Advertisement

ಶಾಂತಿಯುತ ಬದುಕಿನ ಕನಸು ಕೊನರಿರುವುದೇ ದೊಡ್ಡ ಬದಲಾವಣೆ

12:28 AM Oct 04, 2021 | Team Udayavani |

ಕಾಶ್ಮೀರ ಕಥನ ಕಾಶ್ಮೀರ ಕಣಿವೆಯಲ್ಲಿನ ಸಮ್ಮಿಶ್ರ ಅಭಿಪ್ರಾಯಗಳ ಚಿತ್ರಣ. ದ ವಿಶೇಷ ಸ್ಥಾನಮಾನ ರದ್ದುಗೊಂಡು ಎರಡು ವರ್ಷಗಳಾಗಿವೆ.ಬದಲಾವಣೆಯ ಬೀಜ ಮೆಲ್ಲಗೆ ಮೊಳಕೆಯೊಡೆಯುವ ಸೂಚನೆಗಳಿವೆ. ಕಾದು ನೋಡಬೇಕಾದದ್ದು ಬಹಳಷ್ಟಿದೆ.

Advertisement

ಆಗಸ್ಟ್‌ 5, 2019.
ಸ್ವಾತಂತ್ರ್ಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ವಿಶೇಷ ಸ್ವಾಯತ್ತೆ ವ್ಯವಸ್ಥೆ ವಜಾಗೊಂಡ ದಿನ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370 ವಿಧಿಯನ್ನು ರದ್ದುಪಡಿಸಿತು. ಬೆನ್ನಿಗೇ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತು. ಲಡಾಖ್‌ಅನ್ನೂ ಪ್ರತ್ಯೇಕಗೊಳಿಸಿ ಕೇಂದ್ರಾಡಳಿತ ಪ್ರದೇಶವಾಗಿಸಿತು.

ಇದಕ್ಕೆ ಪ್ರಮುಖವಾಗಿ ಕೇಂದ್ರ ಸರಕಾರ ನೀಡಿದ ಎರಡು ಸಮರ್ಥನೆಗಳೆಂದರೆ, ಮೊದಲನೆಯದು-ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನ ಸಂಘಟನೆಗಳು ತಮ್ಮ ಚಟುವಟಿ­ಕೆಗಳಿಗೆ 370ನೇ ವಿಧಿಯಡಿ ದೊರೆತ ಸ್ವಾಯತ್ತೆ­ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು. ಎರಡನೆ­ಯದು- ಈ ನಿಯಮವು ಅಭಿವೃದ್ಧಿ ಚಟುವಟಿಕೆಗಳಿಗೆ ಆಡ್ಡಿಯಾಗಿರುವುದು. ಆ ಸಂದರ್ಭದಲ್ಲಿ ಇದೊಂದು ನೆಪದ ಸಮರ್ಥನೆ ಎನ್ನಲಾಗುತ್ತಿತ್ತು. ಆದರೀಗ ಈ ಎರಡೂ ಆಂಶಗಳಿಗೆ ಸಾಕಷ್ಟು ಪುಷ್ಟಿ ದೊರೆತಿದೆ.

ಅಕ್ಟೋಬರ್‌ 5, 2021ಕ್ಕೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಎರಡು ವರ್ಷ ಎರಡು ತಿಂಗಳು. ಈ ಅವಧಿಯಲ್ಲೂ ಝೇಲಂ ಮತ್ತು ಸಿಂಧೂ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಆದರೆ ಎರಡು ವರ್ಷಗಳ ಅವಧಿಯ ಬೆಳವಣಿಗೆ­ಯೇನು ಅಥವಾ ಬದಲಾವಣೆಯೇನು ಎಂದು ಕೇಳುವುದಾದರೆ ಅದೇ ನದಿಗಳಲ್ಲಿ ಹಿಂದೆ ರಕ್ತವೂ ಹರಿದು ಹೋಗುತ್ತಿತ್ತು. ಈಗ ಕಡಿಮೆಯಾಗಿದೆ ಎಂದು ಉಪಮೆಯ ಮೂಲಕ ವಿವರಿಸುತ್ತಾರೆ.

