ಕಾಸರಗೋಡು: ನಗರವನ್ನು ಆಕರ್ಷಕವನ್ನಾಗಿ ಪರಿವರ್ತಿಸುವ ಮತ್ತು ಸ್ಥಳೀಯರಿಗೆ ಸಂಜೆ ಹೊತ್ತು ವಿಶ್ರಾಂತಿ ಪಡೆಯಲು ಸೌಕರ್ಯ ಕಲ್ಪಿಸುವುದಕ್ಕಾಗಿ ಕಾಸರಗೋಡು ನಗರದಲ್ಲಿ ಆರು ಪಾರ್ಕ್ ಗಳಿವೆ. ಆರಂಭ ಶೂರತನವೆಂಬಂತೆ ಪಾರ್ಕ್‌ಗಳು ತಲೆಯೆತ್ತುತ್ತಿದ್ದಾಗ ಈ ಪಾರ್ಕ್‌ಗಳು ನಗರಸಭೆಯ ಉದ್ದೇಶಗಳು ಈಡೇರು ತ್ತವೆ ಎಂದೇ ಪರಿಗಣಿಸಲಾಗಿತ್ತು. ಆದರೆ ಇಲ್ಲಿನ ಪಾರ್ಕ್‌ಗಳೆಲ್ಲ ಅವ್ಯವಸ್ಥೆಯ ಮತ್ತು ಸಮಾಜಕಂಟಕರ ಕೇಂದ್ರವಾಗಿ ಬದಲಾಗಿರುವುದು ನಿಜಕ್ಕೂ ಆತಂಕವನ್ನು ಹುಟ್ಟಿಸುತ್ತದೆ. ನಗರದಲ್ಲಿರುವ ಎಲ್ಲಾ ಪಾರ್ಕ್‌ಗಳು ಒಡೆದ ಮದ್ಯ ಬಾಟಲಿಗಳ ಕೇಂದ್ರಗಳಾಗಿ ಬದಲಾಗಿವೆ. ಈ ಸಾಲಿಗೆ “ಬೀಚ್ ಪಾರ್ಕ್’ ಸೇರ್ಪಡೆಗೊಂಡಿದೆ.
ಹಲವು ಯೋಜನೆಗಳು ಹೀಗೆ..! ಕಾಮಗಾರಿ ನಡೆದರೂ ಉದ್ಘಾಟನೆಗೆ ಮೀನಮೇಷ ಎಣಿಸುತ್ತಲೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಕೆಲವು ಶಿಲಾನ್ಯಾಸಗೊಂಡು ಹಲವು ವರ್ಷಗಳೇ ಸಂದರೂ ಕಾಮಗಾರಿ ಆರಂಭಗೊಳ್ಳುವುದೇ ಇಲ್ಲ. ಇಲ್ಲಿ ಹೇಳ ಹೊರಟಿರುವುದು ಮೊದಲ ಸಾಲಿಗೆ ಸೇರಿದ್ದು.
ಕಾಸರಗೋಡು ನಗರದಲ್ಲಿ ಪ್ರಕೃತಿಯನ್ನು ಸವಿಯಲು ಹಾಗೂ ಸಂಜೆಯ ಹೊತ್ತು ವಿಶ್ರಾಂತಿ ಪಡೆಯಲು ಸಾಕಷ್ಟು ಪಾರ್ಕ್ ಗಳಿವೆ. ಬಹುತೇಕ ಪಾರ್ಕ್‌ಗಳು ಅವ್ಯವಸ್ಥೆಯಿಂದ ಕೂಡಿದ್ದು, ಇದ್ದಬದ್ದ ಮಕ್ಕಳ ಆಟಿಕೆ ಸಾಮಗ್ರಿಗಳು ಕಿತ್ತು ಹೋಗಿವೆ. ಇಲ್ಲವೇ ಕಳವಾಗಿವೆ. ಇನ್ನು ಕೆಲವು ಮುರಿದು ಬಿದ್ದಿವೆೆ. ಆದರೆ ಈ ಚಿತ್ರದಲ್ಲಿರುವ ಪಾರ್ಕ್ ಕಾಮಗಾರಿ 2016ರಲ್ಲೇ ಪೂರ್ತಿಯಾಗಿತ್ತು. ಆದರೆ ಈ ಪಾರ್ಕ್ ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಕಾಸರಗೋಡು ಕಸಬ ಕಡಪ್ಪುರದಲ್ಲಿ ನಿರ್ಮಿಸಲಾದ ಈ ಪಾರ್ಕ್ ಅಧಿಕೃತವಾಗಿ ಉದ್ಘಾಟನೆಗೊಳ್ಳದಿದ್ದರೂ ಜನರೇ ಪಾರ್ಕ್ ನೊಳಗೆ ನುಗ್ಗಿ ಉದ್ಘಾಟಿಸಿದ್ದಾರೆ ಎಂಬುದು ಬೇರೆ ಮಾತು. ಸುಣ್ಣ ಬಣ್ಣ ಬಳಿದು ಉದ್ಘಾಟನೆಗೆ ಸಜ್ಜುಗೊಂಡಿತ್ತು. ಪಾರ್ಕ್ ಗೆ ಕಾಂಪೌಂಡು ನಿರ್ಮಾಣವಾಗಿತ್ತು.
