Advertisement

ರಾಜ್ಯಕ್ಕಿಲ್ಲ ಬೆಂಬೆಲೆ ಲಾಭ 

06:00 AM Jul 07, 2018 | Team Udayavani |

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಮನಗೆಲ್ಲುವ ಪ್ರಯತ್ನವೇನೋ ಮಾಡಿದೆ. ಆದರೆ, ಕರ್ನಾಟಕದ ರೈತರ ಪಾಲಿಗೆ ಅಷ್ಟೇನು ಲಾಭದಾಯಕವಲ್ಲ ಎಂದು ರಾಜ್ಯ ಕೃಷಿ ಬೆಲೆ ಆಯೋಗವೇ ರಾಜ್ಯ ಸರ್ಕಾರಕ್ಕೆ ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದೆ.

Advertisement

ಶೇ.24ರಷ್ಟು ಬೆಂಬಲ ಬೆಲೆ ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ, ರಾಜ್ಯ ಕೃಷಿ ಬೆಲೆ ಆಯೋಗ ಈ ಬೆಂಬಲ ಬೆಲೆಯಿಂದ ರಾಜ್ಯದ ರೈತರಿಗೆ ಸರಾಸರಿ ಶೇ.15ರಷ್ಟು ನಷ್ಟವೇ ಆಗಲಿದೆ ಎಂದಿದೆ. ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ಕೃಷಿ ಉತ್ಪಾದನಾ ವೆಚ್ಚ ಲೆಕ್ಕ ಹಾಕುವಾಗ ಭರಿಸಿದ ವಾಸ್ತವಿಕ ನಗದು ವೆಚ್ಚ (ಬೀಜ, ಗೊಬ್ಬರ, ಕೀಟನಾಶಕ ಮಾತ್ರ), ಸ್ಥಿರಾಸ್ತಿ ಮೇಲಿನ ಸವಕಳಿ, ಕುಟುಂಬದ ಶ್ರಮದ ಬಾಬಿ¤ನ ವೆಚ್ಚ ಮಾತ್ರ ಪರಿಗಣಿಸಿದ್ದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ. ಇದರಲ್ಲಿ ಭೂಮಿ ಗೇಣಿ ಹಾಗೂ ಕೃಷಿ ನಿರ್ವಹಣಾ ವೆಚ್ಚ ಎಲ್ಲ ಸೇರಬೇಕಿತ್ತು. ರಾಜ್ಯ ಕೃಷಿ ಬೆಲೆ ಆಯೋಗ ಇದೆಲ್ಲವನ್ನೂ ಲೆಕ್ಕ ಹಾಕಿ ಸರಾಸರಿ ಉತ್ಪಾದನಾ ವೆಚ್ಚ ನಮೂದಿಸಿದೆ.

ಉತ್ಪಾದನಾ ವೆಚ್ಚ ವ್ಯತ್ಯಾಸ: ಭತ್ತ (ಸಾಮಾನ್ಯ)ಕ್ಕೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ ಗೆ 1,166 ರೂ. ಆಗಲಿದೆ ಎಂದು ಲೆಕ್ಕ ಹಾಕಿ, 1,750 ರೂ. ಬೆಂಬಲ ಬೆಲೆ ಘೋಷಿ ಸಿದೆ. ಶೇ.13ರಷ್ಟು ಹೆಚ್ಚಳ ಎಂದು ಹೇಳಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಭತ್ತ (ಸಾಮಾನ್ಯ) ಉತ್ಪಾದನಾ ವೆಚ್ಚ 1,912 ರೂ. ಆಗುತ್ತದೆ. ಘೋಷಿಸಿರುವ ಬೆಂಬಲ ಬೆಲೆಗೆ ಹೋಲಿಸಿದರೆ ರಾಜ್ಯದ ರೈತರಿಗೆ ಶೇ.8ರಷ್ಟು ಉತ್ಪಾದನಾ ವೆಚ್ಚದಲ್ಲೇ
ನಷ್ಟವಾಗುತ್ತದೆ. ತೊಗರಿಗೆ ಕೇಂದ್ರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 3,432 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 5,675 ರೂ. ಬೆಂಬಲ ಬೆಲೆ ಘೋಷಿಸಿ, ಶೇ.4ರಷ್ಟು ಹೆಚ್ಚಳ ಎಂದು ಹೇಳಿದೆ.

