ಸತೀಶ್ ನೀನಾಸಂ, ತಮ್ಮ ಸತೀಶ್ ಪಿಕ್ಚರ್ ಹೌಸ್‌ನಿಂದ “ರಾಮನು ಕಾಡಿಗೆ ಹೋದನು’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಷಯ ಗೊತ್ತಿರಬಹುದು. ಈಗಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನೇನು ಚಿತ್ರ ಸದ್ಯದಲ್ಲೇ ಶುರುವಾಗಬಹುದು ಎನ್ನುವಷ್ಟರಲ್ಲೇ ಈ ಚಿತ್ರ ನಿಂತಿದೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಹೌದು, ಸತೀಶ್ ಅಭಿನಯದ ಮತ್ತು ನಿರ್ಮಾಣದ “ರಾಮನು ಕಾಡಿಗೆ ಹೋದನು’ ಚಿತ್ರವು ನಿಂತಿದೆ ಎಂದು ಪುಕಾರು ಆಗಿದೆ.
ಈ ವಿಷಯವನ್ನು ಸತೀಶ್ ಅವರಲ್ಲೇ ನೇರವಾಗಿ ಕೇಳಿದರೆ, ಚಿತ್ರ ನಿಂತಿಲ್ಲ ಮುಂದಕ್ಕೆ ಹೋಗಿದೆ ಎಂಬ ಉತ್ತರ ಅವರಿಂದ ಬರುತ್ತದೆ. “ರಾಮನು ಕಾಡಿಗೆ ಹೋದನು’ ಚಿತ್ರವು ಮುಂದಕ್ಕೆ ಹೋಗಿದೆ. ಬರೀ ಒಂದೆರೆಡು ತಿಂಗಳು ಮುಂದಕ್ಕಲ್ಲ, ಬರೋಬ್ಬರಿ ಆರು ತಿಂಗಳು ಮುಂದಕ್ಕೆ ಹೋಗಿದೆಯಂತೆ. ಅದಕ್ಕೆ ಕಾರಣವೇನೆಂದು ಕೇಳಿದರೆ, ನಗು ಬರಬಹುದು. ಏಕೆಂದರೆ, ಚಿತ್ರಕ್ಕೆ ಅಡ್ಡಗಾಲು ಹಾಕುತ್ತಿರುವುದು ಬೇರೆ ಯಾರೋ ಅಲ್ಲ, ಗಡ್ಡ ಎನ್ನುತ್ತಾರೆ ಸತೀಶ್.
“ಹೌದು, “ರಾಮನು ಕಾಡಿಗೆ ಹೋದನು’ ಚಿತ್ರ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಗಡ್ಡ. ಎಲ್ಲಾ ಸರಿ ಹೋಗಿದ್ದರೆ, ಇಷ್ಟರಲ್ಲಿ ಸಿನಿಮಾ ಶುರುವಾಗಬೇಕಿತ್ತು. ಆದರೆ, ಮುಂದೆ ಹೋಗಿದ್ದ “ಅಯೋಗ್ಯ’ ಸಡನ್ ಆಗಿ ಶುರುವಾಗಿದೆ. ಆ ಚಿತ್ರಕ್ಕೆ ಗಡ್ಡ ಬೇಕು. “ಅಯೋಗ್ಯ’ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ತಮಿಳು ಚಿತ್ರದ ಚಿತ್ರೀಕರಣ ನಡೆಯಲಿದೆ. ಆ ಚಿತ್ರಕ್ಕೆ ಏನಿಲ್ಲವೆಂದರೂ ಮೂರು ತಿಂಗಳು ಬೇಕು. ಮಧ್ಯೆ “ರಾಮನು ಕಾಡಿಗೆ ಹೋದನು’ ಚಿತ್ರ ಶುರು ಮಾಡುವ ಹಾಗಿಲ್ಲ.
ಏಕೆಂದರೆ, “ಅಯೋಗ್ಯ’ ಮತ್ತು ತಮಿಳು ಚಿತ್ರಗಳಿಗೆ ಗಡ್ಡ ಬೇಕು. ಈ ಚಿತ್ರಕ್ಕೆ ಬೇಡ. ಈ ಚಿತ್ರಕ್ಕೋಸ್ಕರ ಗಡ್ಡ ಬೋಳಿಸಿದರೆ, ಕಂಟಿನ್ಯುಟಿ ಮಿಸ್ ಆಗುತ್ತದೆ. ಹಾಗಾಗಿ ಆ ಎರಡೂ ಚಿತ್ರಗಳ ಚಿತ್ರೀಕರಣ ಮುಗಿದ ನಂತರ “ರಾಮನು ಕಾಡಿಗೆ ಹೋದನು’ ಶುರುವಾಗಲಿದೆ. ಚಿತ್ರ ಸ್ವಲ್ಪ ನಿಧಾನವಾಗಲಿದೆ ಎಂಬುದು ಬಿಟ್ಟರೆ, ಮಿಕ್ಕಂತೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಆರು ತಿಂಗಳಾದರೂ ಚಿತ್ರ ಶುರುವಾಗಿಯೇ ಆಗುತ್ತದೆ’ ಎನ್ನುತ್ತಾರೆ ಸತೀಶ್ ನೀನಾಸಂ.
“ರಾಮನು ಕಾಡಿಗೆ ಹೋದನು’ ಚಿತ್ರವನ್ನು ವಿಕಾಸ್ ಪಂಪಾಪತಿ ಮತ್ತು ವಿನಯ್ ಪಂಪಾಪತಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣ ಮಾಡಿದರೆ, ಮಿಥುನ್ ಮುಕುಂದನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರ ಹುಡುಕಾಟ ನಡೆಯುತ್ತಿದೆ. ಸದ್ಯಕ್ಕೆ ಸತೀಶ್ ನೀನಾಸಂ ಜೊತೆಗೆ ಅಚ್ಯುತ್ ಕುಮಾರ್ ನಟಿಸುತ್ತಿದ್ದು, ಮಿಕ್ಕ ಕಲಾವಿದರ ಆಯ್ಕೆ ನಡೆಯುತ್ತಿದೆ.