌, ಮರ್ಸಿಡಿಸ್‌ ಬೆನ್ಜ್ ಮುಂತಾದ ಐಷಾರಾಮಿ ಕಾರುಗಳ ಶೋರೂಂ ಇಲ್ಲಿದ್ದು, ಮೋಟಾರು ವಾಹನ ಉದ್ಯಮದ ಹಬ್‌ ಆಗಿಯೂ ಕ್ಷೇತ್ರ ಗುರುತಿಸಿ ಕೊಳ್ಳುತ್ತಿದೆ.

ಮಹಾನಗರ ಪಾಲಿಕೆಗೆ ಸೇರ್ಪಡೆಯಾದರೂ ಕಣ್ಣೂರು ವಾರ್ಡ್‌ಗೆ ಇನ್ನೂ ಒಳ ಚರಂಡಿ ವ್ಯವಸ್ಥೆ ಬಂದಿಲ್ಲ. ಮಳೆ ನೀರು ಹರಿದು ಹೋಗಲು ಬಹುತೇಕ ಕಡೆ ಚರಂಡಿ ವ್ಯವಸ್ಥೆಯ ಕೊರತೆ ಕಾಡುತ್ತಿದೆ. ಜತೆಗೆ ಪಡೀಲ್‌ನಲ್ಲಿ ರೈಲ್ವೇ ಇನ್ನೊಂದು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.

5 ವರ್ಷಗಳಲ್ಲಿ ಮಹಾನಗರ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 5.92 ಕೋಟಿ ರೂ. ಬಿಡುಗಡೆಯಾಗಿದೆ. ಕಣ್ಣೂರು ವಾರ್ಡ್‌ನಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಿದೆ. ಬಹಳಷ್ಟು ಕಡೆ ರಸ್ತೆಗಳು ಆಗಿವೆ. ಆದರೆ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗದಿರುವುದು ಮಳೆಗಾಲ ದಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಗರದೊಳಗೆ ಒಳಚರಂಡಿ ನಿರ್ಮಾಣವಾಗಿದೆ. ಆದರೆ ಮಹಾನಗರ ಪಾಲಿಕೆಯಲ್ಲಿದ್ದರೂ ನಮ್ಮ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಯೋರ್ವರು.

ಪ್ರಮುಖ ಸಮಸ್ಯೆಗಳು
ಬಳ್ಳೂರುಗುಡ್ಡ-ದಯಾಂಬುನಲ್ಲಿ ರೈಲ್ವೇ ಹಳಿಯಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ. ಇಲ್ಲಿ ಅಂಡರ್‌ಪಾಸ್‌ ಅಥವಾ ಓವರ್‌ಪಾಸ್‌ ನಿರ್ಮಾಣವಾಗಬೇಕಾಗಿದೆ, ಒಳಚರಂಡಿ ವ್ಯವಸ್ಥೆ ಆಗಿಲ್ಲ, ಹೆಚ್ಚಿನ ಅನುದಾನದ ಅಗತ್ಯವಿದೆ.

Advertisement

ಕ್ಷೇತ್ರದ ಮಹತ್ತರ ಸಮಸ್ಯೆ
ಕಇಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಆದ್ಯತೆ ನೀಡಿಲ್ಲ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಣ್ಣೂರು ಪ್ರದೇಶಕ್ಕೆ ಇದು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ನೇತ್ರಾವತಿ ನದಿ ಸೇರುತ್ತಿದೆ. ಎಡಿಬಿ 2ನೇ ಯೋಜನೆಯಲ್ಲಾದರೂ ಕಣ್ಣೂರು ವಾರ್ಡ್‌ನ್ನು ಒಳಚರಂಡಿ ವ್ಯವಸ್ಥೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದ್ದರೂ ಇದಕ್ಕೆ ಮನ್ನಣೆ ಸಿಕ್ಕಿಲ್ಲ ಎಂದು ವಾರ್ಡ್‌ನ ನಿಕಟಪೂರ್ವ ಕಾರ್ಪೊರೇಟರ್‌ ಸುಧೀರ್‌ ಶೆಟ್ಟಿ ಅವರು ಹೇಳುತ್ತಾರೆ. ಇನ್ನೊಂದೆಡೆ ಮಳೆನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಪಡೀಲ್‌ ರೈಲ್ವೇ ಮೇಲ್ಸೇತುವೆ ಬಳಿಯಿಂದ ಕೊಡಕ್ಕಲ್‌ವರೆಗೆ ಸ್ವಲ್ಪ ಮಳೆ ಬಂದರೂ ನೀರು ರಸ್ತೆಯಲ್ಲಿ ನಿಂತು ಸಂಚಾರ ಸಮಸ್ಯೆ ತಲೆದೋರುತ್ತದೆ. ಅಕ್ಕಪಕ್ಕದ ಕಟ್ಟಡಗಳಿಗೂ ನೀರು ನುಗ್ಗುತ್ತದೆ.

