Advertisement
ನಾನು ಮೊದಲೇ ಹೇಳಿದಂತೇ ಒಂದು ಪ್ರಾಡಕ್ಟ್ ಕೆಲಸ ಮಾಡಲೀ, ಮಾಡದೇ ಇರಲಿ ಅದರ ವಿನ್ಯಾಸ ಸೌಂದರ್ಯಯುತ ಅಥವಾ ಕಲಾತ್ಮಕವಾಗಿದ್ದರೆ ಆ ಪ್ರಾಡಕ್ಟ್‌ನ್ನು ನೋಡಿದಾಗ ಅದನ್ನು ಬಳಸಬೇಕೆನ್ನುವ ಆಸೆಯು ಕುದುರುವದಷ್ಟೇ ಅಲ್ಲ, ಅದನ್ನು ಹೆಚ್ಚು ಬಳಸುತ್ತೇವೆ ಕೂಡ. ತುಂಬಾ ಚೆನ್ನಾಗಿ ಕೆಲಸ ಮಾಡುವ ಪ್ರಾಡಕ್ಟಿನ ಬಾಹ್ಯ ವಿನ್ಯಾಸ ಸರಿ ಇಲ್ಲದೇ ಇದ್ದರೆ ಬಳಕೆದಾರನ ಮೊದಲ ಸ್ವೀಕೃತಿಯೇ ಕಡಿಮೆಯಾಗಿ ಅದರ ಒಟ್ಟೂ ಉಪಯುಕ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಆಶ್ಚರ್ಯವೇನೆಂದರೆ ಕಾಣಲು ಚೆನ್ನಾಗಿರುವ ಪ್ರಾಡಕ್ಟ್ ಒಮ್ಮೆ ಅಂದುಕೊಂಡಂತೇ ಕೆಲಸ ಮಾಡದಿದ್ದರೂ ಅದನ್ನು ಖರೀದಿಸಿದವ ಅದರ ಮೇಲೊಂದು ಸಹನೆ ತೋರುವುದನ್ನು ಕಾಣಬಹುದು, ಕಾರಣ ಅದರಿಂದಾಗುವ ಧನಾತ್ಮಕ ಅನುಭವ.ಇದನ್ನು ಮುಖ್ಯವಾಗಿ ಗಮನಿಸಬೇಕು.
Related Articles
Advertisement
ಬಾಹ್ಯಸೌಂದರ್ಯಕ್ಕೆ ಪೂರಕ ಅಂಶಗಳು ಆಕಾರ, ಬಣ್ಣ ಮತ್ತು ಮೇಲ್ಮೆ„ರಚನೆ (ಟೆಕ್ಸ್‌ಚರ್). ಆದರೆ, ನಾನು ಇಲ್ಲಿ ಧ್ವನಿಯನ್ನೂ ಸೇರಿಸುತ್ತಿದ್ದೇನೆ. ಹಿಂದಿಯ ಒಬ್ಬ ಉತ್ತಮ ನಟ ಹೇಳಿದ್ದು ನೆನಪಾಗುತ್ತದೆ. ಒಬ್ಬ ಹೊರದೇಶದ ಬಿಳಿಯ ಕೆಮರಾಮನ್‌ಕೆಮರಾದ ಹಿಂದೆ ನಿಂತುಕೊಂಡರೆ ಸಾಕು ನಮಗೆ ಕಾಲು ನಡುಗಲು ಪ್ರಾರಂಭವಾಗಿ ನಟನೆ ಮಾಡಲು ಕಷ್ಟವಾಗುತ್ತದೆ.