ರಾಯಚೂರು: ಭಗವದ್ಗೀತೆ ಎನ್ನುವುದು ಕೇವಲ ಒಂದು ಗ್ರಂಥವಾಗಿರದೆ ನಾವು ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ಸಾರುವ ಕ್ರಮ ಶಿಕ್ಷಣವಾಗಿದೆ. ಅದನ್ನು ಪಾಲಿಸಿದರೆ ಜೀವನದ ಬಾಗಶಃ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ಗಾಜಗಾರಪೇಟೆಯಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕದಿಂದ ರವಿವಾರ ಆಯೋಜಿಸಿದ್ದ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 2007ರಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದ್ದು, ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದೇ ಅಭಿಯಾನದ ಮುಖ್ಯ ಉ¨ªೇಶವಾಗಿದೆ. ಮನುಷ್ಯನ ಮನೋಭಾವ ಸಂಕುಚಿತಗೊಂಡಿದೆ. ಅದನ್ನು ವಿಶಾಲಗೊಳಿಸಬೇಕು ಎಂದರು.
ಬದಲಾದ ಜೀವನಶೈಲಿ ಜನರಿಗೆ ಮಾರಕವಾಗುತ್ತಿದೆ. ಆತ್ಮಹತ್ಯೆ, ಹೃದಯಾಘಾತ, ಮಧುಮೇಹ, ರಕ್ತದೊತ್ತಡದಂಥ ಕಾಯಿಲೆಗಳು ಹೆಚ್ಚಾಗಿವೆ. ಯೋಗ, ಆಯುರ್ವೇದ ಹುಟ್ಟಿದ ದೇಶದಲ್ಲಿ ಇಂಥ ವಾತಾವರಣ ನಿರ್ಮಾಣಗೊಂಡಿರುವುದು ವಿಪರ್ಯಾಸ ಎಂದರು. ಶಾಸಕ ಡಾ| ಶಿವರಾಜ ಪಾಟೀಲ್ ಮಾತನಾಡಿ, ಭಗವದ್ಗೀತೆಯಲ್ಲಿ ಉತ್ತಮ ಸಂದೇಶಗಳಿದ್ದು, ಅದರಂತೆ ನಡೆದರೆ ಕಷ್ಟಗಳು ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಮಾಜಿ ಎಂಎಲ್‌ಸಿ ಎನ್. ಶಂಕ್ರಪ್ಪ ಮಾತನಾಡಿ, ಭಗವದ್ಗೀತೆ ವ್ಯಕ್ತಿತ್ವ ವಿಕಸನದೊಂದಿಗೆ ಜೀವನದಲ್ಲಿ ಜಿಗುಪ್ಸೆ ಹೊಂದದಂತೆ ಪ್ರೇರಣೆ ನೀಡಿ ಭಾವನಾತ್ಮಕವಾಗಿ ಪರಿವರ್ತನೆ ಮೂಡಿಸುತ್ತದೆ. ಭಗವದ್ಗೀತೆ ಎಲ್ಲರೂ ಅಧ್ಯಯನ ಮಾಡಬೇಕು. ಭಗವದ್ಗೀತೆಯಲ್ಲಿ ಹೇಳಿದ ಮಾತುಗಳು ಮನುಕುಲಕ್ಕೆ ಹೇಳಿದ ಮಾತುಗಳು, ಇದು ಇವು ಕೇವಲ ಹಿಂದೂ ಧರ್ಮಕ್ಕೆ ಎಂದು ಎಲ್ಲೂ ಹೇಳಿಲ್ಲ ಎಂದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಿಳೆಯರು ಮಕ್ಕಳು ಭಗವದ್ಗೀತೆಯ ಮೂರನೇ ಅಧ್ಯಾಯದ 33 ಶ್ಲೋಕಗಳನ್ನು ಪಠಿಸಿದರು. ಮಕ್ಕಳು ಕೃಷ್ಣಾರ್ಜುನ ವೇಷಧರಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಿರಸಿಯ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ಟ ಬಳ್ಳಿ, ನಗರಸಭೆ ಸದಸ್ಯ ಈ. ಶಶಿರಾಜ್, ಮಾಜಿ ಸದಸ್ಯ ಹರೀಶ್ ನಾಡಗೌಡ, ಆರ್‌ಡಿಎ ಅಧ್ಯಕ್ಷ ವೈ. ಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಬಿ. ಗೋವಿಂದ, ಮುಖಂಡ ರವೀಂದ್ರ ಜಲ್ದಾರ್, ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಅಧ್ಯಕ್ಷ ಡಾ| ಆನಂದ ತೀರ್ಥ ಫಡ್ನಿàಸ್, ಕಾರ್ಯಾಧ್ಯಕ್ಷ
ಗುರುರಾಜಾಚಾರ್ ತಾಳಿಕೋಟೆ ಸೇರಿದಂತೆ ಇತರರು ಇದ್ದರು.
ಇಂದು ಜೀವನಶೈಲಿ, ನೈತಿಕತೆ ಕೆಟ್ಟಿದೆ. ಅದನ್ನು ಮರುಸ್ಥಾಪಿಸಬೇಕಿದೆ. ಜನರಲ್ಲಿ ಮೋಸ, ವಂಚನೆ, ಅಪರಾಧ ಧೋರಣೆ ಹೆಚ್ಚುತ್ತಿದೆ. ಮಕ್ಕಳಲ್ಲಿ ನೈತಿಕತೆ, ಸಾಮಾಜಿಕ ಸಾಮರಸ್ಯ ಬೆಳೆಸಬೇಕಿದೆ. ಅದು ಅಧ್ಯಾತ್ಮದಿಂದ ಸಾಧ್ಯವಾಗಲಿದೆ. ಇಂದು ಶಿಕ್ಷಿತರೇ ಭಯೋತ್ಪಾದಕರು, ಆತಂಕವಾದಿಗಳಾಗಿರುವುದು ಕಳವಳಕಾರಿ. ಸಂಸ್ಕಾರದ ಕೊರತೆಯಿಂದ ಅವರು ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಸಂಸ್ಕಾರ ಬಹಳ ಮುಖ್ಯ.
ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಸೋಂದಾ ಸ್ವರ್ಣವಲ್ಲಿ ಮಠ