“ಒಂದು ಮುತ್ತಿನ ಕಥೆ’, “ಒಂದು ಮೊಟ್ಟೆಯ ಕಥೆ’, “ಒಂದು ಶಿಕಾರಿಯ ಕಥೆ’ ಹೀಗೆ ಒಂದೊಂದು ಕಥೆಯನ್ನು ಇಟ್ಟುಕೊಂಡು ತೆರೆಮೇಲೆ ಬಂದ ಹತ್ತಾರು ಚಿತ್ರಗಳನ್ನು ನೋಡಿರುತ್ತೀರಿ ಈಗ ಆ ಸಾಲಿಗೆ “ಒಂದು ಗಂಟೆಯ ಕಥೆ’ ಎನ್ನುವ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ.
ಅಂದಹಾಗೆ, ಇದು ನೈಜ ಘಟನೆ ಆಧಾರಿತ ಚಿತ್ರ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಕೋಣನಕುಂಟೆ ಪ್ರದೇಶದಲ್ಲಿ ನಡೆದ ನೈಜ ಘಟನೆಯೊಂದು ಇಡೀ ರಾಜ್ಯದಾದ್ಯಂತ ಸಾಕಷ್ಟು ದೊಡ್ಡ ಸುದ್ದಿ ಮಾಡಿತ್ತು. ಅದೇ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ ಅನ್ನೋದು ಚಿತ್ರತಂಡದ ಮಾತು. ಈ ಹಿಂದೆ “ಮತ್ತೆ ಮುಂಗಾರು’ ಚಿತ್ರವನ್ನು ನಿರ್ದೇಶಿಸಿದ್ದ ರಾಘವ ದ್ವಾರ್ಕಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಅಜಯ್ ರಾಜ್, ನಾಯಕಿಯಾಗಿ ಶನಾಯ ಕಾಟೆÌ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಯಶವಂತ ಸರದೇಶಪಾಂಡೆ, ಸ್ವಾತಿಶರ್ಮಾ, ಪ್ರಕಾಶ್ ತುಮ್ಮಿನಾಡು, ಚಿದಾನಂದ್, ಚಂದ್ರಕಲಾ, ಆನಂದ್, ನಾಗೇಂದ್ರ ಷಾ, ಪ್ರಶಾಂತ್ ಸಿದ್ದಿ ಸೇರಿದಂತೆ ಒಟ್ಟು 123 ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪ್ರಮೋಶನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, “ಒಂದು ಗಂಟೆಯ ಕಥೆ’ಯ ಹಿಂದಿನ ತೆರೆಮರೆಯ ಕಥೆಗಳನ್ನು ಹೇಳಲು ಮಾಧ್ಯಮಗಳ ಮುಂದೆ ಬಂದಿತ್ತು.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ರಾಘವ ದ್ವಾರ್ಕಿ, “ಇದೊಂದು ನೈಜ ಘಟನೆ ಆಧಾರಿತ ಸಿನಿಮಾ. ಅದನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ತರುತ್ತಿದ್ದೇವೆ. ಇಡೀ ರಾಜ್ಯಾದ್ಯಂತ ಸುದ್ದಿ ಮಾಡಿದಂತ ಗಂಭೀರ ವಿಷಯವನ್ನು, ಇಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಪ್ರೇಮಿಗಳಾದ ಸರೋಜಾ ಮತ್ತು ರಾಹುಲ್ ಒಂದೇ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ಮುಂದೆ ಇಬ್ಬರಿಗೂ ಮದುವೆ ಪ್ರಸ್ತಾಪ ಬಂದಾಗ ರಾಹುಲ್ ತಾನು ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದು, ಮುಂದೆ ಕೂಡ ನಮ್ಮಿಬ್ಬರ ಸ್ನೇಹ ಇದೇ ರೀತಿ ಮುಂದುವರೆಯಲಿ ಎಂದು ಹೇಳುತ್ತಾನೆ. ಇದರಿಂದ ಕ್ರೋಧಗೊಂಡ ಸರೋಜಾ ಅವನಿಗೆ ತಕ್ಕ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ, ಯಾರು ಊಹಿಸಲಾರದಂತ ಕೃತ್ಯವನ್ನು ಮಾಡುತ್ತಾಳೆ. ಅದು ಯಾವ ಕೃತ್ಯ, ಅಲ್ಲಿಂದ ಮುಂದೇನು ಆಗುತ್ತದೆ ಅನ್ನೋದೆ ಸಿನಿಮಾದ ಕಥೆ ಅದನ್ನು ಸ್ಕ್ರೀನ್ ಮೇಲೆ ನೋಡಬೇಕು’ ಎಂದು ವಿವರಣೆ ಕೊಟ್ಟರು.
ನಿರ್ಮಾಪಕ ಕಶ್ಯಪ್ ದಾಕೋಜು ಮಾತನಾಡಿ, “ನಮ್ಮ ಸಿನಿಮಾವನ್ನು ನೋಡಿದ ಸೆನ್ಸಾರ್‌ನವರು “ಎ’ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹಾಗಂತ ನಮಗೇನೂ ಬೇಜಾರಿಲ್ಲ. ನಮ್ಮ ಸಿನಿಮಾದಲ್ಲಿ ಇರೋದು ಡಬಲ್ ಮೀನಿಂಗ್ ಅಲ್ಲ, ಇರೋದೆಲ್ಲ ಏನಿದ್ದರೂ ಡೈರೆಕ್ಟ್ ಮೀನಿಂಗ್. ಇದು ಎಲ್ಲರೂ ನೋಡುವಂಥ ಸಿನಿಮಾ. ಇತ್ತೀಚೆಗಷ್ಟೇ ಹೆಣ್ಣು ಮಕ್ಕಳಿಗಾಗಿ ನಮ್ಮ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದೆವು. ಅಲ್ಲಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಷ್ಟು ಬೇಗ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ’ ಎಂದು ತಮ್ಮ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.
“ಒಂದು ಗಂಟೆಯ ಕಥೆ’ ಚಿತ್ರಕ್ಕೆ ಸಂಗೀತ ಡೆನಿಸ್ ವಲ್ಲಬನ್. ಎ ಸಂಗೀತ ನಿರ್ದೇಶನವಿದೆ. ಗಣೇಶ್ ಮಲ್ಲಯ್ಯ ಛಾಯಾಗ್ರಹಣವಿದೆ. ಬೆಂಗಳೂರು, ಮಡಿಕೇರಿ, ಕೇರಳ, ತಮಿಳುನಾಡಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ಒಂದು ಗಂಟೆಯ ಕಥೆ’ ಚಿತ್ರ ಇದೇ ಏಪ್ರಿಲ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.