Advertisement

ಸದ್ಯದಲ್ಲೇ “ಗೋ”ಆನ್‌ಲೈನ್‌!

07:26 AM Sep 22, 2017 | |

ಜೈಪುರ: ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್‌ ಸೈಟ್‌ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕ ವಾದ ವೆಬ್‌ಸೈಟ್‌ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್‌ಎಕ್ಸ್‌, ಕ್ವಿಕರ್‌ ಮಾದರಿಯಲ್ಲಿಯೇ. ಅಂದ ಹಾಗೆ ಈ ವೆಬ್‌ಸೈಟ್‌ ದೇಶಾದ್ಯಂತ ಅಲ್ಲ, ಬಿಜೆಪಿ ಆಡಳಿತ ಇರುವ ರಾಜಸ್ಥಾನದಲ್ಲಿ ಸರ್ಕಾರದ ವತಿಯಿಂದಲೇ ಇಂಥ ಒಂದು ವಿನೂತನ ಪ್ರಯತ್ನ ನಡೆಯಲಿದೆ.

Advertisement

ಕರ್ನಾಟಕ, ರಾಜಸ್ಥಾನ ಸೇರಿದಂತೆ ಗೋವುಗಳ ಮಾರಾಟ ತಡೆಯಲು ಗೋರಕ್ಷಕರೆಂಬ ಗುಂಪು ದಾಂಧಲೆ ನಡೆಸುವುದನ್ನು ತಪ್ಪಿಸಲೂ ಈ ವೆಬ್‌ಸೈಟ್‌ ನೆರವಾಗುತ್ತದೆ ಎನ್ನುವುದು ಸಿಎಂ ವಸುಂಧರಾ ರಾಜೇ ಸರ್ಕಾರದ ವಿಶ್ವಾಸ. ಓಎಲ್‌ಎಕ್ಸ್‌, ಕ್ವಿಕರ್‌ನಲ್ಲಿ ಹಳೆಯ ಟಿವಿ, ಕಂಪ್ಯೂಟರ್‌, ಮೊಬೈಲ್‌ ಫೋನ್‌ನ ಉತ್ಪಾದಕರ ವಿವರ, ಎಷ್ಟು ವರ್ಷ ಬಳಕೆಯಾಗಿದೆ, ಅದರ ಮಾಲೀಕರಿಗೆ ಎಷ್ಟು ದುಡ್ಡು  ನೀಡಬೇಕು ಎಂಬ ವಿವರಗಳು ಇರುತ್ತವೆ. ಅದೇ ರೀತಿ ಸರ್ಕಾರ ರೂಪಿಸಲು ಮುಂದಾಗಿರುವ ವೆಬ್‌ಸೈಟ್‌ನಲ್ಲಿ ದನದ ಫೋಟೋ, ಮಾಲೀಕ, ದೂರವಾಣಿ ಸಂಖ್ಯೆ, ಎಷ್ಟು ಲೀಟರ್‌ ಹಾಲು ನೀಡುತ್ತದೆ, ಮೊದಲನೇ ಕರು, ಎರಡನೇ ಕರು, ಸಿಗಬೇಕಾಗಿರುವ ದುಡ್ಡು ಇತ್ಯಾದಿ ಮಾಹಿತಿಗಳು ಇರುತ್ತವೆ.  ಹೊಸ ಆಲೋಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನದ ಗೋ ಕಲ್ಯಾಣ ಸಚಿವ ಒತರಾಮ್‌ ದೇವರ್ಶಿ “ಇಂಥ ಕ್ರಮದ ಮೂಲಕ ರೈತರ ಆದಾಯ ಹೆಚ್ಚಿಸಲಾಗುತ್ತದೆ. ಜತೆಗೆ ಯಾವುದೇ ಒಂದು ದನ ಬಿಟ್ಟು ಹೋದಂತೆ ಆಗುವುದಿಲ್ಲ. ಮಧ್ಯವರ್ತಿಗಳ ಕಾಟ ಇಲ್ಲದೆಯೇ ದನಗಳನ್ನು ಮಾರಲು ಅನುಕೂಲವಾಗುತ್ತದೆ’ ಎಂದು ಹೇಳಿದ್ದಾರೆ. 

ಈ ಉದ್ದೇಶಕ್ಕಾಗಿ ರಾಜಸ್ಥಾನ ಸರ್ಕಾರ ರೈತ ಸಂಘಟನೆಗಳ ನೆರವು ಕೋರಿದೆ. ಇದರ ಜತೆಗೆ ಸಾಂಪ್ರದಾಯಿಕ ಗೋ ತಳಿಗಳಾದ
ಗಿರ್‌, ತಾರ್ಪಾರ್ಕರ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಬಳಿಕ ಸಾಯ್‌ವಾಲ್‌, ಕಾಂಕ್ರೆಜ್‌, ಮತ್ತು ಹರ್ಯಾನ್ವಿ ತಳಿ ಅಭಿವೃದ್ಧಿಯತ್ತ ಗಮನ ಹರಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಆ ರಾಜ್ಯದಲ್ಲಿ 2,327 ಗೋ ಶಾಲೆಗಳಿದ್ದು, 6,60,000 ಗೋವುಗಳಿವೆ. 2012ರಲ್ಲಿ ನಡೆಸಿದ ಗಣತಿ ಪ್ರಕಾರ ರಾಜಸ್ಥಾನದಲ್ಲಿ 1.33 ಕೋಟಿ ಸಾಕು ಪ್ರಾಣಿಗಳಿವೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಗೋ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿವೆ. ಕಳೆದ ತಿಂಗಳು ರಾಜಸ್ಥಾನದ ಗೋ ಕಲ್ಯಾಣ ಸಚಿವಾಲಯ 5,50,000 ಗೋವುಗಳಿಗೆ ವಿಶೇಷ ಗುರುತಿನ ಚೀಟಿ ನೀಡಿ, ಗೋವುಗಳಿಗೆ ಏನಾದರೂ ಸಮಸ್ಯೆ ಉಂಟಾದರೆ ಅದಕ್ಕೆ ಆಯಾ ಗೋ ಶಾಲೆಯ ನಿರ್ವಾಹಕರೇ ಹೊಣೆ ಎಂದು ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next