ಬೆಳ್ತಂಗಡಿ: ಹೊಸ ವರ್ಷದ ಆರಂಭದಲ್ಲಿ ಕಲ್ಮಂಜ ಗ್ರಾ.ಪಂ.ನಲ್ಲಿ ಹಲವಾರು ವರ್ಷಗಳ ಗ್ರಾಮಸ್ಥರ ಬೇಡಿಕೆಯ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವ ಮೂಲಕ ತಾಲೂಕಿನ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕಲ್ಮಂಜದಿಂದ ಪಜಿರಡ್ಕ ಸಂಪರ್ಕಿ ಸುವ 1.50 ಲಕ್ಷ ರೂ. ಕಾಂಕ್ರೀಟ್ ರಸ್ತೆ ಸಹಿತ ಗ್ರಾ.ಪಂ. ವ್ಯಾಪ್ತಿಯ 6.40 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆ ಅಥವಾ ಇನ್ನಿತರ ಕಾಮಗಾರಿ ಆಗುವ ದೃಷ್ಟಿಯಿಂದ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಕಿಂಡಿ ಅಣೆಕಟ್ಟಿಗೆ 4.50 ಲಕ್ಷ ರೂ.ಗಳಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಮೂಲಕ ಕೃಷಿಗೂ ವರದಾನವಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಉಳಿದ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.
ತಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಅಧ್ಯಕ್ಷ ತುಕಾರಾಮ ಸಾಲಿಯಾನ್ ಮಾತನಾಡಿದರು.
ದಯಾಳ್‌ಬಾಗ್ ಚರ್ಚ್‌ನ ಧರ್ಮಗುರು ಫಾ| ಫ್ರಾನ್ಸಿಸ್, ಕಲ್ಮಂಜ ಮಸೀದಿಯ ಧರ್ಮಗುರು ಬದ್ರುದ್ದೀನ್ ಸಖಾಫಿ, ಉದ್ಯಮಿ ಮೋಹನ ಕುಮಾರ್, ಪ್ರಭಾಕರ ಶೆಟ್ಟಿ ಕಂದೂರು, ನಿಡಿಗಲ್ ಬಸದಿಯ ಮೊಕ್ತೇಸರ ರಥನ್ ಕುಮಾರ್ ಜೈನ್, ಹಿರಿಯರಾದ ಮೋಹನ್ ರಾವ್ ಕಲ್ಮಂಜ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಎಂಜಿನಿಯರ್ ಚೆನ್ನಪ್ಪ ಮೊಲಿ ಉಪಸ್ಥಿತರಿದ್ದರು.
ಕಲ್ಮಂಜ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ಸ್ವಾಗತಿಸಿದರು. ಮಂಜುನಾಥ ಶೆಟ್ಟಿ ನಿರೂಪಿಸಿ, ವಂದಿಸಿದರು.