Advertisement

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇಆ ಸಂದರ್ಭ ದೊಡ್ಡ ಸವಾಲಾಗಿತ್ತು…

10:23 AM Jul 30, 2020 | mahesh |

ಬೆಂಗಳೂರು: ಎರಡು-ಮೂರು ತಿಂಗಳ ಹಿಂದಿನ ಮಾತು. ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅದಕ್ಕೆ ಕಾರಣ- ಪಾದರಾಯನಪುರ ಕ್ವಾರಂಟೈನ್‌ಗೆ ಕರೆದೊಯ್ಯುವ ವೇಳೆ ನಡೆದ ಗಲಾಟೆ. ನಂತರ ಆ ಗಲಾಟೆಯಲ್ಲಿದ್ದ ಕೆಲ ಸ್ಥಳೀಯರು, ಕರ್ತವ್ಯದಲ್ಲಿದ್ದ ಹತ್ತಾರು ಪೊಲೀಸ್‌ ಸಿಬ್ಬಂದಿಯನ್ನು ಕೂಡ ಕೊರೊನಾ ಸುಳಿಯಲ್ಲಿ ಸಿಲುಕುವಂತಾಯಿತು. ಪ್ರಕರಣದಲ್ಲಿ ವಶಕ್ಕೆ ಪಡೆದವರನ್ನು ರಾಮನಗರ ಜಿಲ್ಲೆಗೆ ಶಿಫ್ಟ್ ಮಾಡಲಾಯಿತು. ಅಲ್ಲಿಯೂ ಸೋಂಕು ಹಬ್ಬಿತು. ಆದರೆ, ಈಗ ಪಾದರಾಯನಪುರದ ಸುಳಿವಿಲ್ಲ. ಹಾಗಂತ ಪ್ರಕರಣಗಳೇ ಅಲ್ಲಿಲ್ಲ ಎಂದಲ್ಲ.

Advertisement

ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಸಾಮಾನ್ಯ ವಾರ್ಡ್‌ಗಳಂತೆ ಅದನ್ನು ನೋಡುವಂತಾಗಿದೆ. ಇದರ ಹಿಂದೆ ನೂರಾರು ವಾರಿಯರ್ ಶ್ರಮ ಇದೆ. ಆ ಪೈಕಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಚ್‌. ಸುಮಾ ಕೂಡ ಒಬ್ಬರು.  ಪಾದರಾಯನಪುರದ ಮನೆ-ಮನೆಗೆ ತೆರಳಿ, ಸ್ಥಳೀಯರ ಬೈಗುಳಕ್ಕೆ ಗುರಿಯಾಗಿದ್ದಾರೆ. ಸಮೀಕ್ಷೆ, ರ್‍ಯಾಂಡಮ್‌ ಪರೀಕ್ಷೆ ಮತ್ತಿತರ ಸಂದರ್ಭಗಳಲ್ಲಿ ಅವರು ಎದುರಿಸಿದ ಸವಾಲುಗಳು ಸೇರಿದಂತೆ ತಮ್ಮ ಅನುಭವವನ್ನು ಅವರು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

“ಪಾದರಾಯನಪುರದಲ್ಲಿ ಕೊರೊನಾ ಸೋಂಕು ಹಬ್ಬುವುದಕ್ಕೆ ಕಡಿವಾಣ ಹಾಕುವುದು ಸುಲಭವಾಗಿರಲಿಲ್ಲ. ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಪಾದರಾಯನಪುರದಲ್ಲಿ ಏ. 8ರಂದು ಮೊದಲ ಸೋಂಕು ಪ್ರಕರಣ ದೃಢಪಟ್ಟಿತ್ತು. ಇದಾದ ಮೇಲೆ ಈ ಭಾಗವನ್ನು ಕ್ಲಸ್ಟರ್‌ ಎಂದು ಗುರುತಿಸಲಾಯಿತು. ಬೆಂಗಳೂರಿನಲ್ಲೇ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಡುತ್ತಿದ್ದ ಪ್ರದೇಶವಾಗಿತ್ತು. ಹೀಗಾಗಿ, ಹೆಚ್ಚು ಜವಾಬ್ದಾರಿ ಹಾಗೂ ಒತ್ತಡದಿಂದ ಎಲ್ಲ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುವಂತಹ ವಾತಾವರಣ ಇತ್ತು’.

