Advertisement

ಬೂದಿಹಾಳದಲ್ಲಿ ಬಹು ದೊಡ್ಡ ಸಮಸ್ಯೆ

12:14 PM May 19, 2019 | Team Udayavani |

ನರೇಗಲ್ಲ: ಮಾರನಬಸರಿ ಗ್ರಾಪಂ ಪ್ಯಾಪ್ತಿಗೆ ಸೇರಿದ ಬೂದಿಹಾಳ ಗ್ರಾಮದಲ್ಲಿ ಬಹು ದೊಡ್ಡ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಸರಿಪಡಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ.

Advertisement

3000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕಾಲಿಟ್ಟರೆ ಸಾಕು ಕಸಕಡ್ಡಿ ತುಂಬಿದ ಚರಂಡಿಗಳು, ವಿಲೇವಾರಿಯಾಗದ ತ್ಯಾಜ್ಯ ವಸ್ತು, ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗಳು ಕಣ್ಮುಂದೆ ಬರುತ್ತವೆ. ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದ್ದು, ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ.

13ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಾಣವಾದ ಎರಡು ಸಾರ್ವಜನಿಕ ಸಾಮೂಹಿಕ ಶೌಚಾಲಯಗಳೇನೋ ನಿರ್ಮಾಣಗೊಂಡಿವೆ. ಆದರೆ, ಅವುಗಳ ಸಮರ್ಪಕ ಬಳಕೆ ಇಲ್ಲದೇ ಇರುವುದರಿಂದ ಅಲ್ಲಿ ಕಲ್ಲು, ಮುಳ್ಳು, ಗಾಜಿನ ಬಾಟಲಿಗಳು, ಗಿಡ ಕಂಟಿಗಳು ತುಂಬಿಕೊಂಡಿವೆ. ಪುರುಷರ ಶೌಚಾಲಯವೂ ಇದೆ. ಆದರೆ, ನಿರ್ವಹಣೆ ಇಲ್ಲದೆ ಸುತ್ತಲೂ ಮುಳ್ಳು, ಕಂಟಿಗಳು ಬೆಳೆದು ಪಾಳು ಬಿದ್ದಿದೆ.

ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಸ್ವಚ್ಛತೆ ಇಲ್ಲದ ಮಹಿಳೆಯರಿಗೆ ಕಾರಣ ರಾತ್ರಿ ವೇಳೆ ಹಾವು-ಚೇಳಿನ ಭಯ ಕಾಡುತ್ತಿದೆ. ಸುತ್ತಲೂ ಸ್ವಚ್ಛತೆ ಕಾರ್ಯ ಕೈಗೊಂಡರೆ ಬಯಲು ಕಡೆಗೆ ಹೋಗುವ ಸಮಸ್ಯೆ ನಿವಾರಣೆಯಾಗುತಿತ್ತು. ಮಹಿಳೆಯರು, ಪುರುಷರು, ಚಿಕ್ಕ ಮಕ್ಕಳು, ವೃದ್ಧರು ಅಲ್ಲಲ್ಲಿ ಬಯಲು ಶೌಚಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.

ಗ್ರಾಮದ ಆಶ್ರಯ ಕಾಲೋನಿಯಲ್ಲಿ ಕೆಲ ಚರಂಡಿಗಳು ತ್ಯಾಜ್ಯ ತುಂಬಿಕೊಂಡಿವೆ. ದುರ್ನಾತ ಬೀರುತ್ತಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈವರೆಗೂ ಗ್ರಾಮ ಪಂಚಾಯಿತಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ನೀರಿನ ಮೇಲ್ತೊಟ್ಟಿ ತುಂಬಿಕೊಂಡು ರಸ್ತೆ ಮೇಲೆ ನಿತ್ಯ ನೀರು ಹರಿಯುತ್ತಿದ್ದರೂ ಗ್ರಾಪಂ ಸಿಬ್ಬಂದಿ, ಅಧಿಕಾರಿಗಳು ಗಮನ ನೀಡುತ್ತಿಲ್ಲ. ಮಳೆಗಾಲ ಆರಂಭವಾಗುವ ಮೊದಲೇ ಆಶ್ರಯ ಕಾಲೋನಿಯಲ್ಲಿ ಸಿ.ಸಿ ರಸ್ತೆ ನಿರ್ಮಿಸಬೇಕು. ಗ್ರಾಮದ ಒಳಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಬಹುತೇಕ ಕಡೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ ಮಳೆ ನೀರು ಹರಿದು ಹೋಗಲು ಜಾಗವೇ ಇಲ್ಲದಂತಹ ಸ್ಥಿತಿ ಇದೆ.

Advertisement

ಮೈದಾನದಲ್ಲೇ ಮಲಮೂತ್ರ ವಿರ್ಸಜನೆ: ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲೇ ಮಲ ಮೂತ್ರ ವಿರ್ಸಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ಕೊರತೆಯಿಂದ ಶಾಲೆಯೇ ಅನಿರ್ವಾಯವಾಗಿದೆ. ಶಾಲೆ ಸುತ್ತ ಹಾಕಿರುವ ತಿಪ್ಪೆ ಗುಂಡಿ, ಶಾಲಾ ಆವರಣದಲ್ಲಿ ಶೌಚಕ್ಕೆ ಕೂಡುತ್ತಿರುವ ಪರಿಣಾಮ ಶಾಲಾ ಪರಿಸರ ಸಂಪೂರ್ಣ ಹದಗೆಟ್ಟು ಹೋಗಿದೆ.

ಬಲಿಗಾಗಿ ಆಹ್ವಾನಿಸುತ್ತಿರುವ ಟಿಸಿ: ಬೂದಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬದಿ ಅಳವಡಿಸಿರುವ ವಿದ್ಯುತ್‌ ಟ್ರಾನ್ಸ್‌ಫಾಮರ್‌ (ಟಿಸಿ) ಸುತ್ತಲೂ ತಂತಿ ಬೇಲಿ ಇಲ್ಲದೇ ಇರುವುದರಿಂದ ಬಲಿಗಾಗಿ ಆಹ್ವಾನಿಸುವಂತಿದೆ. ಹೆಸ್ಕಾಂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಟಿಸಿ ಸುತ್ತಲೂ ತಂತಿ ಬೇಲಿ ಅಳವಡಿಸುವ ಮೂಲಕ ಜನ-ಜಾನುವಾರುಗಳ ರಕ್ಷಣೆ ಮಾಡಬೇಕೆಂದು ವೀರೇಶ ಹಡಗಲಿ ಆಗ್ರಹಿಸಿದ್ದಾರೆ.

ಗ್ರಾಮವು ಅನೇಕ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಮಹಿಳೆಯರಿಗೆ ನಿತ್ಯ ಶೌಚಕ್ಕಾಗಿ ಸುಮಾರು ಎರಡ್ಮೂರು ಕಿ.ಮೀ ದೂರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೂದಿಹಾಳ ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಅವ್ಯವಸ್ಥೆ, ಮೂಲ ಸೌಲಭ್ಯಗಳ ಕುರಿತು ಅಲ್ಲಿನ ಪಿಡಿಒಯೊಂದಿಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಎಂ.ವಿ ಚಳಗೇರಿ, ರೋಣ ತಾಪಂ ಇಒ

•ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next