ಗೇಟ್ ಹಾಕಲಾಗಿತ್ತು. ಪಾರ್ಕ್‌ನೊಳಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯೂ ಇದೆ. ಹುಲ್ಲು ಬೆಳೆದು ಒಣಗಿದೆ. ಆದರೆ ಆಸನ ಮುರಿದು ಬಿದ್ದಿದೆ.
ವಿದ್ಯುತ್ ದೀಪಗಳನ್ನು ಅಳವಡಿಸಲು ಸಿದ್ಧಪಡಿಸಿದ ಅಲಂಕೃತ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಈ ಕಂಬಗಳೂ ತುಕ್ಕು ಹಿಡಿಯುತ್ತಿವೆ. ಪಾರ್ಕ್‌ನ ಗೇಟ್ ತುಕ್ಕು ಹಿಡಿದು ಕಳೆಕುಂದಿದೆ. ಈಗ 24 ಗಂಟೆಯೂ ಪಾರ್ಕ್‌ನ ಗೇಟ್ ತೆರೆದೇ ಇರುತ್ತದೆ.
ಒಂದೆಡೆ ಸಮುದ್ರ. ಇನ್ನೊಂದೆಡೆ ಹೊಳೆ ಹರಿಯುತ್ತಿದೆ. ಇದರ ಮಧ್ಯೆ ಬೀಚ್ ಪಾರ್ಕ್ ಸ್ಥಾಪಿಸಲಾಗಿದೆ. ಈ ಪಾರ್ಕ್‌ನಲ್ಲಿ ಕುಳಿತುಕೊಂಡು ವಿಶ್ರಾಂತಿ ಪಡೆಯುವ ಜತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಪಾರ್ಕ್‌ನಿಂದ ಕೆಲವೇ ದೂರದಲ್ಲಿ ನಿರ್ಮಾಣ ಹಂತದಲ್ಲಿರುವ ಮೀನುಗಾರಿಕಾ ಬಂದರು ಕಾಣಬಹುದು. ಈ ಪಾರ್ಕ್‌ಗೆ ಹೋಗಲು ಉತ್ತಮ ರಸ್ತೆಯೂ ಇದೆ. ರಸ್ತೆಗೆ ವಿದ್ಯುತ್ ವ್ಯವಸ್ಥೆಯೂ ಇದೆ. ಆದರೆ ಈ ಪಾರ್ಕ್ ಮಾತ್ರ ತನ್ನ ದುಸ್ಥಿತಿಯ ಬಗ್ಗೆ ಕಂಬನಿ ಸುರಿಸುತ್ತಿದೆ.
ಕಡಲ ತೀರದಲ್ಲಿ ಬೀಸುವ ಉಪ್ಪಿನ ತೇವಾಂಶ ಗಾಳಿಯಿಂದಾಗಿ ಕಬ್ಬಿಣಕ್ಕೆ ಶೀಘ್ರವೇ ತುಕ್ಕು ಹಿಡಿಯುತ್ತದೆ. ಇಲ್ಲಿ ಕೂಡ ಇದೇ ಕಾರಣದಿಂದ ಗೇಟ್, ಆಸನಗಳು, ವಿದ್ಯುತ್ ದೀಪ ಬಳಸುವ ಕಂಬಗಳು ತುಕ್ಕು ಹಿಡಿದು ನಾಶದ ಅಂಚಿಗೆ ಸರಿದಿವೆೆ. ಇಲ್ಲಿನ ವಿಶ್ರಾಂತಿ ಮಂದಿರ, ಕಾಂಪೌಂಡ್ ಮೊದಲಾದವುಗಳಿಗೆ ಬಳಿದ ಬಣ್ಣ ಮಾಸಿ ಹೋಗಿದ್ದು, ಬಣ್ಣ ಕಳೆದುಕೊಂಡಿದೆ. ಲಕ್ಷಾಂತರ ರೂ. ವೆಚ್ಚ ಮಾಡಿದ್ದರೂ ಇದನ್ನು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಸ್ಥಳೀಯರಿಗಿದೆ.