Advertisement

ಬಿಸಿಸಿಐ ಕಾರ್ಯದರ್ಶಿಗೆ “ಭತ್ಯೆ’ಸಮಸ್ಯೆ

06:15 AM Aug 05, 2018 | |

ಮುಂಬಯಿ: ಭಾರತೀಯ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸುಮಾರು 25 ಲಕ್ಷ ರೂ.ವರೆಗಿನ ಟಿಎ/ಡಿಎ ಭತ್ಯೆಯನ್ನು ಮರುಪಾವತಿಸುವಂತೆ ಬಿಸಿಸಿಐಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಬಿಸಿಸಿಐ ಒಳಗೇ ಪ್ರಶ್ನೆಗಳಿಗೆ ಕಾರಣವಾಗಿದೆ.ಇದೇ ವರ್ಷ ಜನವರಿಯಿಂದ, ಜೂನ್‌ವರೆಗೆ 110 ದಿನಗಳ ಕಾಲ ಪ್ರವಾಸದಲ್ಲಿದ್ದ ಚೌಧರಿ, 25 ಲಕ್ಷ ರೂ. 

Advertisement

ಖರ್ಚಾಗಿದೆಯೆಂದು ಲೆಕ್ಕ ಕೊಟ್ಟಿದ್ದಾರೆ. ಅತ್ತ, ಬಿಸಿಸಿಐ ಅಧ್ಯಕ್ಷ ಸಿ.ಕೆ. ಖನ್ನಾ ಹಾಗೂ ಖಜಾಂಚಿ ಅನಿರುದ್ಧ್ ಚೌಧರಿ ಅವರು ಟಿಎ/ಡಿಎ ರೂಪದಲ್ಲಿ ಕ್ರಮವಾಗಿ 6 ಲಕ್ಷ ರೂ. ಹಾಗೂ 15 ಲಕ್ಷ ರೂ. ಮರುಪಾವತಿ ಪಡೆದಿರುವಾಗ ಅನಿರುದ್ಧ್ ಅವರು 25 ಲಕ್ಷ ರೂ. ಮರುಪಾವತಿಯಾಗಬೇಕೆಂದು ಕೇಳಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಯಾಣ ನಿಯಮಗಳೇನು?
ಬಿಸಿಸಿಐನ ಪ್ರಯಾಣದ ನಿಯಮಗಳಂತೆ, ಮಂಡಳಿಯ ಯಾವುದೇ ಅಧಿಕಾರಿಯ ವಿದೇಶ ಪ್ರವಾಸದ ಒಂದು ದಿನದ ಖರ್ಚು 750 ಡಾಲರ್‌ (ಅಂದಾಜು 51,000 ರೂ.) ನಿಗದಿಗೊಳಿಸಲಾಗಿದೆ. ದೇಶಿ ಪ್ರವಾಸಕ್ಕೆಂದು ದಿನವೊಂದಕ್ಕೆ 20,000 ರೂ. ನಿಗದಿಪಡಿಸಲಾಗಿದೆ. ಈ ಭತ್ಯೆಯು ಅಧಿಕಾರಿಗಳು ಕೈಗೊಳ್ಳುವ ಫ‌ಸ್ಟ್‌ ಕ್ಲಾಸ್‌ ವಿಮಾನ ಪ್ರಯಾಣದ ಟಿಕೆಟ್‌, ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ವಾಸ್ತವ್ಯ, ಸ್ಥಳೀಯ ತಿರುಗಾಟಕ್ಕೆ ಪಡೆಯುವ ಸಾರಿಗೆ ವ್ಯವಸ್ಥೆಗಾಗಿ ನೀಡುವ ಭತ್ಯೆಗಳನ್ನು ಹೊರತುಪಡಿಸಿದ್ದಾಗಿದೆ. ಇನ್ನು, ಇವರೊಂದಿಗೆ ಪ್ರಯಾಣಿಸುವ ಇವರ ಸಹಾಯಕರಿಗೂ ದಿನವೊಂದಕ್ಕೆ ಅಂದಾಜು 24,000 ರೂ. ಭತ್ಯೆ ನೀಡಲಾಗುತ್ತದೆ. ಇಷ್ಟಿದ್ದರೂ, 25 ಲಕ್ಷ ರೂ. ಖರ್ಚಾಗಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಫಿಫಾಕ್ಕಿಂತಲೂ ಹೆಚ್ಚು ಭತ್ಯೆ!
ಜಗತ್ತಿನ ಅತಿ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಫಿಫಾ ಇತ್ತೀಚೆಗೆ ರಶ್ಯದಲ್ಲಿ ನಡೆದ ಫ‌ುಟ್‌ಬಾಲ್‌ ವಿಶ್ವಕಪ್‌ ವೇಳೆ, ತನ್ನ ಅಧಿಕಾರಿಗಳಿಗೆ ದಿನವೊಂದಕ್ಕೆ 10,300 ರೂ.ಗಳಷ್ಟು ಭತ್ಯೆ ನೀಡಿರುವಾಗ ಬಿಸಿಸಿಐನಿಂದ ಇಷ್ಟು ದುಬಾರಿ ಭತ್ಯೆ ಏಕೆ ಎಂಬ ಪ್ರಶ್ನೆ ಎದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next