ಮೂರು ತಿಂಗಳಿನ ನಂತರ ಲಂಡನ್ನಿನ ಮದುವೆಯೊಂದಕ್ಕೆ ಹೋದಾಗ ಅದೇ ಕೆಮರಾಮನ್ ಮದುವೆ ಕ್ಯಾಮರಾಮನ್ನಿನ ಹಿಂದೆ ಕೇಬಲ್ಲನ್ನು ಸುತ್ತಲು ಸಹಕರಿಸುತ್ತಿರಬಹುದು! ನಮಗೆ ಬಿಳಿ ಬಣ್ಣದಲ್ಲಿರುವವರೆಲ್ಲ ಅವರ ಕ್ಷೇತ್ರದಲ್ಲಿ ಎತ್ತರದಲ್ಲಿದ್ದಾರೆ ಎಂದು ಅನಿಸಿಬಿಡುತ್ತದೆ! ಅಂತೆಯೇ ಧ್ವನಿ ಕೂಡ. ಎರಡು ವ್ಯಕ್ತಿಗಳ ಧ್ವನಿಯನ್ನು ರೇಡಿಯೋ ಎಫ್ಎಮ್ಮಿನಲ್ಲಿ ಕೇಳಿದಾಗ ಅವರ ಬಗ್ಗೆ ಒಂದು ಗ್ರಹಿಕೆ ನಿಮ್ಮಲ್ಲಿರುತ್ತದೆ. ನಂತರ ಅದೇ ವ್ಯಕ್ತಿಗಳನ್ನು ಟಿವಿಯಲ್ಲಿ ಗಮನಿಸಿದಾಗ ಹಿಂದಿನ ಗ್ರಹಿಕೆ ಪೂರ್ತಿ ಬದಲಾಗಬಹುದು. ಉದಾಹರಣೆಗೆ ರೇಡಿಯೋದ ಗಡಸು ಧ್ವನಿಯ ಗ್ರಹಿಕೆಯಿಂದ ಹುಟ್ಟಿದ ಕಟ್ಟುಮಸ್ತಾದ ಆಕೃತಿ ಆತನನ್ನು ಟಿವಿಯಲ್ಲಿ ನೋಡಿದಾಗ ಆತ ನಿಜವಾಗಲೂ ಬಹಳ ಕೃಶವಾಗಿದ್ದು ಕಾಣಲೂ ಸುಂದರವಾಗಿರದೇ ಅಭಿಪ್ರಾಯ ಪೂರ್ತಿ ಬದಲಾಗಬಹುದು. ಅಂತೆಯೇ ಮದುವೆಗೆ ಸಂಬಂಧಪಟ್ಟು ಹುಡುಗ-ಹುಡುಗಿಯ ಫೊಟೊಶಾಪ್, ಇತ್ಯಾದಿ ಸಾಫ್ಟ್ವೇರ್‌ನಲ್ಲಿ ಟಚಪ್ ಮಾಡಿ ಮೊದಲ ಪ್ರಭಾವ ಗಿಟ್ಟಿಸಿದ ಉದಾಹರಣೆಗಳನ್ನೂ ಗಮನಿಸಿರುತ್ತೇವೆ. ಹಾಗೇ ಬರೀ ಫೊಟೊದ ಮೂಲಕವೇ ಸಂಬಂಧ ಕುದುರಿ ಮದುವೆಯ ದಿನವಷ್ಟೇ ಪರಸ್ಪರ ಮುಖ ನೋಡಿಕೊಂಡು ಮದುವೆಯಾದ ಜೋಡಿಗಳು ಇಂದು ಸುಖದಿಂದ ಬದುಕುತ್ತಿರುವುದನ್ನೂ ನಾವು ನೋಡಿದ್ದೇವೆ!