ಪ್ರಮುಖ ಕಾಮಗಾರಿ
– ಪಾಲಿಕೆ ಹಾಗೂ ಶಾಸಕರ ನಿಧಿಯಿಂದ ಮೂರು ಅಂಗನವಾ ಡಿಗಳಿಗೆ ಸ್ವಂತಃ ಕಟ್ಟಡ ನಿರ್ಮಾಣ
– ವೀರನಗರ, ಕಣ್ಣೂರು ಸೇರಿದಂತೆ 3 ಕಡೆಗಳಲ್ಲಿ ರಂಗಮಂದಿರ ನಿರ್ಮಾಣ
– ಮನಾಲ ರಸ್ತೆ ಅಭಿವೃದ್ಧಿ
– ಪರ್ಲ- ಹೊಸಗುಡ್ಡೆ ರಸ್ತೆ ಅಭಿವೃದ್ಧಿ
– ವೀರನಗರ- ಬೆಳ್ಳಾರುಗುಡ್ಡೆ ರಸ್ತೆ ಅಭಿವೃದ್ಧಿ
– ಒಳರಸ್ತೆಗಳ ಅಭಿವೃದ್ಧಿ
– ವೀರ ನಗರ-ಕನ್ನಡಗುಡ್ಡ ರಸ್ತೆ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿ lಯೂಸುಫ್‌ ನಗರ ರಸ್ತೆ ಅಭಿವೃದ್ಧಿ
– ಬಳ್ಳೂರುಗುಡ್ಡೆ ವಿದ್ಯುತ್‌ ಸಮಸ್ಯೆ ನಿವಾರಣೆ
– ಕಣ್ಣೂರಿನಲ್ಲಿ ಆರೋಗ್ಯಕೇಂದ್ರ ಹಾಗೂ ಗ್ರಂಥಾಲಯ ಸ್ಥಾಪನೆ

ಕಣ್ಣೂರು ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕಣ್ಣೂರು ಮಸೀದಿ ಪ್ರದೇಶದಿಂದ ಆರಂಭಗೊಂಡು , ಕಣ್ಣೂರು, ಕೊಡಕ್ಕಲ್‌, ಪಡೀಲ್‌, ದರ್ಬಾಣಗುಡ್ಡೆ , ವೀರನಗರ, ಕುಚ್ಚಿಕೋಡಿ, ಬಳ್ಳೂರುಗುಡ್ಡೆ, ದಯಾಂಬು, ಬಡಿಲ,ಪರ್ಲ, ಕನ್ನಡ ಗುಡ್ಡ ಮುಂತಾದ ಪ್ರದೇಶಗಳನ್ನು ಕಣ್ಣೂರು ವಾರ್ಡ್‌ ಒಳಗೊಂಡಿದೆ.

ಒಟ್ಟು ಮತದಾರರು 6500
ನಿಕಟಪೂರ್ವ ಕಾರ್ಪೊರೇಟರ್‌-ಸುಧೀರ್‌ ಶೆಟ್ಟಿ, ಕಣ್ಣೂರು (ಬಿಜೆಪಿ)

ಇನ್ನಷ್ಟು ಅಭಿವೃದ್ಧಿ
ಕಣ್ಣೂರು ವಾರ್ಡ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿವೆ. ಮಹಾನಗರ ಪಾಲಿಕೆ ಅನುದಾನದ ಜತೆಗೆ ಶಾಸಕರ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಒಳರಸ್ತೆಗಳು ಅಭಿವೃದ್ಧಿಯಾಗಿವೆ. ಬಳ್ಳೂರುಗುಡ್ಡೆ- ದಯಾಂಬುನಲ್ಲಿ ರೈಲ್ವೇ ಅಂಡರ್‌ಪಾಸ್‌ ಅಥವಾ ಒವರ್‌ಪಾಸ್‌ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದೇನೆ. ವಾರ್ಡ್‌ ಗೆ ವ್ಯವಸ್ಥಿತವಾಗಿ ಒಳಚರಂಡಿ ವ್ಯವಸ್ಥೆ ಬರಬೇಕು. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ.
-ಸುಧೀರ್‌ ಶೆಟ್ಟಿ ,ಕಣ್ಣೂರು

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next