Advertisement

ಕಾಂಗ್ರೆಸ್‌-ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲು

11:30 PM Oct 26, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿಗೆ ಅಂತಿಮ ಗಡುವು ಸಮೀಪಿ ಸುತ್ತಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸು ಗೊಂಡಿದೆ. ನಾಮಪತ್ರ ಸಲ್ಲಿಕೆ ಅ. 31ಕ್ಕೆ ಮುಕ್ತಾಯವಾಗಲಿದ್ದು, ಇನ್ನು 5 ದಿನಗಳಷ್ಟೇ ಬಾಕಿಯಿದೆ. ಈ ಪೈಕಿ ಅ. 27, 29 ಸರಕಾರಿ ರಜಾ ದಿನಗಳು.

Advertisement

ಪಾಲಿಕೆಯಲ್ಲಿ ಕಳೆದ ಅವಧಿಯಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌, ವಿಪಕ್ಷ ವಾಗಿದ್ದ ಬಿಜೆಪಿಯಲ್ಲಿ ಸ್ಪರ್ಧಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಯ್ಕೆ ಕಗ್ಗಂಟು ಆಗಿ ಪರಿಣಮಿಸಿದೆ. ಈ ನಡುವೆ ಸ್ಪರ್ಧಾ ಕಾಂಕ್ಷಿಗಳನ್ನು ಸಮಾಧಾನಗೊಳಿಸಿ ಸರ್ವ ಸಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ನಡೆಯುತ್ತಿದೆ. ಬಿಜೆಪಿಯ ಮೊದಲ ಹಂತದ ಪಟ್ಟಿ ಬಹುತೇಕ ರವಿವಾರ ಬಿಡುಗಡೆಯಾಗುವ ಸಾಧ್ಯ ತೆಗಳಿವೆ. ಕಾಂಗ್ರೆಸ್‌ ಕೂಡ ಮೊದಲ ಹಂತದ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದ್ದು, ಬುಧವಾರದೊಳಗೆ ಎರಡೂ ಪಕ್ಷಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರ ಬೀಳುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಈಗಾಗಲೇ ಪ್ರತಿ ವಾರ್ಡ್‌ ನಲ್ಲಿ ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆದು ಕೊಂಡಿದೆ. 60 ವಾರ್ಡ್‌ಗಳಿಗೆ ಸುಮಾರು 200ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದೀಗ ನಾಯಕರು ಇವುಗಳನ್ನು ಪರಿಶೀಲಿಸಿ, ಅಭ್ಯರ್ಥಿಯ ವರ್ಚಸ್ಸು, ಗೆಲ್ಲುವ ಸಾಧ್ಯತೆಗಳನ್ನು ಮಾನ ದಂಡವಾಗಿರಿಸಿಕೊಂಡು ಅಂತಿಮ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಾಲಿಕೆ ಚುನಾವಣೆಗೆ ಕೆಪಿಸಿಸಿಯಿಂದ ವಿ.ಆರ್‌. ಸುದರ್ಶನ್‌, ಯು.ಬಿ. ವೆಂಕಟೇಶ್‌, ಸೂರಜ್‌ ಹೆಗ್ಡೆ, ಎಂ.ಎ. ಗೋಪಾಲಯ್ಯ ಸ್ವಾಮಿ, ಸವಿತಾ ರಮೇಶ್‌ ಅವರನ್ನು ವೀಕ್ಷಕನ್ನಾಗಿ ನೇಮಕ ಮಾಡಿದೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಿ ಸಮನ್ವಯತೆಯಿಂದ ಚುನಾವಣೆ ಎದುರಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಿ ಕೊಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿ.ಆರ್‌. ಸುದರ್ಶನ್‌, ಸೂರಜ್‌ ಹೆಗ್ಡೆ ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ಪಕ್ಷದ ಪ್ರಮುಖರ ಜತೆ ಚರ್ಚೆ ನಡೆಸಿದ್ದಾರೆ.

ಬಿಜೆಪಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಕಾಂಕ್ಷಿಗಳಿದ್ದು, ಸರ್ವ ಸಮ್ಮತ ಅಭ್ಯರ್ಥಿಗಳ ಆಯ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ವಾರ್ಡ್‌ ಮಟ್ಟದಲ್ಲಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಕಾರ್ಯ ಪಕ್ಷದ ವತಿ ಯಿಂದ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಶಾಸಕರ ನೇತೃತ್ವದಲ್ಲಿ ಪ್ರತಿಯೊಂದು ವಾರ್ಡ್‌ನ ಕಾರ್ಯಕರ್ತರ ಜತೆ ಪ್ರತ್ಯೇಕ ಸಮಾ ಲೋಚನೆ ನಡೆಸುತ್ತಿದ್ದಾರೆ.

