Advertisement

ಇಂದಿನಿಂದ ಜ.1ರವರೆಗೆ ಬೃಹತ್‌ ಕೇಕ್‌ ಶೋ

11:24 AM Dec 14, 2018 | |

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಯುಬಿ ಸಿಟಿ ಮುಂಭಾಗದ ಸೇಂಟ್‌ ಜೋಸೆಫ್ ಶಾಲೆಯ ಆವರಣದಲ್ಲಿ ಡಿ.14ರಿಂದ ಬೃಹತ್‌ ಕೇಕ್‌ ಶೋ ಆರಂಭವಾಗುತ್ತಿದೆ.

Advertisement

ಕಳೆದ 43 ವರ್ಷಗಳಿಂದ ಇಲ್ಲಿ ಕೇಕ್‌ ಶೋ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬಗೆ ಬಗೆಯ ವಿಶೇಷ ಕೇಕ್‌ಗಳು ಪ್ರದರ್ಶನದಲ್ಲಿವೆ. “ಕೆಂಪುಕೋಟೆ’ ಮಾದರಿಯಲ್ಲಿ ವಿನ್ಯಾಸ ಪಡಿಸಿರುವ 12 ಅಡಿ ಎತ್ತರ, 20 ಅಡಿ ಉದ್ದ, 8 ಅಡಿ ಅಗಲ, 1,600 ಕೆ.ಜಿ ತೂಕದ ಕೇಕ್‌, ಪ್ರದರ್ಶನದ ಆಕರ್ಷಣೆಯಾಗಿದೆ.

ಇದರ ಜತೆಗೆ 500 ಕೆ.ಜಿ ತೂಕದ ಹಿಮದ ಮೇಲಿನ ಪೆಂಗ್ವಿನ್‌ಗಳ ಕೇಕ್‌, 140 ಕೆ.ಜಿ ತೂಕದ ಕಾಲ್ಪನಿಕ ಕತೆಗಳ “ಜೀನಿ’ ಮಾದರಿ ಕೇಕ್‌, 65 ಕೆ.ಜಿ ತೂಕದ ಚೈನೀಸ್‌ ವಾಸ್ತು ಶಿಲ್ಪ ಪ್ರತಿನಿಧಿಸುವ ಪಗೋಡಾ ಮಾದರಿ ಕೇಕ್‌, 70 ಕೆ.ಜಿ ತೂಕದ ಮಕ್ಕಳ ಕತೆಯಲ್ಲಿ ಬರುವ ಯಕ್ಷಿಣಿ ಚಿಟ್ಟೆಗೊಂಬೆ ಕೇಕ್‌, ದರ್ಜಿಗಳಿಗೆ ಸಮರ್ಪಿಸಿರುವ 120 ಕೆ.ಜಿ ತೂಕದ ಹೊಲಿಗೆ ಯಂತ್ರ ಮಾದರಿ ಕೇಕ್‌ ಆಕರ್ಷಿಣೀಯವಾಗಿವೆ.

ಇನ್ನು ಕ್ರೈಸ್ತರ ಮದುವೆಯ ಪಿಯೋನಿ ಕೇಕ್‌, ಪ್ರಕೃತಿ ವಿಕೋಪದ ಬಗ್ಗೆ ಹೇಳುವ ಕೇಕ್‌, ಬಿಸ್ಕತ್‌ ಮೇಲೆ ಕುಂತಿರುವ ಚೇಳಿನ ಮಾದರಿ ಕೇಕ್‌, ಜೋಕರ್‌ ಮಾದರಿಯ ಕೇಕ್‌, ಕ್ರಿಸ್‌ಮಸ್‌ ಹಿಮದ ಮನುಷ್ಯ ಮಾದರಿ ಕೇಕ್‌, ಸಿನಿಮಾದಲ್ಲಿ ಬರುವ ಆದಿವಾಸಿ ಮಗಳಾದ ಮೋನ ಪಾತ್ರ ಮಾದರಿಯ ಕೇಕ್‌, ದೊಡ್ಡ ಚಾಕೊಲೇಟ್‌ ಮೊಟ್ಟೆ ಮಾದರಿಯ ಕೇಕ್‌,