ಆದರೆ, ರಾಜ್ಯದಲ್ಲಿ ತೊಗರಿ ಉತ್ಪಾದನಾ ವೆಚ್ಚ 7,302 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.22ರಷ್ಟು ರೈತರಿಗೆ ನಷ್ಟವಾಗುತ್ತದೆ. ಉದ್ದಿಗೆ ಕೇಂದ್ರ ಸರ್ಕಾರದ ಪ್ರಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 3,438 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 5,600 ರೂ. ಬೆಂಬಲ ಬೆಲೆ ಘೋಷಿಸಿ, ಶೇ.4ರಷ್ಟು ಹೆಚ್ಚಳ ಎಂದಿದೆ. ಆದರೆ, ರಾಜ್ಯದಲ್ಲಿ ಉದ್ದು ಉತ್ಪಾದನಾ ವೆಚ್ಚ 8143 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.31ರಷ್ಟು ರೈತರಿಗೆ ನಷ್ಟವಾಗಲಿದೆ.

ಜೋಳ ಕೇಂದ್ರ ಸರ್ಕಾರದ ಪ್ರಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 1,619 ರೂ. ಆಗುತ್ತದೆ ಎಂದು ಲೆಕ್ಕ ಹಾಕಿದ್ದು 2,430 ರೂ. ಬೆಂಬಲ ಬೆಲೆ ಘೋಷಿಸಿ, ಶೇ.43ರಷ್ಟು ಹೆಚ್ಚಳ ಎಂದು ಹೇಳಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಜೋಳ ಉತ್ಪಾದನಾ ವೆಚ್ಚ 2,784 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.13ರಷ್ಟು ರೈತರಿಗೆ ನಷ್ಟವಾಗುವುದು. ರಾಗಿಗೆ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 1,931 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 2,897 ರೂ. ಬೆಂಬಲ ಬೆಲೆ ಘೋಷಿಸಿ, ಶೇ.52ರಷ್ಟು ಹೆಚ್ಚಳ ಎಂದು ಹೇಳಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ರಾಗಿ ಉತ್ಪಾದನಾ ವೆಚ್ಚ 3,880 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.25ರಷ್ಟು ರೈತರಿಗೆ ನಷ್ಟವಾಗುತ್ತದೆ. ಹೆಸರು ಬೆಳೆಗೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ ಗೆ 4,650 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 6,975 ರೂ. ಬೆಂಬಲ ಬೆಲೆ ಘೋಷಿಸಿ, ಶೇ.25ರಷ್ಟು ಹೆಚ್ಚಳ ಎಂದು ಹೇಳಿದೆ.

Advertisement

ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಹೆಸರು ಉತ್ಪಾದನಾ ವೆಚ್ಚ 6,134 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.14ರಷ್ಟು ಮಾತ್ರ ಹೆಚ್ಚಳವಾಗುತ್ತದೆ. ಸೋಯಾಬಿನ್‌ಗೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 2,266 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 3,399 ರೂ. ಬೆಂಬಲ ಬೆಲೆ ಘೋಷಿಸಿ, ಶೇ.11ರಷ್ಟು ಹೆಚ್ಚಳ ಮಾಡಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಸೋಯಾಬಿನ್‌ ಉತ್ಪಾದನಾ ವೆಚ್ಚ 4,066 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.16ರಷ್ಟು ರೈತರಿಗೆ ನಷ್ಟವಾಗುತ್ತದೆ.