ಜೆಡಿಎಸ್‌ ಈ ಬಾರಿ 38 ಸ್ಥಾನಗಳಿಗೆ ಸ್ಪರ್ದಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ವಿ. ಪ. ಸದಸ್ಯ ಬಿ.ಎಂ. ಫಾರೂಕ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ. ಈಗಾಗಲೇ, ಜಿಲ್ಲಾ ನಾಯಕರ ಜತೆ ಒಂದು ಸುತ್ತಿನ ಸಮಾಲೋಚನೆ ಕೂಡ ನಡೆದಿದೆ. ಎಸ್‌ಡಿಪಿಐ 15 ಸ್ಥಾನಗಳಿಗೆ, ಸಿಪಿಐ 4 ಸ್ಥಾನಗಳಿಗೆ ಸ್ಪರ್ಧಿ ಸುವುದಾಗಿ ಘೋಷಿಸಿದೆ. ಇನ್ನುಳಿದಂತೆ ಸಿಪಿಎಂ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

Advertisement

ಹದಿನೈದು ತಂದೊಡ್ಡಿರುವ ಅಡಚಣೆ
ವಾರ್ಡ್‌ಗಳ ಮೀಸಲಾತಿ ಕಾಂಗ್ರೆಸ್‌, ಬಿಜೆಪಿ ಪಾಲಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಹೊಸ ಮೀಸಲಾತಿಯಂತೆ ಕಾಂಗ್ರೆಸ್‌ನಲ್ಲಿ ನಿಕಟಪೂರ್ವ 35 ಸದಸ್ಯರ ಪೈಕಿ 15 ಮಂದಿಗೆ, ಬಿಜೆಪಿಯಲ್ಲಿ 20 ಸದಸ್ಯರಲ್ಲಿ 15 ಮಂದಿಗೆ ಅವರು ಈಗ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಇದರಲ್ಲಿ ಹಲವು ಮಂದಿ ಪ್ರಭಾವಿ ಕಾರ್ಪೊರೇಟರ್‌ ಒಳಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸದಸ್ಯರು ಮರು ಸ್ಪರ್ಧೆಗೆ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಇನ್ನೊಂದು ವಾರ್ಡ್‌ನಲ್ಲಿ ಅವಕಾಶ ಮಾಡಿಕೊಡುವ ಸವಾಲು ಪಕ್ಷಕ್ಕೆ ಎದುರಾಗಿದೆ. ಅಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಸದಸ್ಯರು, ಹೊಸದಾಗಿ ಸ್ಪರ್ಧಾಕಾಂಕ್ಷಿಗಳಿಂದ ಎದುರಾಗುವ ಪ್ರತಿರೋಧವನ್ನು ನಿಭಾಯಿಸಬೇಕಾಗಿದೆ. ಈ ಹೊಣೆಯನ್ನು ಪಕ್ಷದ ಜಿಲ್ಲಾ ನಾಯಕರು ರಾಜ್ಯ ನಾಯಕತ್ವಕೆ ವಹಿಸಿ ಕೊಡುವ ಚಿಂತನೆ ನಡೆಸಿದ್ದಾರೆ.

ಅಭ್ಯರ್ಥಿ ಆಯ್ಕೆ
ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಪ್ರತಿ ಯೊಂದು ವಾರ್ಡ್‌ನ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆಯಲಾಗುತ್ತಿದೆ. ಪಕ್ಷದ ಪ್ರಮುಖ ನಾಯಕರ ಸಭೆ ಶೀಘ್ರದಲ್ಲೇ ನಡೆದು ಎಲ್ಲ ಅಂಶಗಳನ್ನು ಪರಾಮರ್ಶಿಸಿ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
 - ವೇದವ್ಯಾಸ ಕಾಮತ್‌, ಶಾಸಕರು

ಆಯ್ಕೆ ನಡೆಯಲಿದೆ
ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಾಕಾಂಕ್ಷಿಗಳಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಪಿಸಿಸಿ ನಿಯೋಜಿಸಿರುವ ವೀಕ್ಷಕರು ಸಹಿತ ಕಾಂಗ್ರೆಸ್‌ ನಾಯಕರು ಸಭೆ ಸೇರಿ ಅರ್ಜಿಗಳ ಪರಿಶೀಲನೆ ನಡೆದು ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅ. 30ರೊಳಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
 - ಕೆ. ಹರೀಶ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next