Advertisement

ಪ್ರಧಾನಿ ಕಾರ್ಯಕ್ರಮದಲ್ಲಿ ಟೆಂಟ್‌ ಕುಸಿದುಬಿದ್ದು 90 ಮಂದಿಗೆ ಗಾಯ

06:00 AM Jul 17, 2018 | Team Udayavani |

ಮಿಡ್ನಾಪುರ: ಪಶ್ಚಿಮ ಬಂಗಾಲದ ಮಿಡ್ನಾಪುರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಹಾಕಲಾಗಿದ್ದ ತಾತ್ಕಾಲಿಕ ಟೆಂಟ್‌ ಕುಸಿದು ಬಿದ್ದ ಪರಿಣಾಮ, ಮಹಿಳೆಯರೂ ಸೇರಿದಂತೆ 90 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ರ್ಯಾಲಿ ಸ್ಥಳದ ಮುಖ್ಯ ಆವರಣದ ಸನಿಹದಲ್ಲಿಯೇ ಮಳೆಯಿಂದ ರಕ್ಷಣೆ ಪಡೆಯಲೆಂದು ಟೆಂಟ್‌ ಹಾಕಲಾಗಿತ್ತು. ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗಲೇ ಮಧ್ಯಾಹ್ನ 1  ಗಂಟೆಗೆ ಟೆಂಟ್‌ ಕುಸಿದಿದೆ. ಅದು ಕುಸಿಯುತ್ತಿದ್ದುದನ್ನು ಗಮನಿಸಿದ ಪ್ರಧಾನಿ ಮೋದಿ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಸಿಬ್ಬಂದಿಗೆ ನೆರವು ನೀಡಲು ತೆರಳುವಂತೆ ಸೂಚಿಸಿದರು. ಜತೆಗೆ “ಟೆಂಟ್‌ ಏರಿದವರು ದಯವಿಟ್ಟು ಇಳಿಯಿರಿ. ಅಲ್ಲಿ ನಿಂತುಕೊಂಡವರೆಲ್ಲ ಕೆಳಗೆ ಇಳಿಯಿರಿ. ಗಾಬರಿಗೊಳ್ಳಬೇಡಿ. ದಯವಿಟ್ಟು ಯಾರೂ ಓಡಬೇಡಿ’ ಎಂದು ಮನವಿ ಮಾಡಿಕೊಂಡರು.

ಕೂಡಲೇ ಎಸ್‌ಪಿಜಿ ವಾಹನಗಳು, ಬೈಕ್‌ಗಳನ್ನು ಬಳಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಧಾನಿ ಕಾರ್ಯಕ್ರಮ ಕಾಣುವ ನಿಟ್ಟಿನಲ್ಲಿ ಹಲವು ಟೆಂಟ್‌ ಹಾಕಲಾಗಿದ್ದ ಕಂಬವನ್ನೇರಿಸಿದ್ದರು. ಭಾರ ಹೆಚ್ಚಾಗಿ ಅದು ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಭದ್ರತಾ ಲೋಪ?: ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ ಮತ್ತು ಬಿಜೆಪಿಯ ಇತರ ನಾಯಕರು ಇದು ಭದ್ರತಾಲೋಪ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, ಪ್ರಕರಣ ಭದ್ರತಾ ಲೋಪವಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಪ್ರಧಾನಿ ಕಾರ್ಯಕ್ರಮ ನಡೆದ ಸ್ಥಳ ಅನುಮೋದನೆ ಗೊಂಡಿತ್ತೇ ಎಂದು ಪ್ರಶ್ನಿಸಿದ್ದಾರೆ. ಪ್ರತಿ ವರ್ಷ ಪ್ರಧಾನಿ ಭದ್ರತೆಗಾಗಿ 350 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಪ್ರಧಾನಿ ಭಾಗವಹಿಸುವ ಸ್ಥಳ ಭದ್ರತಾ ವ್ಯವಸ್ಥೆಗೆ ಸರಿಯಾಗಿ ರಬೇಡವೇ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಹಸ್ತಾಕ್ಷರ ನೀಡಿದ ಪ್ರಧಾನಿ
ಕಾರ್ಯಕ್ರಮ ಮುಗಿದ ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಈ ವೇಳೆ ದುಃಖತಪ್ತರಾದ ಮೋದಿ, ಕೆಲವರ ಬಳಿ ಕುಳಿತು ಕೈಹಿಡಿದು ಮಾತನಾಡಿಸಿದರು. ಇದೇ ಸಂದರ್ಭದಲ್ಲಿ ಗಾಯಾಳು ಮಹಿಳೆ ಪ್ರಧಾನಿ ಮೋದಿಯವರ ಹಸ್ತಾಕ್ಷರಕ್ಕಾಗಿ ಮನವಿ ಮಾಡಿಕೊಂಡರು. ಬಳಿಯಲ್ಲಿಯೇ ಇದ್ದ ವೈದ್ಯ ಸಿಬ್ಬಂದಿ ಕೈಯಿಂದ ಪೇಪರ್‌ ಪೆನ್ನು ಪಡೆದುಕೊಂಡು ಅವರಿಗೆ ಹಸ್ತಾಕ್ಷರ ನೀಡಿದರು. ಜತೆಗೆ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದರು. 

Advertisement

ಸಿಂಡಿಕೇಟ್‌ ರಾಜ್‌
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ “ಸಿಂಡಿಕೇಟ್‌ ರಾಜ್‌’ ಇದೆ. ಅದರ ಒಪ್ಪಿಗೆಯಿಲ್ಲದೆ ಏನೂ ನಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಪ್ರತಿಪಕ್ಷಗಳ ನಾಯಕರ ಮೇಲೆ ಹಲ್ಲೆ, ಕೊಲೆಗಾಗಿ “ಸಿಂಡಿಕೇಟ್‌ ರಾಜ್‌’ ಬಳಕೆ ಮಾಡಲಾಗುತ್ತದೆ. ಅದೇ ಗುಂಪು ರೈತರ ಬೆಳೆಯನ್ನು ಕಿತ್ತುಕೊಳ್ಳುತ್ತದೆ. ಕೇಂದ್ರ ಸರ್ಕಾರ 2022ರೊಳಗೆ ರೈತರ ಆದಾಯ ದುಪ್ಪಟ್ಟಾಗಿಸಲು ಹಲವು ಕ್ರಮ ಕೈಗೊಂಡಿದೆ ಎಂದೂ ಹೇಳಿದ್ದಾರೆ.

ಧಾರ್ಮಿಕ ಭಯೋತ್ಪಾದನೆ ನಡೆಸುವ ಸಿಂಡಿಕೇಟ್‌ ಅನ್ನು ಬಿಜೆಪಿ ನಡೆಸುತ್ತಿದೆ. ಈ ಪದದ ಅರ್ಥವನ್ನು ಬಿಜೆಪಿಯೇ ಹೆಚ್ಚು ತಿಳಿದು ಕೊಂಡಿದೆ. ನಿಮ್ಮವರೇ ಮತಾಂಧರ ಗುಂಪನ್ನು ಹೊಂದಿದ್ದಾರೆ. ಅವರೇ ಜನರನ್ನು ವಿನಾ ಕಾರಣ ಥಳಿಸಿ, ಹಿಂಸಿಸುವ ವ್ಯವಸ್ಥೆ ಹೊಂದಿದ್ದಾರೆ.
ಪಾರ್ಥ ಚಟರ್ಜಿ, ಟಿಎಂಸಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next