Advertisement

ಬೇನಾಮಿ ವ್ಯವಹಾರ ಕಾಯ್ದೆ ಇನ್ನೂ ಬಲಿಷ್ಠ

12:23 PM Jul 12, 2017 | Team Udayavani |

ಕಲಬುರಗಿ: ಬೇನಾಮಿ ಆಸ್ತಿ ಹಾಗೂ ವ್ಯವಹಾರ ನಿರ್ವಹಿಸುವವರಿಗೆ ಕೇಂದ್ರ ಸರ್ಕಾರ ಕಾಯ್ದೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದು,
ಎಷ್ಟೇ ಚಾಣಾಕ್ಷತೆ ವಹಿಸಿದ್ದರೂ ಎಲ್ಲವೂ ಕನ್ನಡಿ ಹಾಗೆ ಕಣ್ಣೆದುರಿಗೆ ನಿಲ್ಲಿಸುವಂತೆ ತಾಂತ್ರಿಕತೆ ರೂಪಿಸಲಾಗಿದೆ ಎಂದು ಖ್ಯಾತ 
ಲೆಕ್ಕ ಪರಿಶೋಧಕ ಬಿ.ಪಿ.ಸಚಿನ್‌ಕುಮಾರ ಹೇಳಿದರು.

Advertisement

ಮಂಗಳವಾರ ಹೈದರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಆಯೋಜಿಸಲಾದ ಬೇನಾಮಿ ವ್ಯವಹಾರ
ಕಾಯ್ದೆ ಹಾಗೂ ರೇರಾ, ಜಿಎಸ್‌ಟಿ ಕುರಿತ ಆಯೋಜಿಸಲಾದ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.
ಬೇನಾಮಿ ವ್ಯವಹಾರದ ಮೇಲೆ ಕಣ್ಣಿಡಲು ಹಾಗೂ ನಿಯಂತ್ರಣ ಹೇರಲು ಈ ಹಿಂದೆಂದಿಗಿಂತಲೂ ಕಠಿಣ ನಿಯಮಾವಳಿ
ರೂಪಿಸಲಾಗಿದೆ. ಹೀಗಾಗಿ ಯಾರೂ ನಿರ್ಲಕ್ಷ ವಹಿಸುವಂತಿಲ್ಲ ಎಂದು ಹೇಳಿದರು. ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು
ಅಭಿವೃದ್ಧಿ ಪ್ರಾಧಿಕಾರ (ರೇರಾ) ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಲೆಕ್ಕ ಪರಿಶೋಧಕ ಅಶೋಕಕುಮಾರ ಡಿ.,
ರೇರಾ ಅನುಷ್ಠಾನದಿಂದ ಗ್ರಾಹಕರಿಗೆ ಅನುಕೂಲವಾಗುವುದರ ಜೊತೆಗೆ ಮಾರಾಟ ಮತ್ತು ಖರೀದಿಯಲ್ಲಿ ಪಾರದರ್ಶಕತೆ
ಮೂಡಲಿದೆ. ಪ್ರಮುಖವಾಗಿ ಇನ್ನು ಮುಂದೆ ರಿಯಲ್‌ ಎಸ್ಟೇಟ್‌ ವ್ಯವಸ್ಥೆ ಅಡಿ ಮಾರಾಟ ಮಾಡುವ ವ್ಯಕ್ತಿ ಪ್ರಾಧಿಕಾರದಲ್ಲಿ ಮೊದಲು
ನೋಂದಣಿ ಮಾಡಿಸಬೇಕಾಗುತ್ತದೆ. ಗ್ರಾಹಕರಿಗೆ ಯಾವುದೇ ರೀತಿಯ ನಷ್ಟವಾದರೂ ಪ್ರಾಧಿಕಾರದ ವತಿಯಿಂದ ಕಾರ್ಯನಿರ್ವಹಿಸುವ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದಾಗಿದೆ. ಹೀಗೆ ಸಲ್ಲಿಕೆಯಾಗುವ ದೂರಿನ ವಿಚಾರಣೆ
ಹಾಗೂ ಅದರ ಆದೇಶ ಎರಡು ತಿಂಗಳೊಳಗೆ ಹೊರ ಬೀಳುತ್ತದೆ ಎಂದು ಹೇಳಿದರು.

ನೋಂದಣಿ ಕಡ್ಡಾಯ: ರಿಯಲ್‌ ಎಸ್ಟೇಟ್‌ ಧಣಿಯ ಪರವಾಗಿ ನಿವೇಶನ, ಮನೆ, ಅಪಾರ್ಟ್‌ಮೆಂಟ್‌ ಮಾರಾಟ ಮಾಡಿಸುವ ಕಮಿಷನ್‌ ಏಜೆಂಟ್‌ ಸಹ ರೇರಾ ಕಾಯ್ದೆ ಅಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ ಎಂದು ಹೇಳಿದರು. ಇದುವರೆಗೆ ಯಾರು ಬೇಕಾದರೂ ಗ್ರಾಹಕರಿಗೆ ರಿಯಲ್‌ ಎಸ್ಟೇಟ್‌ ಧಣಿಗಳ ಪರವಾಗಿ ಮನೆ, ನಿವೇಶನ ಇತ್ಯಾದಿ ಮಾರಾಟ ಮಾಡಿ ತಮ್ಮ ಪಾಲಿನ ಕಮಿಷನ್‌ ಪಡೆಯಬಹುದಾಗಿತ್ತು. ಆದರೆ, ರೇರಾ ಇಂತಹ ಪದ್ಧತಿಗೆ ಕೊನೆ ಹಾಡಿದೆ. ಮೇಲಾಗಿ, ನೋಂದಣಿ ಮಾಡಿಸಿಕೊಳ್ಳದ ಏಜೆಂಟ್‌ ತನ್ನ ಮಾರಾಟದ ಕುರಿತು ಯಾವುದೇ ಜಾಹಿರಾತು ಸಹ ನಡೆಸುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿದೆ. ರೇರಾ ರಾಜ್ಯದಲ್ಲಿ ಇನ್ನೂ ಬಾಕಿ ಇದ್ದು, ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗೆ ಇನ್ನೂ ರಾಜ್ಯ ಸರಕಾರ ತನ್ನ ಪಾಲಿನ ನಿಯಮಗಳನ್ನು ರೂಪಿಸಿಲ್ಲ. ಈಗಾಗಲೇ ರಾಜ್ಯ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆದಿದ್ದಾದರೂ ರಾಜ್ಯಪಾಲರ ಅಂಕಿತ
ಬಿದ್ದಿಲ್ಲ ಎಂದು ಹೇಳಿದರು. 

ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ಸಚಿವ ಈಶ್ವರ ಖಂಡ್ರೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಲೆಕ್ಕ
ಪರಿಶೋಧಕರಾದ ರಾಘವೇಂದ್ರ ಗುಪ್ತಾ, ರಾಮಕೃಷ್ಣ ಸಂಗು ಮಾಹಿತಿ ನೀಡಿದರು. ಎಚ್‌ ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಾಂತ ಮಾನಕರ, ಖಜಾಂಚಿ ಮಂಜುನಾಥ ಜೇವರ್ಗಿ, ತೆರಿಗೆ ಉಪ ಸಮಿತಿ ಅಧ್ಯಕ್ಷ ಗುರುದೇವ ದೇಸಾಯಿ ಮುಂತಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next