Advertisement

ಬಂಗಾಳ ಹೆಸರು ಬದಲಿಲ್ಲ

01:37 AM Jul 04, 2019 | Team Udayavani |

ನವದೆಹಲಿ/ಕೋಲ್ಕತಾ: ಪಶ್ಚಿಮ ಬಂಗಾಳವನ್ನು ‘ಬಂಗಾಳ’ ಎಂದು ಹೆಸರು ಬದಲಿಸುವ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಸ್ತಾಪಕ್ಕೆ ಇದುವರೆಗೆ ಅನುಮೋದನೆ ನೀಡಲಾಗಿಲ್ಲ. ಹೀಗೆಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಬುಧವಾರ ಸ್ಪಷ್ಟಪಡಿಸಿದೆ. ಈ ಬೆಳವಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೀಘ್ರವೇ ಈ ಅಂಶ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಲಿಖೀತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ರಾಜ್ಯದ ಹೆಸರು ಬದಲಾವಣೆಗೆ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ಅದಕ್ಕೆ ಎಲ್ಲಾ ಅಂಶಗಳನ್ನೂ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಕಳೆದ ವರ್ಷದ ಜು.26ರಂದು ಮಮತಾ ಬ್ಯಾನರ್ಜಿ ಸರ್ಕಾರ ಈ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. 2011ರಲ್ಲಿ ಪಶ್ಚಿಮ್‌ ಬಂಗ, 2016ರಲ್ಲಿ ಇಂಗ್ಲಿಷ್‌ನಲ್ಲಿ ‘ಬೆಂಗಾಲ್’, ‘ಬಾಂಗ್ಲಾ ಎಂದು ಬಂಗಾಳಿಯಲ್ಲಿ, ಹಿಂದಿಯಲ್ಲಿ ‘ಬಂಗಾಲ್’ ಹೆಸರು ಬದಲಿಗೆ ಮಮತಾ ಸರ್ಕಾರ ನಿರ್ಧರಿಸಿತ್ತು. 2018ರಲ್ಲಿ ಇದೇ ವಿಚಾರ ಪರಿಶೀಲನೆಗಾಗಿ ವಿದೇಶಾಂಗ ಖಾತೆಗೂ ಸಲ್ಲಿಸಲಾಗಿತ್ತು.

800 ಭಯೋತ್ಪಾದಕರ ಹತ್ಯೆ: ಜಮ್ಮು ಮತ್ತು ಕಾಶ್ಮೀರದಲ್ಲಿ 2014 ರಿಂದ 2018ರ ವರೆಗೆ 800 ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ. 2018ರಲ್ಲಿಯೇ 249 ಮಂದಿಯನ್ನು ಸಾಯಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್‌ ಎಸ್ಸೋ ನಾಯಕ್‌ ಲೋಕಸಭೆಗೆ ಬುಧವಾರ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. 2014ರಲ್ಲಿ 104, 2015ರಲ್ಲಿ 97, 2016ರಲ್ಲಿ 140, 2017ರಲ್ಲಿ 210 ಮಂದಿ ಉಗ್ರರನ್ನು ಕೊಲ್ಲಲಾಗಿದೆ.

ಲಕ್ಷಗಟ್ಟಲೆ ಮೊತ್ತ ಬೇಕು: ದೇಶದ ರೈಲ್ವೆ ಜಾಲದಲ್ಲಿ ಸಿಗುವ ಎಲ್ಲಾ ರೀತಿಯ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲು ಲಕ್ಷಾಂತರ ರೂ. ಮೊತ್ತ ಬೇಕು ಎಂದಿದ್ದಾರೆ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್. ಇನ್ನೂ ಇರುವ 21 ಸಾವಿರ ಲೆವೆಲ್ ಕ್ರಾಸಿಂಗ್‌ಗಳನ್ನು ಇಲ್ಲದಂತೆ ಮಾಡಲು ಹಲವು ವರ್ಷಗಳು ಮತ್ತು ಭಾರಿ ಮೊತ್ತ ಬೇಕಾಗುತ್ತದೆ ಎಂದಿದ್ದಾರೆ. 2019 ಏ.1ಕ್ಕೆ ಅನ್ವಯವಾಗುವಂತೆ 21, 340 ಮಾನವ ಸಹಿತ ಲೆವೆಲ್ ಕ್ರಾಸಿಂಗ್‌ಗಳು, 1,048 ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳು ಇದ್ದವು ಎಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ. ರಾಯ್‌ಬರೇಲಿಯಲ್ಲಿರುವ ಕೋಚ್ ಫ್ಯಾಕ್ಟರಿಯನ್ನು ಖಾಸಗಿ ವಲಯಕ್ಕೆ ನೀಡಬಾರದು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಕ್ಕೆ ಗೋಯಲ್ ಟೀಕಿಸಿದ್ದಾರೆ.