ಸೂರ್ಯಕಾಂತಿ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 3,592 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 5,388 ರೂ. ಬೆಂಬಲ ಬೆಲೆ ಘೋಷಿಸಿ, ಶೇ.31ರಷ್ಟು ಹೆಚ್ಚಳ ಮಾಡಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಸೂರ್ಯಕಾಂತಿ ಉತ್ಪಾದನಾ ವೆಚ್ಚ 5,349 ರೂ. ಆಗುತ್ತದೆ. ಬೆಂಬಲ ಬೆಲೆಗೆ
ಹೋಲಿಸಿದರೆ ಶೇ.1ರಷ್ಟು ಮಾತ್ರ ಹೆಚ್ಚಳವಾದಂತಾಗುತ್ತದೆ. ಹತ್ತಿ (ಉದ್ದ ಎಳೆ) ಬೆಳೆಗೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 3,433 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 5,450 ರೂ. ಬೆಂಬಲ ಬೆಲೆ ಘೋಷಿಸಿ, ಶೇ.26ರಷ್ಟು ಹೆಚ್ಚಳ ಮಾಡಿದೆ. ಆದರೆ, ರಾಜ್ಯದಲ್ಲಿ ಅಧ್ಯಯನ ಪ್ರಕಾರ ಹತ್ತಿ ಉತ್ಪಾದನಾ ವೆಚ್ಚ 6,014 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ಶೇ.9ರಷ್ಟು ರೈತರಿಗೆ ನಷ್ಟವಾಗುತ್ತದೆ. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 1,131 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 1,700 ರೂ. ಬೆಂಬಲ ಬೆಲೆ ಘೋಷಿಸಿ, ಶೇ.19ರಷ್ಟು ಹೆಚ್ಚಳ ಎಂದು ಹೇಳಿದೆ. ಆದರೆ, ರಾಜ್ಯದಲ್ಲಿ ಮೆಕ್ಕೆಜೋಳ ಉತ್ಪಾದನಾ ವೆಚ್ಚ 1,477 ರೂ. ಆಗುತ್ತದೆ.

ಬೆಂಬಲ ಬೆಲೆಗೆ ಹೋಲಿಸಿದರೆ ಶೇ.15ರಷ್ಟು ಮಾತ್ರ ಹೆಚ್ಚಳವಾದಂತಾಗುತ್ತದೆ. ಶೇಂಗಾಕ್ಕೆ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 3,260 ರೂ. ಆಗುತ್ತದೆ ಎಂದು ಲೆಕ್ಕ ಹಾಕಿ 4,890 ರೂ. ಬೆಂಬಲ ಬೆಲೆ ಘೋಷಿಸಿ, ಶೇ.10ರಷ್ಟು ಹೆಚ್ಚಳ ಎಂದು ಹೇಳಿದೆ. ಆದರೆ, ರಾಜ್ಯದಲ್ಲಿ ಶೇಂಗಾ ಉತ್ಪಾದನಾ ವೆಚ್ಚ 6,582 ರೂ. ಆಗುತ್ತದೆ. ಬೆಂಬಲ ಬೆಲೆಗೆ ಹೋಲಿಸಿದರೆ ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.26ರಷ್ಟು ಕಡಿಮೆಯಾಗುತ್ತದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಕೆಲವು ಕೃಷಿ ಬೆಳೆಗಳಿಗೆ ಘೋಷಿಸಿರುವ ಬೆಂಬಲ ಬೆಲೆ ರಾಜ್ಯಕ್ಕೆ ಅಷ್ಟೇನೂ ಲಾಭದಾಯಕವಾಗಿಲ್ಲ. ಈ ಬೆಂಬಲ ಬೆಲೆ ರಾಜ್ಯದ ರೈತರಿಗೆ ಎಷ್ಟು ಅನುಕೂಲವಾಗಿದೆ ಎಂಬುದರ ಬಗ್ಗೆ ಅಧ್ಯಯನ ಆಧಾರಿತ ಅಂಕಿ-ಅಂಶಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದೇವೆ.
● ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ

ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದು ಸಂತಸ. ಆದರೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ದರ ಇದ್ದಾಗ ಸರ್ಕಾರವೇ ರೈತರ ಬೆಳೆ ಖರೀದಿಸಲು ಮುಂದಾಗಬೇಕು. ಆಗ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು ಬರೀ ಪ್ರಚಾರಕ್ಕಾಗಿ ಮಾಡಿರುವ ಘೋಷಣೆಯಾಗುತ್ತದೆ.
● ಶಿವಾನಂದ ಗುರುಮಠ, ರೈತ ಮುಖಂಡ, ಹಾವೇರಿ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next