Advertisement
ಮಹಿಳೆಯರಿಗೂ ಒಡವೆಗೂ ಅವಿನಾಭಾವ ಸಂಬಂಧ. ಇತರರ ಮುಂದೆ ಹೆಚ್ಚು ಆಕರ್ಷಕವಾಗಿ ಕಾಣಲು ಆಭರಣದ ಸಹಾಯವೂ ಬೇಕು. ಆಭರಣಗಳು ಅನೇಕ; ಅಂತೆಯೇ ಅದರ ವೈವಿಧ್ಯ ಕೂಡ. ಇಂದು ಘಲ್ಲೆನ್ನುವ ಕೈ ಬಳೆಗಿಂತಲೂ ಸದ್ದಿಲ್ಲದೆ ಕೈಯ ಮೆರಗನ್ನು ಹೆಚ್ಚಿಸುವ ಬ್ರೇಸ್‌ಲೆಟ್ ಹೆಂಗಳೆಯರ ನೆಚ್ಚಿನ ಆಭರಣ ಎನ್ನಬಹುದು. ಕೈಬಳೆಗಳಿಗೆ ಸಂವಾದಿಯಾಗುವ ಬ್ರೇಸ್‌ಲೆಟ್ ತರತರದ ವಿನ್ಯಾಸದೊಂದಿಗೆ ರೂಪಿಸಲಾಗಿದ್ದು, ಕೈಯ ಅಂದಕ್ಕೆ ಸಾಟಿ. ಎಲ್ಲ ಬಟ್ಟೆಗೊಪ್ಪುವ ಈ ಬ್ರೇಸ್‌ಲೆಟ್ ಹೆಂಗಳೆಯರ ಮೆಚ್ಚಿನ ಆಭರಣ.
ಬಹಳ ಹಿಂದಿನಿಂದಲೂ ಬ್ರೇಸ್‌ಲೆಟ್ ಆಭರಣ ತೊಡುವ ಆಚರಣೆಯಿತ್ತು. ರಾಜರ ಕಾಲದಲ್ಲಿ ಕೈಕಡಗ ವನ್ನು ತೊಡುತ್ತಿದ್ದು, ಭಾರ ಕಡಿಮೆಯಾಗಿಸಲು ಚೈನ್ ಮಾದರಿ ಪರಿಚಿತವಾಯಿತಂತೆ. ಅಂದರೆ ಚಿನ್ನ, ಬೆಳ್ಳಿ, ಲೋಹದ ಚೈನ್‌ಗೆ ಸೂಕ್ಷ್ಮ ವಿನ್ಯಾಸದಿಂದ ಅವುಗಳನ್ನು ತಯಾರಿಸುತ್ತಿದ್ದು ಬಹಳ ಕಾಲ ಬಳಸುತ್ತಿದ್ದರಂತೆ. ಇಂದು ಅಂತಹ ವಿನ್ಯಾಸಗಳೇ ಮರು ಆವಿಷ್ಕಾರಕ್ಕೆ ಒಳಪಟ್ಟು ತಾಮ್ರ, ನೈಲನ್‌ದಾರ, ರಬ್ಬರ್, ಚರ್ಮ, ಹಕ್ಕಿ ಪುಕ್ಕ, ಆನೆ ಕೂದಲು, ಹವಳವನ್ನು ಇಂದಿಗೂ ಬ್ರೇಸ್‌ಲೆಟ್ ವಿನ್ಯಾಸಕ್ಕೆ ಅತಿ ಹೆಚ್ಚು ಬಳಸುತ್ತಿರುವುದನ್ನು ಕಾಣಬಹುದು. ಇಷ್ಟವಾಗಲು ಕಾರಣವೇನು?
ಇದು ತೀರಾ ಸರಳ ವಿನ್ಯಾಸವನ್ನು ಹೊಂದಿದ್ದರೂ ಬೇರೆ ಯವರ ಗಮನವನ್ನು ನಮ್ಮತ್ತ ಸೆಳೆಯುವಂಥ ಆಭರಣ. ವಿನ್ಯಾಸದಲ್ಲಿ ಬಹು ಆಯ್ಕೆಯನ್ನು ಹೊಂದಿರುವುದರಿಂದ ಈ ಆಭರಣವು ಸ್ತ್ರೀಗೆ ಮಾತ್ರವಲ್ಲದೇ ಪುರುಷರಿಗೂ ಚೆನ್ನಾಗಿ ಒಪ್ಪುತ್ತದೆ. ಬಹುತೇಕರ ಫ್ಯಾಷನ್ ಸಹ. ಎಲ್ಲ ಬಟ್ಟೆಗೂ ಹೋಲುವಂತೆ ನಿತ್ಯದ ಬಳಕೆಗೂ ಸಾಧ್ಯವಿರುವುದರಿಂದ ಎಲ್ಲರ ಅಚ್ಚುಮೆಚ್ಚು.