ಎರಡು ವರ್ಷಗಳ ಮೊದಲು
2019ರ ಮೊದಲು ನಮಗೆ ಶ್ರೀನಗರದ ಚಿತ್ರಗಳು ಹೇಗಿತ್ತೆಂ­ದರೆ, ಒಡೆದ ಕನ್ನಡಿಯಲ್ಲಿನ ನೂರೆಂಟು ಬಿಂಬಗಳು. ಬಹುತೇಕ ರಸ್ತೆಗಳು ಬಹುಕಾಲ ನಿರ್ಜನವಾಗಿರು­ತ್ತಿದ್ದವು. ಎಲ್ಲೋ ಒಂದು ಸಣ್ಣ ಘಟನೆ ನಡೆದರೂ ನಗರವಿಡೀ ದಿಢೀರನೆ ಕರ್ಫ್ಯೂ ಸ್ಥಿತಿಗೆ (Mode)ಮರಳುತ್ತಿತ್ತು. ಬಹುತೇಕ ಕಡೆ ಮುಳ್ಳಿನಂತಿದ್ದ ತಂತಿಗಳು (ಬಾರ್ಬರ್‌ ವೈರ್‌) ಕಾಣುತ್ತಿದ್ದವು. ಕಂಡಲ್ಲೆಲ್ಲ ಮಿಲಿಟರಿ ಪಡೆಗಳು ಎದುರಾಗುತ್ತಿದ್ದವು. ಮಿಲಿಟರಿ ಬೂಟುಗಳ ಹಾಗೂ ಗುಂಡುಗಳದ್ದೇ ಶಬ್ದ. ಮಿಲಿಟರಿ ಯೋಧರ ಮೇಲೆ ಕಲ್ಲೆಸೆತದ ಮೂಲಕ ದ್ವೇಷ ತೀರಿಸಿಕೊಳ್ಳುತ್ತಿದ್ದ ಜನರು, ಭಯೋತ್ಪಾದಕರ ಬೆಂಬಲಿತರು, ಒಂದು ಕ್ಷಣ ನಿದ್ದೆ ಮಾಡಲೂ ಅತಂಕ. ಪೇಟೆಗೆ ಹೋದವ ಮನೆಗೆ ಬಂದ ಮೇಲೆಯೇ ಭರವಸೆ.

Advertisement

ಅದೀಗ ಬಹಳಷ್ಟು ಬದಲಾಗಿದೆ. ಕಲ್ಲು ಕಟುಕರು ಕಾಣೆಯಾಗಿದ್ದಾರೆ. ಭಯೋತ್ಪಾ­ದನ ಚಟುವಟಿಕೆಗಳ ಸಂಖ್ಯೆ ಕುಸಿದಿದೆ. ರಸ್ತೆಗಳೆಲ್ಲ ತಂತಿ ಗಳಿಂದ ಮುಕ್ತವಾಗಿ ಓಡಾಡುವಂತಾಗಿದೆ. ಶ್ರೀನಗರದ ದಾಲ್‌ ಸರೋವರದ ಬಣ್ಣ ಮತ್ತಷ್ಟು ತಿಳಿಯಾಗಿ ಖುಷಿ ನೀಡುತ್ತಿದೆ. ಮೆಲ್ಲಗೆ ಪ್ರವಾಸಿ ಗಳು ಮತ್ತೆ ದಾಲ್‌ ಸರೋವರದ ಶಿಕಾರಾ ಸವಾರಿಯಲ್ಲಿ ಹೊಸ ಜಗತ್ತನ್ನು ಕಾಣತೊಡಗಿದ್ದಾರೆ. ಇದೇ ಅಕ್ಟೋಬರ್‌ 1ರ ಬೆಳಗ್ಗೆ ದಾಲ್‌ ಸರೋವರದ ಶಿಕಾರಾ ಸವಾರಿ (ಶಿಕಾರಾ ರೈಡ್‌-ದೋಣಿ ಸವಾರಿ)ಗೆ ಬೆಳಗ್ಗೆಯೇ ಬಂದಿದ್ದ ಪಂಜಾಬಿನ ಪ್ರವಾಸಿಗರೊಬ್ಬರು, “ಈಗ ಪರಿಸ್ಥಿತಿ ಬದಲಾಗಿದೆ ಎನಿಸುತ್ತಿದೆ. ಮೂರ್‍ನಾಲ್ಕು ವರ್ಷಗಳ ಹಿಂದೆ ಬಂದಾಗ ಪರಿಸ್ಥಿತಿ ಭಿನ್ನವಾ­ಗಿತ್ತು. ನಮಗೆ ಬಂದ ಹೋಗುವುದೇ ದೊಡ್ಡ ಸಾಹಸ ಎನ್ನಿಸುತ್ತಿತ್ತು. ಈಗ ಅಂಥ ಕಠಿನ ಶ್ರೀನಗರ ಎನ್ನಿಸುವುದಿಲ್ಲ’ ಎಂದರು.

