Advertisement

ಜೆಡಿಎಸ್‌ನಿಂದ ರಾಜಕಾರಣಕ್ಕೆ ಬಹುದೊಡ್ಡ ಕೊಡುಗೆ

02:49 PM Sep 01, 2017 | Team Udayavani |

ಹೂವಿನಹಡಗಲಿ: ಜನತಾ ಪರಿವಾರ ರಾಜ್ಯ ರಾಜಕಾರಣಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ. ಜನತಾ ಪರಿವಾರದಲ್ಲಿದ್ದ ರಾಜಕೀಯ ನಾಯಕರು ದೇಶದ ಪ್ರಧಾನಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಂತಹ ಬಹುದೊಡ್ಡ ಹುದ್ದೆ ಅಲಂಕರಿಸಿ ರಾಜ್ಯದ ಜನತೆಗೆ ಉತ್ತಮ ಸೇವೆ ನೀಡಿದ್ದಾರೆ ಎಂದು ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜ ಪಾದಯಾತ್ರೆ ಅಭಿಪ್ರಾಯಪಟ್ಟರು.

Advertisement

ತಾಲೂಕ ಕ್ರೀಡಾಂಗಣದ ಹಿಂಭಾಗದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ ಜನತೆ ನೀಡಿರುವ ಅಧಿಕಾರವನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ದುರ್ಬಳಕೆ ಮಾಡಿಕೊಂಡು ವ್ಯಾಪಕ ಭ್ರಷ್ಟಾಚಾರ, ಸಂಪತ್ತು ಲೂಟಿ ಹೊಡೆದು ಜೈಲಿಗೆ ಹೋದಂತೆ ಜೆಡಿಎಸ್‌ನಲ್ಲಿ ಯಾರು ಜೈಲಿಗೆ ಹೋಗಿಲ್ಲ ಎಂದರು. ಬಳ್ಳಾರಿ ಜಿಲ್ಲಾ ರಾಜಕಾರಣ ಈ ಹಿಂದೆ ಗಣಿ ಧೂಳಿನಿಂದಾಗಿ ಕೊಳಕಾಯಿತು. ಅದನ್ನು ಕೊಡವಿ ಶುಬ್ರಗೊಳಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರಿಗಾಗಿ ಗ್ರಾಮ ವಾಸ್ತವ್ಯ, ಸಾಲ ಮನ್ನಾ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ಕೈಗೊಂಡು ಜನರಿಗೆ ಸಾಕಷ್ಟು ಅನುಕೂಲ ಮಾಡಿದ್ದರು. ನೇರ ನಿಷ್ಠುರ ಆಡಳಿತ ಮಾಡಿರುವ ಜೆಡಿಎಸ್‌ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಕಪ್ಪುಹಣದ ಹೆಸರಿನಲ್ಲಿ ಜನರ ಬದುಕಿನೊಂದಿಗೆ ಆಟವಾಡಿದ ಪ್ರಧಾನಿ ಮೋದಿ ಮಾಡಿದ ಘನ ಕಾರ್ಯ ಏನು ಇಲ್ಲ. ಅವರು ಎಷ್ಟು ಕಪ್ಪುಹಣ ತಂದರು ಎನ್ನುವುದನ್ನು ಜನರಿಗೆ ಲೆಕ್ಕ ಕೊಡಬೇಕಾಗಿದೆ. ನೋಟು ಬ್ಯಾನ್‌ ಮಾಡಿ ಬಡ ಜನರಿಗೆ ತೊಂದರೆ ಕೊಟ್ಟು ಆಂಬಾನಿಯಂಥ ದೊಡ್ಡ ದೊಡ್ಡ ಕಾರ್ಪೋರೆಟ್‌ಗಳಿಗೆ ಅನುಕೂಲ ಮಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚು ಬಿಜೆಪಿ ಸಂಸದರಿದ್ದರೂ ಕಳಸ ಬಂಡೂರಿ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆರೋಪಿಸಿದರು. 

 ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಶಿವಣ್ಣ, ಹಾವೇರಿ ಜಿಲ್ಲಾ ರತ್ನ ಭಾರತ ರೈತ ಸಮಾಜ ಜಿಲ್ಲಾಧ್ಯಕ್ಷ ಮಹಾಂತೇಶ ಎಚ್‌.ಪಾಟೀಲ್‌, ಜಿಲ್ಲಾ ಜೆಡಿಎಸ್‌ ಕಾರ್ಯದರ್ಶಿ ಶಿವಕುಮಾರಿ, ಸೋಮನಗೌಡ ಮಾತನಾಡಿದರು. ತಾಲೂಕ ಜೆಡಿಎಸ್‌ ಅಧ್ಯಕ್ಷ ಟಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಕೋಡಬಾಳ ಚಂದ್ರಪ್ಪ, ವಸಂತ, ಮಲ್ಲಿಕಾರ್ಜುನ ಕಲ್ಲಿಕೋಟಿ, ಹಾವೇರಿ ಜಿಲ್ಲಾ ಜೆಡಿಎಸ್‌ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬೇವಿನ ಮರದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next