Related Articles
ಇತ್ತೀಚಿನ ದಿನಗಳಲ್ಲಿ ಬ್ರೇಸ್‌ಲೆಟ್‌ನಲ್ಲಿ ಕೆಲವೊಂದು ಅಕ್ಷರಗಳನ್ನು ಅಳವಡಿಸಲಾಗುತ್ತಿದೆ. ರಬ್ಬರ್ ವಿನ್ಯಾಸದಲ್ಲಿ ಸ್ನೇಹ, ಪ್ರೀತಿ ಸಂಬಂಧಗಳ ಕುರಿತ ಸಂದೇಶವನ್ನು ಬಳಸಲಾಗುತ್ತಿದೆ. ಜೋತುಬೀಳುವ ಹೂ, ಸರಳ ಮಣಿಗಳ ಪೋಣಿಸುವಿಕೆ, ಕಪ್ಪೆ ಚಿಪ್ಪು ವಿನ್ಯಾಸ ಹೆಚ್ಚು ಜನಪ್ರಿಯವಾಗುತ್ತಿದೆ. ತಮ್ಮ ಹೆಸರಿನ ಬ್ರೇಸ್‌ಲೆಟ್ ಆಯ್ಕೆ ಮಾಡುವವರಲ್ಲಿ ಕಾಲೇಜು ಕನ್ಯೆಯರೇ ಅತಿ ಹೆಚ್ಚು. ಕಪ್ಪು, ಕೆಂಪು ನೂಲಿಗೆ ಬೆಳ್ಳಿಯ ಚೂರನ್ನು ಅಡ್ಡಕಟ್ಟಿದ ವಿನ್ಯಾಸ ಆಭರಣ ಮಳಿಗೆಯಲ್ಲಿ ಲಭ್ಯವಿದ್ದು ಕೈಗೆ ಮಾತ್ರವಲ್ಲದೇ ಕಾಲಿಗೂ ಇದನ್ನು ತೊಡುತ್ತಿರುವುದು ವಿಶೇಷ.
Advertisement
ನಂಬಿಕೆಯೊಂದಿಗೆ ಆರೋಗ್ಯಕ್ಕೂ ಬಳಕೆಇಂದು ತಮ್ಮ ಗ್ರಹಫಲಕ್ಕೆ ಅನುಗುಣವಾಗಿ ಹರಳನ್ನು ಆಯ್ಕೆಮಾಡುವುದು ಇಲ್ಲವೇ ಆನೆ ಬಾಲದ ಕೂದಲಿನ ಬ್ರೇಸ್‌ಲೆಟ್ ತೊಡುವುದು ಒಳ್ಳೆಯದು ಎನ್ನುವ ಒಂದು ನಂಬಿಕೆ ಇದೆ. ಆದರೆ ಈ ನಂಬಿಕೆಗೂ ಒಂದು ತರ್ಕವಿದೆ. ಲೋಹದ ಆಭರಣಕ್ಕೆ ದೇಹದ ಉಷ್ಣಾಂಶ ನಿಯಂತ್ರಿಸುವ ಸಾಮರ್ಥ್ಯವಿದೆ ಎಂಬ ನಂಬಿಕೆ ಇದ್ದು, ಅದು ಆರೋಗ್ಯವೃದ್ಧಿಗೂ ಪೂರಕ ಎಂಬ ಅಭಿಪ್ರಾಯವಿರುವುದು ಸುಳ್ಳಲ್ಲ. ಇರಲಿ
ನಿಮ್ಮ ಆಯ್ಕೆ
-ಬ್ರೇಸ್‌ಲೆಟ್ ತೊಡುವ ಮುನ್ನ ನಿಮ್ಮ ಕೈಗೆ ಯಾವ ರೀತಿ ವಿನ್ಯಾಸ, ಯಾವ ರೀತಿ ಲೋಹ ಸೂಕ್ತವೆಂಬುವುದನ್ನು ಅರಿತಿರಬೇಕು.
-ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸಬಂದಿದೆ, ಸುಂದರವಾಗಿದೆ ಎಂಬ ಮಾತ್ರಕ್ಕೆ ತೊಡಲು ಪ್ರಯತ್ನಿಸಿ ಆಭಾಸಕ್ಕೆ ಗುರಿಯಾಗದಿರಿ.
-ಎಷ್ಟೇ ಚಂದದ ವಿನ್ಯಾಸವಿದ್ದರೂ ನಿಮಗೆ ಅದು ಹೋಲದಿದ್ದರೆ ವ್ಯರ್ಥವಷ್ಟೇ. ಜತೆಗೆ ಖರೀದಿಸಿದ ಎರಡು ದಿನದ ಬಳಿಕ ಬೇಸರವಾಗಿ ಮೂಲೆಗೆಸೆಯಬೇಕಾದೀತು.
-ಪಾಶ್ಚಾತ್ಯ ಬಟ್ಟೆ ತೊಡುವವರು ಹೆಚ್ಚಾಗಿ ರಬ್ಬರ್ ಮತ್ತು ಲೆದರ್ (ಚರ್ಮ)ದ ಬ್ರೇಸ್‌ಲೆಟ್ ತೊಡುವುದು ಸಾಮಾನ್ಯ.
-ಸಾಂಪ್ರದಾಯಿಕ ಸಲ್ವಾರ್, ಸೀರೆ ಇತರ ಉಡುಗೆಗೆ ಚಿನ್ನ, ಬೆಳ್ಳಿ ಬ್ರೇಸ್‌ಲೆಟ್ ಹೆಚ್ಚು ಶೋಭೆ.
-ನೀವು ವಾಚ್ ತೊಡುವವರಾಗಿದ್ದರೆ ಬ್ರೇಸ್‌ಲೆಟ್ ವಾಚ್‌ವಿನ್ಯಾಸಕ್ಕಿಂತಲೂ ವಿಭಿನ್ನವಾಗಿರುವಂತೆ ಆಯ್ಕೆ ಮಾಡಿ.
-ನಿತ್ಯದ ಬಳಕೆಗೆ ಸರಳ ವಿನ್ಯಾಸವಿರುವ ಬ್ರೇಸ್‌ಲೆಟ್ ಸೂಕ್ತ. ಹಬ್ಬ ಆಚರಣೆಗೆ ತೊಡಲಿಚ್ಛಿಸುವವರು ಸ್ವಲ್ಪ ಮಟ್ಟಿನ ರಾರಾಜಿಸುವ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.