ದೇಶದ್ರೋಹ ಕಾನೂನು ರದ್ದು ಇಲ್ಲ

Advertisement

ಲೋಕಸಭೆ ಚುನಾವಣೆ ಪ್ರಚಾರ ವೇಳೆ ಚರ್ಚೆಯಾದ ದೇಶದ್ರೋಹ ಕಾನೂನನ್ನು ರದ್ದು ಮಾಡುವುದಿಲ್ಲ. ರಾಜ್ಯಸಭೆಯಲ್ಲಿ ಲಿಖೀತ ಉತ್ತರ ನೀಡಿದ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌, ರಾಷ್ಟ್ರ ವಿರೋಧಿ ಕೃತ್ಯಗಳು, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಮಟ್ಟ ಹಾಕಲು ಈ ಕಾನೂನು ಅಗತ್ಯವಿದೆ ಎಂದು ಕೇಂದ್ರ ಪ್ರತಿಪಾದಿಸಿದೆ. ಮೇಲ್ಮನೆಯಲ್ಲಿ ಲಿಖೀತ ಉತ್ತರ ನೀಡಿದ ಕೇಂದ್ರ ಗೃಹಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ. ಪ್ರಚಾರದ ವೇಳೆ ಕಾಂಗ್ರೆಸ್‌ ತಾನು ಅಧಿಕಾರಕ್ಕೆ ಬಂದರೆ ಅದನ್ನು ರದ್ದು ಮಾಡುವುದಾಗಿ ವಾಗ್ಧಾನ ಮಾಡಿತ್ತು.

40 ಸಂಸ್ಥೆಗಳಿಂದ ಲ್ಯಾಟರಲ್ ಎಂಟ್ರಿ

ಕೇಂದ್ರ ಸರ್ಕಾರದ ಡೆಪ್ಯುಟಿ ಸೆಕ್ರೆಟರಿ, ನಿರ್ದೇಶಕರ ಹುದ್ದೆಗಳಿಗೆ ನೇರವಾಗಿ ಖಾಸಗಿ ವಲಯದಿಂದ ನೇಮಕ ಮಾಡಲು ನಿರ್ಧರಿಸಲಾಗಿದೆ. ಸುಮಾರು 40 ಖಾಸಗಿ ವಲಯಗಳಿಂದ ಈ ನೇಮಕ ಮಾಡಲಾಗುತ್ತದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ. ಸಾಮಾನ್ಯ ವಾಗಿ ಈ ಹುದ್ದೆಗಳನ್ನು ಐಎಎಸ್‌ ಅಧಿಕಾರಿಗಳು ನಿರ್ವಹಿಸುತ್ತಾರೆ.

ಚೀನಾ, ವಿಯೆಟ್ನಾಂನಿಂದ ಟಿವಿ ಆಮದು

2018-19ನೇ ಸಾಲಿನಲ್ಲಿ ದೇಶಕ್ಕೆ 7,224 ಕೋಟಿ ರೂ. ಮೌಲ್ಯದ ಟಿವಿಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‌ ಖಾತೆ ಸಚಿವ ರವಿಶಂಕರ ಪ್ರಸಾದ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಚೀನಾದಿಂದ ಆಮದು ಪ್ರಮಾಣ 3,807 ಕೋಟಿ ರೂ. ವಿಯೆಟ್ನಾಂನಿಂದ 2,317 ಕೋಟಿ ರೂ. ಮೌಲ್ಯದ ಟಿವಿಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next