Advertisement

ಬೆಳಗಾವಿ-ಚಿಕ್ಕೋಡಿ ಕ್ಷೇತ್ರಗಳು ಕೇಸರಿ ಪಡೆಯ ಮಡಿಲಿಗೆ

12:37 PM May 24, 2019 | Team Udayavani |

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕಿದ್ದಾರೆ.

Advertisement

ಗುರುವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ ಬೆಳಗಾವಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಂಡಿದ್ದರೆ ಚಿಕ್ಕೋಡಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಬಿಜೆಪಿ ಕಸಿದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯ ಮೇಲೆ ಭರ್ಜರಿ ಪ್ರಚಾರ ಮಾಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಭರ್ಜರಿ ಅಂತರದಿಂದ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸುವ ಮೂಲಕ ದಾಖಲೆಯ ಸಾಧನೆ ಮಾಡಿದ್ದಾರೆ.

ಆದರೆ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ವಿರುದ್ಧ ಅಭೂತ ಪೂರ್ವ ಜಯ ದಾಖಲಿಸಿ ಮೊದಲ ಬಾರಿಗೆ ಸಂಸತ್‌ ಮೆಟ್ಟಿಲು ಹತ್ತಿದ್ದಾರೆ. ಒಟ್ಟು 1,16,401 ಮತಗಳ ಅಂತರದ ಜಯ ದಾಖಲಿಸಿದ ಅಣ್ಣಾಸಾಹೇಬ ಜೊಲ್ಲೆ ಕಳೆದ ವಿಧಾನಸಭೆಯಲ್ಲಿ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡರು.

ಚಿಕ್ಕೋಡಿಯಲ್ಲಿ ಕಡೆಯ ಸುತ್ತಿನವರೆಗೂ ಮುನ್ನಡೆಯಿಂದ ಅಣ್ಣಾಸಾಹೇಬ ಜೊಲ್ಲೆ ಹಿಂದೆ ಸರಿಯಲೇ ಇಲ್ಲ. ಕಡೆಯ ಕ್ಷಣದವರೆಗೂ ಅದನ್ನು ಕಾಯ್ದುಕೊಂಡು ಬಂದರು.

ಕಮಲಕ್ಕೆ ಮನಸೋತ ಜನ ಬೆಳಗಾವಿ ಕ್ಷೇತ್ರದ ಮತದಾರರು ಸತತ ನಾಲ್ಕನೇ ಬಾರಿ ಕಮಲಕ್ಕೆ ಮನಸೋತಿದ್ದಾರೆ. ಮತದಾರರು ತಮ್ಮ ಪರವಾಗಿಲ್ಲ. ಬದಲಾವಣೆ ಬಯಸಿದ್ದಾರೆ ಎಂಬ ಮಾತುಗಳಿದ್ದರೂ ಅದರಿಂದ ವಿಚಲಿತರಾಗದ ಸುರೇಶ ಅಂಗಡಿ ಇದಕ್ಕೆ ವಿರುದ್ಧವಾಗಿ ತಮ್ಮ ಗೆಲುವಿನ ಅಂತರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಎಲ್ಲರೂ ಅಚ್ಚರಿ ಪಡುವಂತೆ ಗೆಲುವಿನ ಕೇಕೆ ಹಾಕಿದರು. ಬೆಳಗಾವಿ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಸುರೇಶ ಅಂಗಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ವಿ.ಎಸ್‌. ಸಾಧುನವರ ವಿರುದ್ಧ ಸುಮಾರು 3.80 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದರು. ಉಳಿದಂತೆ ಕಣದಲ್ಲಿದ್ದ ಎಲ್ಲ 55 ಜನ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 10 ಸುತ್ತುಗಳ ಎಣಿಕೆ ಮುಗಿದ ನಂತರ ಅಂಗಡಿ ಅವರ ಗೆಲುವು ಖಚಿತವಾಯಿತು. ಜಯದ ಅಂತರ 35 ರಿಂದ 80 ಸಾವಿರಕ್ಕೇರಿತು. ಮಧ್ಯಾಹ್ನ ಸುಮಾರು 2 ಗಂಟೆಗೆ ಎಣಿಕೆ ಕೇಂದ್ರದ ಕಡೆ ಬಂದ ಸುರೇಶ ಅಂಗಡಿ ಸತತ ನಾಲ್ಕನೇ ಗೆಲುವಿನೊಂದಿಗೆ ನಗುಮುಖದಿಂದ ಹೊರಬಂದರು. ಆಗಲೇ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಎಲ್ಲೆ ಮೀರಿತು.

ಉಸ್ತುವಾರಿ ಸಚಿವರಿಗೆ ಹಿನ್ನಡೆ

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಹೊಣೆ ಹೊತ್ತುಕೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಪಕ್ಷದ ಪ್ರಮುಖ ನಾಯಕರು ಸಾಧುನವರ ನೆರವಿಗೆ ಬರಲಿಲ್ಲ. ಮುಖ್ಯವಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಟಸ್ಥರಾಗಿ ಉಳಿದಿದ್ದು ಕಾಂಗ್ರೆಸ್‌ಗೆ ದೊಡ್ಡ ನಷ್ಟವಾಯಿತು. ಇಲ್ಲಿ ಸತೀಶ ಜಾರಕಿಹೊಳಿ ತಮ್ಮ ಸಹೋದರ ಲಖನ್‌ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಓಡಾಡಿದರೂ ಇದು ಪ್ರಯೋಜನವಾಗಲಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವತಿಯಿಂದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಗೆ ಸುಮಾರು 75,000 ಮತಗಳ ಮುನ್ನಡೆ ನೀಡಿ 4 ನೇ ಬಾರಿಗೆ ಆಯ್ಕೆಗೊಳಿಸಿದ್ದಕ್ಕಾಗಿ ಮಾಜಿ ಶಾಸಕ ಸಂಜಯ ಪಾಟೀಲ ಅವರು ಕಾರ್ಯಕರ್ತರಿಗೆ ಅಭಿನಂದಿಸಿ ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next