ಇದನ್ನೂ ಓದಿ:ಜಮ್ಮು – ಕಾಶ್ಮೀರ ಉರಿಯಲ್ಲಿ ಡ್ರಗ್ಸ್‌ ಸಾಗಾಟ?

ಪೊಲೀಸ್‌ ಸಿಬಂದಿಯ ಪ್ರಕಾರ, “370ನೇ ನಿಯಮ ರದ್ದು ಪಡಿಸಿದ ಮೇಲೆ ಯಾವುದೇ ಬದಲಾವಣೆ ಆಗಿಲ್ಲ ಎನ್ನುವವರೂ ಒಂದನ್ನು ಒಪ್ಪಿಕೊಳ್ಳಲೇಬೇಕು. ಈಗ ಕಲ್ಲು ಎಸೆತದ, ಭಯೋತ್ಪಾದಕರ ಚಟುವಟಿಕೆಗಳು ಕ್ಷೀಣಿಸಿವೆ. ಅಡಳಿತ ವ್ಯವಸ್ಥೆ ಹಿಂದಿಗಿಂತ ಈಗ ಹೆಚ್ಚು ಕಟ್ಟೆಚ್ಚರದಿಂದ ಇದೆ’.

ಪೊಲೀಸರು ಮತ್ತು ಮಿಲಿಟರಿ ಪಡೆಯ ಮೇಲೆ ಪ್ರಚೋದಿತ ಸ್ಥಳೀಯರ ಕಲ್ಲು ಎಸೆತದ ಪ್ರಕರಣಗಳಿಗೆ ಲೆಕ್ಕವೇ ಇರಲಿಲ್ಲ. 2000ದ ಅನಂತರ ಭಯೋತ್ಪಾದನ ಸಂಘಟನೆಗಳು, ಭಾರತ ಸರಕಾರದ ವಿರೋಧಿಗಳು, ಭಯೋತ್ಪಾದಕರ ಪರವಿದ್ದ ಕೆಲವರು, ಸ್ವತಂತ್ರ ಕಾಶ್ಮೀರದ ಹುಚ್ಚು ಪ್ರತಿಪಾದಕರು ಆಡಳಿತದ ವಿರುದ್ಧ ಕಂಡುಕೊಂಡ ಪ್ರಬಲ ಅಸ್ತ್ರ ಈ ಕಲ್ಲು ಎಸೆತ. “ಅದರಲ್ಲೂ ಅಮರನಾಥ ಭೂಮಿ ಹಸ್ತಾಂತರ ಸಂಬಂಧಿ ಹೋರಾಟದ ಸಂದರ್ಭ­ದಲ್ಲೂ ಇದು ಪ್ರಬಲವಾಗಿತ್ತು. ಈಗ ಅವೆಲ್ಲವೂ ಬದಿಗೆ ಸರಿದಿದೆ. ಜನರಿಗೂ ಅಭಿವೃದ್ಧಿ ಬೇಕು’ ಎನ್ನುತ್ತಾರೆ ಪೊಲೀಸರು.

