ಚಿತ್ರದುರ್ಗ: ಡಿಸೆಂಬರ್ ಅಂತ್ಯದೊಳಗೆ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಯಲಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಗುರುವಾರ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಶರಣರು ಮಾತನಾಡಿದರು. ತ್ವರಿತಗತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದರು.
ಜಿಲ್ಲೆಯ ರೈತರು ಸೇರಿದಂತೆ ಕೆಲವರು ಭದ್ರಾ ಯೋಜನೆ ಬಗ್ಗೆ ಸಾಕಷ್ಟು ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗುವುದಿಲ್ಲ, ನೀರು ಬರುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಾತುಗಳು ಕೇಳಿ ಬಂದಿದ್ದವು. ಇದರಿಂದ ವಸ್ತುಸ್ಥಿತಿ ಅರಿಯಲು ಜನಪ್ರತಿನಿಧಿಗಳು ಮತ್ತು ಅನುಷ್ಠಾನಾಧಿಕಾರಿಗಳ ಜೊತೆಗೆ ರೈತ ಸಂಘದ ಮುಖಂಡರನ್ನು ಜೊತೆಗೆ ಕರೆದುಕೊಂಡು ಬಂದು ಕಾಮಗಾರಿಗಳ ವೀಕ್ಷಣೆ ಮಾಡಿದ್ದೇವೆ. ಈಗ ನೂರಕ್ಕೆ ನೂರರಷ್ಟು ಡಿಸೆಂಬರ್ ವೇಳೆಗೆ ಭದ್ರಾ ನೀರು ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಎಂಬ ವಿಶ್ವಾಸ ಮೂಡಿದೆ ಎಂದರು.
ರೈತ ಸಂಘದ ಮುಖಂಡರು ಸೇರಿದಂತೆ ಕೆಲವರು ಭದ್ರಾ ನೀರು ಬರುವುದರ ಬಗ್ಗೆ ಭಿನ್ನಾಭಿಪ್ರಾಯದ ಹೇಳಿಕೆಗಳನ್ನು ನೀಡುತ್ತಿದ್ದರು. ಇಂತಹ ಭಿನ್ನಾಭಿಪ್ರಾಯ, ಗೊಂದಲ ಬೇಡಕ್ಕೆ ತಂಡೆ ಹಾಕಬೇಕು. ಎಲ್ಲರೂ ಒಟ್ಟಾಗಿ ಯೋಜನೆ ಪೂರ್ಣಗೊಳಿಸುವುದರ ಬಗ್ಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಸ್ಥಳಗಳಾದ ಹೊಸದುರ್ಗ ತಾಲೂಕಿನ ಜಾನಕಲ್ ಸುರಂಗ, ಹಾಲುರಾಮೇಶ್ವರ, ಮಧುರೆ, ಸಾಣೇಹಳ್ಳಿ, ಅಜ್ಜಂಪುರ, ಪಂಪ್‌ಹೌಸ್, ತರೀಕೆರೆ, ಭದ್ರಾ ಜಲಾಶಯ ಮತ್ತು ಮುತ್ತಿನಕೊಪ್ಪ ಬಳಿ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಸಂಗ್ರಹಗೊಳ್ಳುವ ಸ್ಥಳಗಳ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ತರೀಕೆರೆ ಶಾಸಕ ಡಿ.ಎಸ್. ಸುರೇಶ್, ರೈತ ಮುಖಂಡರುಗಳಾದ ಹೊರಕೇರಪ್ಪ, ಸಿದ್ಧರಾಮಣ್ಣ, ಸಿದ್ಧವೀರಪ್ಪ, ನುಲೇನೂರು ಶಂಕರಪ್ಪ, ಸುರೇಶ್‌ಬಾಬು, ವೀರೇಂದ್ರಕುಮಾರ್, ಜಿಪಂ ಸದಸ್ಯರಾದ ಶಶಿಕಲಾ ನಟರಾಜ್, ಕೆ.ಸಿ. ಲಿಂಗರಾಜ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಸೇರಿದಂತೆ ನೂರಾರು ರೈತರು 7 ಬಸ್ ಹಾಗೂ 20ಕ್ಕೂ ಹೆಚ್ಚಿನ ಕಾರುಗಳಲ್ಲಿ ತೆರಳಿ ಕಾಮಗಾರಿಯನ್ನು ವೀಕ್ಷಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡು ಕೆರೆ ಕಟ್ಟೆಗಳಿಗೆ ನೀರು ಹರಿಯಲು ಕನಿಷ್ಠ ನಾಲ್ಕೈದು ವರ್ಷಗಳಾದರೂ ಬೇಕು.
ಆದರೆ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ. ಜಿಲ್ಲಾಡಳಿತ ತ್ವರಿತವಾಗಿ ಕೆಲಸ
ಪೂರ್ಣಗೊಳಿಸಬೇಕು.
ಡಾ| ಶಿವಮೂರ್ತಿ ಮುರುಘಾ ಶರಣರು.