Advertisement

ಅಸತ್ಯ ಸತ್ಯವನ್ನು ಆಡಳಿತ ಮಾಡಲು ಹೊರಟಿದೆ: ಬೊಮ್ಮಾಯಿ

11:03 AM May 16, 2022 | Team Udayavani |

ಹುಬ್ಬಳ್ಳಿ: ಕಲಿಯುಗದಲ್ಲಿ ಕರ್ಮ ಮಾಡುವ ಮೊದಲೇ ಫಲ ಕೇಳುವವರು ಹೆಚ್ಚಾಗಿದ್ದಾರೆ. ಅಸತ್ಯ ಸತ್ಯವನ್ನು ಆಡಳಿತ ಮಾಡಲು ಹೊರಟಿದೆ. ಅನ್ಯಾಯ ನ್ಯಾಯದ ಮೇಲೆ ತನ್ನ ಪರಾಕ್ರಮ ತೋರುತ್ತಿದೆ. ಇದು ಬದಲಾವಣೆಯಾಗಲು ದೊಡ್ಡ ವೈಚಾರಿಕ ಕ್ರಾಂತಿ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭೈರಿದೇವರಕೊಪ್ಪದ ಓಂ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿಯಲ್ಲಿ ಭಗವದ್ಗೀತಾ ಜ್ಞಾನಲೋಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಗವದ್ಗೀತೆ ಧರ್ಮ ಗ್ರಂಥವಲ್ಲ. ಅದೊಂದು ಜೀವನದ ಸಾರವಾಗಿದೆ. ಎಲ್ಲಾ ಧರ್ಮಗ್ರಂಥಗಳಿಗಿಂತಲೂ ಇದು ಶ್ರೇಷ್ಠವಾಗಿದೆ. ಇದು ಮನ ಪರಿವರ್ತನೆಗೆ ದಾರಿಯಾಗಿದೆ. ಲೌಕಿಕವಾಗಿ ತಿಳಿದುಕೊಳ್ಳಲು ಭಗವದ್ಗೀತೆ, ಆಂತರಿಕವಾಗಿ ತಿಳಿದುಕೊಳ್ಳಲು ಆತ್ಮಸಾಕ್ಷಿ ಬೇಕು. ಇವರೆಡು ಪರಮಾತ್ಮನ ಕಾಣಿಕೆಯಾಗಿದೆ. ಇವೆರಡನ್ನು ತಿಳಿದುಕೊಂಡು ಜೀವನ ಮಾಡಬೇಕು ಎಂದರು.

ಯಾತಕ್ಕಾಗಿ ಮಾನವ ಜನ್ಮ ತಾಳಿದ್ದೇವೆ, ಜನ್ಮದ ಸಾರ್ಥಕತೆ ಏನು, ನಾನಿರುವ ಸ್ಥಳ ಯಾವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ನಮಗೆ ಗೊತ್ತಿರುವುದಷ್ಟೇ ಜಗತ್ತು ಎಂದುಕೊಂಡಿದ್ದೇವೆ. ವಿಶ್ವ, ಸೃಷ್ಟಿಯ ಮೌಲ್ಯಗಳು, ಸರಿ-ತಪ್ಪುಗಳು ಅರ್ಥೈಸಿಕೊಳ್ಳಬೇಕು. ಇದನ್ನು ಈಶ್ವರೀಯ ವಿವಿ ಮಾಡುತ್ತಿದೆ. ಈ ಕಾರ್ಯದ ಹಿಂದೆ ಹಲವರ ಸೇವೆ, ತ್ಯಾಗವಿದೆ. ಇಡೀ ವಿಶ್ವಕ್ಕೆ ಭಗವದ್ಗೀತೆ ಪರಿಚಯಿಸಿ ಜೀವನ ಪಾವನಗೊಳಿಸುವ ಕೆಲಸ ಇಲ್ಲಿಂದ ನಡೆಯುತ್ತಿರುವುದು ಶ್ಲಾಘನೀಯ. ಸಂಸ್ಕಾರ ಭರಿತ ಸಂಸಾರವಾಗಬೇಕು. ಅಂದಾಗ ಮಾತ್ರ ಭಾರತ ಶ್ರೇಷ್ಠವಾಗಲಿದೆ. ಮೌಲ್ಯಭರಿತವಾದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ತೊಡೋಣ ಎಂದು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವೇದ, ಶಾಸ್ತ್ರ, ಉಪನಿಷತ್ತಿನ ತಳಹದಿ ಭಗವದ್ಗೀತೆಯಾಗಿದೆ. ಇದನ್ನು ಜನರಿಗೆ ಅರ್ಥ ಮಾಡಿಸುವ ಕೆಲಸವನ್ನು ಈಶ್ವರಿಯ ವಿವಿ ಮಾಡಿದೆ. ಇಂತಹ ಸಾವಿರಾರು ಕಾರ್ಯಗಳಿಂದಾಗಿ ಈ ದೇಶ ಅಧ್ಯಾತ್ಮದ ತವರೂರಾಗಿದೆ. ಚಾರ್ವಾಕನನ್ನು ಋಷಿ ಎಂದು ಕರೆದ ದೇಶ ನಮ್ಮದು. ಹೀಗಾಗಿಯೇ ನಮ್ಮ ದೇಶಕ್ಕೆ ಬರುವವರ ಸಂಖ್ಯೆ ಹೆಚ್ಚು. ಧರ್ಮವೆಂದರೆ ಜಾತಿ, ಇನ್ನೊಂದಕ್ಕೆ ಸೀಮಿತವಾದುದ್ದಲ್ಲ. ಧರ್ಮ ಎಂದರೆ ಜೀವನದ ಮಾರ್ಗ. ಭಗವದ್ಗೀತೆ ಅಧ್ಯಯನ ಮಾಡಿದರೆ ಅವರಿಗೆ ಜೀವನದಲ್ಲಿ ಜಿಗುಪ್ಸೆ ಬರುವುದಿಲ್ಲ. ರಾಜಕಾರಣಿಗಳು ಸುಖೀಗಳಲ್ಲ. ಒತ್ತಡ ರಹಿತ ಜೀವನ ಭಗವದ್ಗೀತೆಯಿಂದ ಸಾಧ್ಯ ಎಂದರು.