ಪಾದರಾಯನಪುರದಲ್ಲಿ ಕೊರೊನಾ ಸೋಂಕು ದೃಢಪಟ್ಟ ಮರುದಿನದಿಂದಲೇ ಕುಟುಂಬದಿಂದ ಪ್ರತ್ಯೇಕವಾಗಿ ಇರಲು ಪ್ರಾರಂಭಿಸಿದೆ. 10 ಹಾಗೂ 7ನೇ ತರಗತಿ ಓದುತ್ತಿರುವ ಇಬ್ಬರು ಮಕ್ಕಳನ್ನು ತಂಗಿಯ ಮನೆಯಲ್ಲಿ ಬಿಟ್ಟಿದ್ದೇನೆ. ಪತಿ ಸಹ ಪ್ರತ್ಯೇಕವಾಗಿ ಇದ್ದಾರೆ. ಈ ಭಾಗದಲ್ಲಿ ಮನೆ-ಮನೆ ಸಮೀಕ್ಷೆ ಮಾಡುವಾಗ ಹಲವು ಸಮಸ್ಯೆಗಳು ಎದುರಾಗುತ್ತಿತ್ತು. ಯಾರೂ ಮನೆಯ ಬಾಗಿಲನ್ನೇ ತೆರೆಯುತ್ತಿರಲಿಲ್ಲ.

ಒಂದು ಸಮುದಾಯವನ್ನು ಗುರಿ ಮಾಡಲಾಗುತ್ತಿದೆ, ಜೈಲಿಗೆ ಕಳುಹಿಸುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಹೀಗಾಗಿ, ಸ್ಥಳೀಯ ಸಮುದಾಯದ ಮುಖಂಡರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡೆವು. ಕೊರೊನಾ ಸೋಂಕಿನ ತೀವ್ರತೆ ತಿಳಿಯಲು ಸಾರ್ವಜನಿಕರಿಂದ ಮಾಹಿತಿ ಸಂಗ್ರಹ ಎಷ್ಟು ಮುಖ್ಯ? ಆರೋಗ್ಯ ಸಮೀಕ್ಷೆ ಮಾಡುವುದು ಯಾಕೆ ಅತ್ಯಗತ್ಯ? ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದ್ದೆವು. ಈ ಹಂತದಲ್ಲಿ ಕೆಲವರು ನಮ್ಮನ್ನು ಬೈದಿದ್ದೂ ಇದೆ. ಕೆಲವರು ಇವರಿಗೆ ಸಹಕಾರ ನೀಡಬೇಡಿ ಎಂದು ಹೇಳಿದ್ದೂ ಇದೆ.

Advertisement

ಜ್ವರ ಕೇಂದ್ರದ ವಾಹನ ಬಳಕೆ
ಈ ಭಾಗವನ್ನು ಸೀಲ್‌ಡೌನ್‌ ಮಾಡಿದಾಗ ಆಟೋ ಸಿಗುತ್ತಿರಲಿಲ್ಲ. ಸ್ವಂತ ವಾಹನ ಇಲ್ಲದಿದ್ದರಿಂದ ಸಮಸ್ಯೆಯಾಗುತ್ತಿತ್ತು. ಮುಖ್ಯ ರಸ್ತೆಯಿಂದ ಒಳಗೆ ಹೋಗಲು
ಅಂದಾಜು ಎರಡು ಕಿ.ಮೀ ದೂರವಿದೆ. ಇಲ್ಲಿ ಓಡಾಡಲು ವಾಹನ ಇಲ್ಲದಿದ್ದ ರಿಂದ ಬಿಬಿಎಂಪಿಯ ಜ್ವರ ತಪಾಸಣಾ ಕೇಂದ್ರದಲ್ಲಿ ರೋಗಿಗಳನ್ನು ಸ್ಥಳಾಂತರಿಸಲು ಬಳಸುತ್ತಿದ್ದ ವಾಹನವನ್ನು ಸ್ವತ್ಛ ಮಾಡಿ ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ನಮಗೆ ಡ್ರಾಪ್‌ ನೀಡುತ್ತಿದ್ದರು. ಇದೆಲ್ಲ ಸವಾಲುಗಳ ಮಧ್ಯೆ ಪಾದರಾಯನಪುರದಲ್ಲಿ ಕೊರೊನಾ ಸೋಂಕು ಕಡಿವಾಣಕ್ಕೆ ಬಂದಿದೆ. ಕಳೆದ 20ದಿನಗಳಿಂದ ಈ ಭಾಗದಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿಲ್ಲ. ಈಗಾಗಲೇ ಸೋಂಕು ಪರೀಕ್ಷೆಗೆ ಒಳಪಟ್ಟು ಕ್ವಾರಂಟೈನ್‌ ಆಗಿರುವವರ ಒಬ್ಬರಿಗಷ್ಟೇ ಕೊರೊನಾ ಸೋಂಕು ದೃಢಪಟ್ಟಿದೆ.

●ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next