Advertisement

ಪಾಸಿಟಿವ್ ಮನಸ್ಸುಗಳ ಆರಂಭ

10:06 AM Mar 14, 2020 | mahesh |

ಜಗತ್ತಿನಲ್ಲಿ ಎಲ್ಲವೂ ಆರಂಭವಾಗಿ ನಂತರ ಅಂತ್ಯವಾಗುತ್ತದೆ. ಪ್ರತಿಯೊಂದಕ್ಕೂ ಮೊದಲು ಆರಂಭ ನಂತರ ಅಂತ್ಯ ಅಂತಿರುತ್ತದೆ. ಆದರೆ ಇಲ್ಲೊಂದು ಚಿತ್ರತಂಡ ಅದನ್ನೇ ಸಕಾರಾತ್ಮಕ ದೃಷ್ಟಿಕೋನದಲ್ಲಿ ಎಲ್ಲ ಅಂತ್ಯಕ್ಕೂ ಒಂದು ಆರಂಭವಿರುತ್ತದೆ ಎಂದು ತಮ್ಮ ಚಿತ್ರದ ಮೂಲಕ ಹೇಳಲು ಹೊರಟಿದೆ. ಅಂದಹಾಗೆ, ಆ ಚಿತ್ರಕ್ಕೆ ಚಿತ್ರತಂಡ ಕೊಟ್ಟಿರುವ ಹೆಸರು “ಅಂತ್ಯವಲ್ಲ ಆರಂಭ’.

Advertisement

ಸಾಮಾಜಿಕ ಕಾಳಜಿ, ಸಾಂಸಾರಿಕ ಜವಾಬ್ದಾರಿ, ಜೊತೆಗೊಂದು ಸಂದೇಶ, ನಡುವೆಯೊಂದು ಪ್ರೇಮಕಥೆ ಇದೆಲ್ಲವನ್ನು ಇಟ್ಟುಕೊಂಡು ಇಟ್ಟುಕೊಂಡು ಅದನ್ನು ಮನರಂಜನಾತ್ಮಕವಾಗಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುತ್ತದೆ “ಅಂತ್ಯವಲ್ಲ ಆರಂಭ’ ಚಿತ್ರತಂಡ. ಚಿತ್ರದಲ್ಲಿ ಸಂಚಾರಿ ವಿಜಯ್‌, ಶೃತಿ ಹರಿಹರನ್‌ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್‌, ಹರ್ಷ, ನಚಿಕೇತನ್‌, ದೀಪಕ್‌ ಸೇರಿದಂತೆ ಹಲವು ಹೊಸ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “ಅಂತ್ಯವಲ್ಲ ಆರಂಭ’ ಚಿತ್ರದ ಆಡಿಯೋವನ್ನು ಹೊರತರುವ ಮೂಲಕ ಚಿತ್ರದ ಪ್ರಮೋಶನ್‌ ಕಾರ್ಯಗಳಿಗೆ ಚಾಲನೆ ನೀಡಿದೆ.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಡಾ.ಎನ್‌.ಬಿ ಜಯಪ್ರಕಾಶ್‌, “ಒಂದು ಸುಂದರ ಸಂಸಾರದಲ್ಲಿ ಎಲ್ಲ ಇದ್ದರೂ, ಗಂಡ-ಹೆಂಡತಿ ನಡುವೆ ಪ್ರೀತಿ-ಪ್ರೇಮ ಇರುವುದಿಲ್ಲ. ಮುಂದೆ ನಡೆಯುವ ಘಟನೆಯೊಂದು ಗಂಡ-ಹೆಂಡತಿ ಇಬ್ಬರನ್ನೂ ಕಾಡುತ್ತಾ ಹೋಗುತ್ತದೆ. ಕೊನೆಗೆ ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದೇ ಸಿನಿಮಾದ ಕ್ಲೈಮ್ಯಾಕ್ಸ್‌. ಜಗತ್ತಿನಲ್ಲಿ ಯಾವುದಕ್ಕೂ ಕೊನೆ ಎಂಬುದಿರುವುದಿಲ್ಲ. ಎಲ್ಲದಕ್ಕೂ ಒಂದು ಪ್ರಾರಂಭವಿರುತ್ತದೆ ಎಂಬುದನ್ನು ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಪರೀಕ್ಷೆಯಲ್ಲಿ ಫೇಲಾಗಿರುವವರು, ಜೀವನದಲ್ಲಿ ಸೋತವರು, ಪ್ರೇಮ ವೈಫ‌ಲ್ಯವಾದವರು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಸತ್ತವರಿಗೆ ಆರಂಭವಿಲ್ಲದಿದ್ದರೂ, ಇಂಥ ಮನಸ್ಥಿತಿಯಲ್ಲಿರುವವರಿಗೆ ಮತ್ತೆ ಶುಭಾರಂಭ ಇರುತ್ತದೆಂಬ ಸಂದೇಶ ಚಿತ್ರದಲ್ಲಿದೆ’ ಎಂದು ಕಥಾಹಂದರವನ್ನು ತೆರೆದಿಟ್ಟರು.

ಮತ್ತೂಬ್ಬ ನಿರ್ದೇಶಕ ನಡಹಳ್ಳಿ ಶ್ರೀಪಾದರಾವ್‌ “ಅಂತ್ಯವಲ್ಲ ಆರಂಭ’ ಚಿತ್ರದ ನಿರ್ದೇಶನದಲ್ಲಿ ಕೈ ಜೋಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು ಐದಾರು ಚಿತ್ರಗಳ ನಿರ್ಮಾಣ ಮಾಡಿ, ಹಲವು ಧಾರವಾಹಿಗಳಿಗೆ ಬಂಡವಾಳ ಹೂಡಿರುವ ಗಣೇಶ್‌ ಕುಮಾರ್‌ ಈ ಚಿತ್ರಕೆ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.

ಸಾಗರ, ಬೆಂಗಳೂರು ಸುತ್ತಮುತ್ತ “ಅಂತ್ಯವಲ್ಲ ಆರಂಭ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಐದು ಹಾಡುಗಳಿಗೆ ಸುಹಾಸ್‌ ಸಂಗೀತ ಸಂಯೋಜಿಸಿದ್ದು, ವಸುಮತಿ ಉಡುಪ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ನಾಗೇಶ್‌ ಆಚಾರ್ಯ-ಮಲ್ಲಿಕಾರ್ಜುನ ಛಾಯಾಗ್ರಹಣ, ಸುರೇಶ್‌ ಅರಸ್‌ ಸಂಕಲನವಿದೆ. ಸದ್ಯ ಹಾಡುಗಳ ಮೂಲಕ ಹೊರಬಂದಿರುವ “ಅಂತ್ಯವಲ್ಲ ಆರಂಭ’ ಇದೇ ಏಪ್ರಿಲ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next