ಗೃಹ ಇಲಾಖೆಯ ಅಂಕಿ ಆಂಶಗಳ ಪ್ರಕಾರ, 2019ರಿಂದ ಸೇನಾ ಸಿಬಂದಿಯ ಗಸ್ತು, ಭಯೋತ್ಪಾದಕರ ಪತ್ತೆ ಮತ್ತು ಹತ್ಯೆಗೆ ಅನುಸರಿಸಿದ ಕಾರ್ಯ­ತಂತ್ರಗಳಿಂದ ಭಯೋತ್ಪಾದನೆ ಚಟುವಟಿಕೆಯ ತೀವ್ರತೆ ಕಡಿಮೆಯಾಗಿದೆ. ವಿಶೇಷವಾಗಿ ಪೊಲೀಸರು, ಸೇನೆಯತ್ತ ಕಲ್ಲೆಸೆಯುವ ಪ್ರಕರಣಗಳಂತೂ ಶೇ. 85ರಷ್ಟು ಕಡಿಮೆಯಾಗಿದೆ. ಕಲ್ಲೆಸೆತ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಪಾಸ್‌ಪೋರ್ಟ್‌ ನಿರಾಕರಿಸುವ ನಿಯಮವನ್ನೂ ಜಾರಿಗೆ ತರಲಾಯಿತು. ಕಲ್ಲೆಸತದಲ್ಲಿ ಭಾಗಿಯಾಗುವವರನ್ನು, ಅದಕ್ಕೆ ಪ್ರಚೋದಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಇವೆಲ್ಲದರ ಜತೆಗೆ ಕೋವಿಡ್‌ ಸಹ ನೆರವು ನೀಡಿದೆ.

2019ರ ಜನವರಿಯಿಂದ ಜುಲೈವರೆಗೆ ಕಾಶ್ಮೀರ ಕಣಿವೆಯಲ್ಲಿ 618 ಕಲ್ಲೆಸೆತ ಪ್ರಕರಣಗಳು ಘಟಿಸಿದ್ದವು. 2020ರ ಇದೇ ಅವಧಿಯಲ್ಲಿ ಪ್ರಕರಣ ಗಳ ಸಂಖ್ಯೆ ಗಣನೀಯವಾಗಿ 222ಕ್ಕೆ ಇಳಿಯಿತು. 2021ರಲ್ಲಿ ಇದೇ ಅವಧಿಯಲ್ಲಿ 76 ಪ್ರಕರಣಗಳು ದಾಖಲಾಗಿವೆ. ಇಂಥ ಪ್ರಕರಣ ಗಳಲ್ಲಿ ಗಾಯಗೊಳ್ಳುವ ಭದ್ರತಾ ಪಡೆ ಸಿಬಂದಿಯ ಸಂಖ್ಯೆಯೂ ಕ್ರಮವಾಗಿ 64ರಿಂದ 10ಕ್ಕೆ ಇಳಿದಿದೆ. ಇಂಥ ಪ್ರಕರಣಗಳಲ್ಲಿ (ಕಲ್ಲೆಸೆತ ಮತ್ತು ಅದನ್ನು ನಿಯಂತ್ರಿಸಲು ಕೈಗೊಳ್ಳುವ ಭದ್ರತಾ ಪಡೆಯ ಪ್ರತಿಕ್ರಿಯೆ) ಗಾಯಗೊಳ್ಳುವ ನಾಗರಿಕರ ಸಂಖ್ಯೆಯೂ 339ರಿಂದ 25ಕ್ಕೆ ಗಮನಾರ್ಹವಾಗಿ ಇಳಿದಿದೆ. ಇದೇ ರೀತಿಯಲ್ಲಿ ಭಯೋತ್ಪಾ­ದಕರನ್ನು ಪತ್ತೆ ಹಚ್ಚಿ ಹತ್ತಿಕ್ಕಲಾಗುತ್ತಿದೆ.

ಭಯೋತ್ಪಾದನ ಚಟುವಟಿಕೆಗಳು 2019ರಿಂದ 2020ಕ್ಕೆ ಶೇ.59 ರಷ್ಟು ಕಡಿಮೆಯಾಗಿದ್ದವು. ಈಗ 2021ರ ಜೂನ್‌ ವರೆಗೆ ಮತ್ತಷ್ಟು ಕುಸಿತ ವಾಗಿದೆ. ಸರಾಸರಿ ಶೇ.60ರಿಂದ 80ರಷ್ಟು ಎಂದು ಅಂದಾಜಿಸಬಹುದಾಗಿದೆ.

ಪ್ರತಿಭಟನೆಗಳು, ಹರತಾಳಗಳೂ ಕಡಿಮೆ ಆಗುತ್ತಿವೆ. ನಗರಗಳು ಸಹಜ ಸ್ಥಿತಿಗೆ ಮರಳಿವೆ. ಪ್ರವಾಸೋದ್ಯಮವೂ ಚಿಗುರುತ್ತಿದೆ. ಶ್ರೀನಗರದಲ್ಲಿ ಉಳಿದ ಎಲ್ಲ ನಗರಗಳಲ್ಲಿದ್ದಂತೆಯೇ ಚಟುವಟಿ ಕೆಗಳು ನಡೆಯತೊಡಗಿವೆ. ಅಂಗಡಿ ಮುಂಗಟ್ಟುಗಳೂ ಬೆಳಗ್ಗೆ­ಯಿಂದ ರಾತ್ರಿವರೆಗೆ ಸಾಂಗವಾಗಿ ತೆರೆದಿರುತ್ತವೆ. ನಾಗರಿಕರೂ ಯಾವುದೇ ಆಂಜಿಕೆ ಇಲ್ಲದೇ ಓಡಾಡತೊಡಗಿದ್ದಾರೆ. ಸೇನಾ ಸಿಬಂದಿಯೂ ಜನರ ಭದ್ರತೆಗೆ ಬೆಂಗಾವಲಾಗಿ ನಿಂತಿದ್ದಾರೆ. ಅದರೆ ಸಿಬಂದಿ ಸಂಖ್ಯೆಯನ್ನು ಕಡಿಮೆಗೊಳಿಸಲಾಗುತ್ತಿದೆ. ಇಡೀ ಕಣಿವೆ ಪ್ರದೇಶ ನಿಟ್ಟುಸಿರು ಬಿಡುವಂತಾಗಿದೆ.

ಶ್ರೀನಗರದಲ್ಲಿ ಅಂಗಡಿ ನಡೆಸುತ್ತಿರುವ ಒಬ್ಬರು, “ಎರಡು ವರ್ಷಗಳಲ್ಲಿ ಆಭಿವೃದ್ಧಿ ದೊಡ್ಡ ಮಟ್ಟಿಗೆ ಆಗಿಲ್ಲ ಎನಿಸಬಹುದು. ಆದಕ್ಕೆ ಕೋವಿಡ್‌ ಸಹ ಕಾರಣವಾಗಿರಬಹುದು. ಇದು ಯಾವತ್ತೋ ಆಗಬೇಕಾಗಿದ್ದ ಬದಲಾವಣೆ ಮತ್ತು ನಿರೀಕ್ಷಿಸಿದ ಕ್ರಮ. ಕೊನೆಗೂ ಘಟಿಸಿತು. ಈಗ ನಮ್ಮಲ್ಲೊಂದು ಆಶಾವಾದ ಮೊಳಕೆಯೊಡೆದಿದೆ. ಶಾಂತಿಯ ಬದುಕು ದೂರದ ಬೆಟ್ಟದಂತೆ ತೋರುತ್ತಿತ್ತು. ಈಗ ಅದು ಹತ್ತಿರಕ್ಕೆ ಬಂದಾಗಲೂ ನುಣ್ಣಗೇ ಇರಬಹುದು ಎಂಬ ಭರವಸೆ ಹುಟ್ಟಿಸಿದೆ. ಇದೇ ದೊಡ್ಡ ಬದಲಾವಣೆ. ಇನ್ನಷ್ಟು ದಿನ ಕಾಯೋಣ’ ಎನ್ನುತ್ತಾರೆ.

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next