ಮೌಂಟ್‌ಅಬು ಬ್ರಹ್ಮಕುಮಾರೀಸ್‌ ಅಡಿಷನಲ್‌ ಸೆಕ್ರೆಟರಿ ಜನರಲ್‌ ಬ್ರಿಜ್‌ ಮೋಹನ್‌ ಭಾಯಿಜಿ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ, ಜೀವನ ಅರ್ಥ ಸಾರುವ ಕಾರ್ಯದಲ್ಲಿ ಲಕ್ಷಾಂತರ ಅಕ್ಕ, ಅಣ್ಣಂದಿರು ತೊಡಗಿದ್ದಾರೆ. ಇದೀಗ ಭಗವದ್ಗೀತಾ ಜ್ಞಾನಲೋಕ ಲೋಕಾರ್ಪಣೆಗೊಂಡಿರುವ ಕಾರ್ಯದಿಂದಾಗಿ ಹುಬ್ಬಳ್ಳಿ ಭಗವದ್ಗೀತೆಯ ದೊಡ್ಡ ಕೇಂದ್ರವಾಗಲಿದೆ ಎಂದು ಹೇಳಿದರು.

Advertisement

ರಾಜಯೋಗಿನಿ ಸಂತೋಷ ದೀದಿಜಿ ಮಾತನಾಡಿ, ಇದೊಂದು ಸುಂದರವಾದ ಪ್ರದರ್ಶನಾಲಯವಾಗಿದೆ. ಇಲ್ಲಿಗೆ ಬಂದರೆ ಭಗವದ್ಗೀತೆಯ ಸಂಪೂರ್ಣ ಅರಿವಾಗಲಿದೆ. ಆಧ್ಯಾತ್ಮದ ಕಣ್ಣು ತೆರೆಯಲಿದೆ. ಸೃಷ್ಟಿಯಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆಯೋ ಅದಕ್ಕೆ ತಕ್ಕ ಫಲ ನೀಡುತ್ತದೆ ಎಂದರು.

ಸಚಿವ ಹಾಲಪ್ಪ ಆಚಾರ, ಕೈಮಗ್ಗ ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಸೋಮಶೇಖರರೆಡ್ಡಿ, ಅರವಿಂದ ಬೆಲ್ಲದ, ಕರುಣ ಭಾಯಿಜಿ, ಮೃತ್ಯುಂಜಯ ಭಾಯಿಜಿ, ನಿರ್ಮಲಾ ಬೆಹನ್‌ಜೀ, ರಾಜಯೋಗಿನಿ ಚಕ್ರದಾರಿ ದೀದಿಜಿ, ಶುಕ್ಲಾ ದೀದಿಜಿ, ಶಾರದಾ ದೀದಿಜಿ, ಸೋಮ್‌ ದೀದಿಜಿ, ಪುಷ್ಪಾ ಬೆಜನ್‌ಜೀ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next