ಯೂರೋಪಿಯನ್‌ ಜನಪದದಲ್ಲಿ ಬರುವ ಇಷ್ಟಾರ್ಥ ಸಿದ್ಧಿ ಬಾವಿ ಮಾದರಿ ಕೇಕ್‌, ಬುದ್ಧನ ಪ್ರತಿಕೃತಿ, ಬ್ರೆಜಿಲ್‌ನ ರಿಯೋ ಡಿ ಜನೇರೀಯೊದಲ್ಲಿರುವ ಕ್ರಿಸ್ತನ ಮೂರ್ತಿ ಮಾದರಿ ಕೇಕ್‌, ಕ್ರಿಸ್‌ಮಸ್‌ ಆಚರಿಸುತ್ತಿರುವ ಸಮುದಾಯ ಸೇರಿದಂತೆ ಹಲವು ಮಾದರಿ ಕೇಕ್‌ಗಳು ಶೋನಲ್ಲಿದ್ದು ಕೇಕ್‌ ಪ್ರಿಯರನ್ನು ಆಕರ್ಷಿಸಲಿವೆ.

Advertisement

ಕೇಕ್‌ ಪರಿಣಿತ ರಾಮಚಂದ್ರ ಅವರ ಮಾರ್ಗದರ್ಶನಲ್ಲಿ, ರಿಚ್‌ಮಂಡ್‌ ವೃತ್ತದ ಬಳಿಯ ಬೇಕಿಂಗ್‌ ಮತ್ತು ಕೇಕ್‌ ಆರ್ಟ್‌ ಸಂಸ್ಥೆಯ ಕಲಿಕಾರ್ಥಿಗಳನ್ನು ಒಳಗೊಂಡ 40 ಜನರ ತಂಡ ಈ ಎಲ್ಲಾ ಮಾದರಿಯ ಕೇಕ್‌ಗಳನ್ನು ಸಿದ್ಧಪಡಿಸಿದೆ. ಪ್ರಮುಖವಾಗಿ ಕೇಕ್‌ ವಿನ್ಯಾಸಕರಾದ ಅಮೃತಾ ಮತ್ತು ಪ್ರೀತಿ ಎಂಬುವವರು “ಪರಿಸರ ವಿಪತ್ತಿನ’ ಕುರಿತಾದ ಕೇಕ್‌ ವಿನ್ಯಾಸ ಪಡಿಸಿದ್ದಾರೆ.

ಈ ಎಲ್ಲಾ ಕೇಕ್‌ಗಳನ್ನು ಐಸಿಂಗ್‌ ಷುಗರ್‌, ಜಲಿಟಿನ್‌, ಅಕ್ಕಿ ಹಿಟ್ಟು ಹಾಗೂ ಮೊಟ್ಟೆಯ ಬಿಳಿ ಭಾಗ ಬಳಸಿ ಮಾಡಲಾಗಿದೆ. ಒಟ್ಟಾರೆ ಈ ಬಾರಿಯ ಕೇಕ್‌ ಪ್ರದರ್ಶನ “ಪ್ರಕೃತಿ, ಕ್ರಿಸ್ತ ಹಾಗೂ ಬುದ್ಧ’ನ ಕರುಣೆಯ ಕಲ್ಪನೆಯ ಸಮ್ಮಿಲನವಾಗಿದೆ ಎಂದು ಕೇಕ್‌ ಪರಿಣಿತ ಸಿ.ರಾಮಚಂದ್ರ ತಿಳಿಸಿದರು.

ಕೇಕ್‌ ಪ್ರದರ್ಶನದಲ್ಲಿ ಶಾಪಿಂಗ್‌ ಮಳಿಗೆಗಳು, ಆಹಾರ ಮೇಳ ಕೂಡ ಇರುತ್ತದೆ. ಅದಕ್ಕಾಗಿ ಫ‌ುಡ್‌ಕೋರ್ಟ್‌ ತೆರೆಯಲಾಗಿದೆ. ಕಳೆದ ಬಾರಿ ಪ್ರದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಈ ಬಾರಿ ಒಂದು ವಾರ ಮೊದಲೇ ಆಯೋಜಿಸಿರುವುದರಿಂದ ಒಂದೂವರೆ ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದರು.

ಈ ಬೃಹತ್‌ ಕೇಕ್‌ ಶೋ ಡಿ.14ರಿಂದ ಜ.1ರವರೆಗೆ ನಡೆಯಲಿದ್ದು, ಬೆಳಗ್ಗೆ 11ರಿಂದ ರಾತ್ರಿ 9 ಗಂಟೆವರೆಗೂ ಸಾರ್ವಜನಿಕರು ಭೇಟಿ ನೀಡಬಹುದು. ವಯಸ್ಕರರಿಗೆ 70 ರೂ. ಪ್ರವೇಶ ಶುಲ್ಕವಿದ್ದು, 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next