ಈಗ ಮತ್ತೆ ನಾವು ಪ್ರಾಡಕ್ಟಿನ ವಿನ್ಯಾಸದ ಕಡೆ ಹೊರಳ್ಳೋಣ.ಒಂದು ವಸ್ತು ಅಥವಾ ಪ್ರಾಡಕ್ಟಿನ ಆಕಾರವು ಅದರ ಉದ್ದೇಶಿತ ಕಾರ್ಯವನ್ನು ಅನುಸರಿಸಬೇಕು (ಫ‚ಾರ್ಮ್ ಫ‚ೊಲೋಸ್ ಫ‚ಂಕ್ಷನ್) ಎನ್ನುವುದು ವಿನ್ಯಾಸ ಕ್ಷೇತ್ರದಲ್ಲಿನ ಮುಖ್ಯ ಹಾಗೂ ಸಮ್ಮತವಾದ ವಾದ. ಉದಾಹರಣೆಗೆ, ಸಕ್ಕರೆ ಚಮಚದ ಆಕಾರ ಕನಿಷ್ಟ ಸಕ್ಕರೆಯನ್ನು ತೆಗೆಯುವ ಮತ್ತು ಹಿಡಿದಿಟ್ಟುಕೊಳ್ಳುವ ಕಾರ್ಯಕ್ಷಮತೆಯನ್ನು ತೋರಬೇಕಲ್ಲಾ, ಕೈ ತೊಳೆಯುವ ಬೇಸಿನ್ನಿನ ಆಕಾರ (ನಿಮ್ನ ಮಾದರಿ) ನೀರು ಹೊರಗೆ ಹೋಗದೇ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗಬೇಕಲ್ಲ. ಊಟ ಮಾಡುವ ಬಟ್ಟಲಿನ ಆಕಾರ ನಿಮ್ನ ಮಾದರಿಯಲ್ಲಿಲ್ಲದೇ ಪೀನ ಮಾದರಿಯಲ್ಲಿದ್ದರೆ ಅನ್ನ ಮತ್ತು ಎರೆದ ಸಾಂಬಾರ ಕೆಳಗೆ ಹರಿದು ಹೋಗಬಹುದಲ್ಲ. ಕಿವಿಯ ಕುಗ್ಗೆ ತೆಗೆಯಲು ದಬ್ಬಣವನ್ನು ಹಾಕಲಾಗುವುದೇ? ಹಾಗಾಗಿ, ಆಕಾರವು ಉದ್ದೇಶಿತ ಕಾರ್ಯಕ್ಕೆ ಸಹಕಾರಿಯಾಗಿರಬೇಕು ಎನ್ನುವುದನ್ನು ಒಪ್ಪಲೇ ಬೇಕು. ಅದರರ್ಥ ಆಕಾರಕ್ಕೆ ಎರಡನೆಯ ದರ್ಜೆ ಎಂದಲ್ಲ. ಒಂದು ಪ್ರಾಡಕ್ಟಿನ ಉದ್ದೇಶಿತ ಕಾರ್ಯವೇನು? ಉದ್ದೇಶಕ್ಕೆ ತಕ್ಕಂತೇ ಅದರ ಕಾರ್ಯಕ್ಷಮತೆ ತೋರುವುದು. ಹಾಗಾದರೆ, ಅದರ ರೂಪ ಅಥವಾ ಸೌಂದರ್ಯದ ಉದ್ದೇಶಿತ ಕಾರ್ಯವೇನು? ಮೊದಲನೆಯದು ಆ ಪ್ರಾಡಕ್ಟಿನ ಉದ್ದೇಶಿತ ಕಾರ್ಯಕ್ಕೆ ಸಹಕಾರಿಯಾಗುವುದು ಮತ್ತು ಎರಡನೆಯದು ಅಷ್ಟೇ ಮುಖ್ಯವಾಗಿ ಅದು ಚಂದ ಅಥವಾ ಸುಂದರವಾಗಿ ಕಾಣುವುದೇ ಅದರ ಕೆಲಸ. ಚೆನ್ನಾಗಿ ಕಾರ್ಯಕ್ಷಮತೆ ಹೊಂದಿದ ಬೇಸಿನ್ ಕಾಣಲು ಚೆನ್ನಾಗಿರದಿದ್ದರೆ ಗ್ರಾಹಕರು ಖರೀದಿಸುವುದು ಕಷ್ಟ ಎಂದು ಬೇರೆಯಾಗಿ ಹೇಳಬೇಕಿಲ್ಲ. ಪಕ್ಷಪಾತದ ವಿಚಾರ ಬಂದಾಗಲೆಲ್ಲಾ ಗ್ರಹಿಕೆ (ಪರ್ಸೆಪ್ಶನ್) ಎನ್ನುವ ಶಬ್ದದ ಬಳಕೆ ಸಹಜವೇ. ನಾವು ಏನನ್ನಾದರೂ ನೋಡಿದರೆ ಅದರ ಬಗ್ಗೆ ನಾವು ಒಂದಿಷ್ಟು ವಿಷಯಗಳನ್ನು ಊಹಿಸಿಕೊಳ್ಳುತ್ತೇವೆ. ಊಹಿಸಿಕೊಂಡದ್ದು ನಡೆಯದೇ ಇದ್ದರೆ ನಾವು ಬೇಸರಗೊಳ್ಳುತ್ತೇವೆ (ಮರೀಚಿಕೆ). ವಿನ್ಯಾಸದ ಮೊದಲ ಉದ್ದೇಶ ಗ್ರಾಹಕನ ಗ್ರಹಿಕೆಯ ಮೇಲೆ ಪ್ರಭಾವ ಬೀರುವುದೇ ಆಗಿದೆ. ಉದಾಹರಣೆಗೆ ದೂರದಿಂದ ಕಾರಿನ ಸೀಟನ್ನು ನೋಡಿ ಅದು ಚರ್ಮದ್ದು, ಅದರ ಮೇಲೆ ಕುಂತರೆ ಬೆಚ್ಚಗಿರುತ್ತದೆ ಎಂದು ಗ್ರಹಿಸುತ್ತೀರಿ, ನಂತರ ಅದರ ಮೇಲೆ ಕುಂತಾಗ ಅದು ಬಹಳ ತಣ್ಣಗಿದ್ದು ನೀವು ಗ್ರಹಿಸಿದ ಅನುಭವ ಕೊಡುವುದೇ ಇಲ್ಲ. ತುಂಬಾ ಚಂದವಿರುವ ಜ್ಯೂಸರನ್ನು ಮನೆಗೆ ತಂದ ಮರುದಿನವೇ ಅದರ ಮೋಟರ್ ಸುಟ್ಟು ಹೊದರೆ, ಅಥವಾ ಜ್ಯೂಸೇ ಹೊರಬರದಿದ್ದರೆ ನಿಮಗೆ ಬೇಸರವಾಗುವುದು ಖಂಡಿತ. ಆಗಲೇ ಒಂದು ಬ್ರ್ಯಾಂಡ್ ತನ್ನ ನಂಬಿಕೆ (ಟ್ರಸ್ಟ್) ಕಳೆದುಕೊಳ್ಳುವುದು. ಪ್ರಾಡಕ್ಟ್ ಚಂದ್ರನನ್ನು ಬಿಂಬಿಸುವ ವಿಷದ ಬಟ್ಟಲಲ್ಲಾ. ಅದು ಜೇನುತುಪ್ಪವಾಗಬೇಕು. ಅದು ಏಕಕಾಲದಲ್ಲಿ ಸತ್ಯವೂ, ಸುಂದರವೂ, ಮಂಗಳಕರವೂ ಆಗಿರಬೇಕು (ಸತ್ಯಂ ಶಿವಂ ಸುಂದರಂ). ನಿಜವಾದ ಪ್ರಾಡಕ್ಟಿನಲ್ಲಿ ಗ್ರಹಿಕೆ ಮತ್ತು ವಾಸ್ತವದ ನಡುವಿನ ಅಂತರ ಬಹಳ ಕಡಿಮೆ ಇರುತ್ತದೆ ಅಂದರೆ ಝೀರೊ. ಆಗಲೇ ನಂಬಿಕೆ ನೂರಾಗುವುದು. ಹಾಗೆಂದ ಮಾತ್ರಕ್ಕೆ ಪಕ್ಷಪಾತವೂ ಸಹಜವೇ! ಆಸ್ಪತ್ರೆಯಲ್ಲಿ ಜೋರಾಗಿ ಅಳುವ ಮಗುವಿನ ಎದುರು ಒಂದು ಸುಂದರವಾದ ನರ್ಸನ್ನು ನಿಲ್ಲಿಸಿ, ಮಗು ಒಮ್ಮೆಲೇ ಅಳು ನಿಲ್ಲಿಸಿ ಬಿಡಬಹುದು! ಚಿತ್ರ : ಬಾಲಸುಬ್ರಹ್ಮಣ್ಯ ಭಟ್
ಸಚ್ಚಿದಾನಂದ ಹೆಗಡೆ