ಬೆಂಗಳೂರು: ಖಾಸಗಿ ಕಟ್ಟಡ ಮಾಲೀಕರೊಬ್ಬರು 600 ಚದರಡಿ ವಿಸ್ತೀರ್ಣದ ಗುಂಡಿ ತೋಡಿ ಮುಚ್ಚದೆ ಹಾಗೇ ಬಿಟ್ಟಿದ್ದರೂ ಕ್ರಮ ಕೈಗೊಳ್ಳದ ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್ ಗರಂ ಆಗಿದೆ.
ಸೋಮವಾರ ರಿಟ್ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ರಾಘವೆಂದ್ರ ಬಿ.ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ದೂರಿನ ಬಗ್ಗೆ 4 ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದ ಬಿಬಿಎಂಪಿ ಕೋಮಾದಲ್ಲಿದೆಯಾ? ಎಂದು ಪ್ರಶ್ನಿಸಿದರು.
ಬನ್ನೇರುಘಟ್ಟ ಮುಖ್ಯರಸ್ತೆಯ ಅರಕೆರೆ ಬಳಿ 2011ರಲ್ಲಿ ಮುನಿನಾರಾಯಣ ಎಂಬುವವರು ತೋಡಿದ್ದ ಗುಂಡಿ ಮುಚ್ಚದಿರುವುದರಿಂದ ಅಪಾಯದ ಸ್ಥಿತಿಯಲ್ಲಿದೆ. ಜತೆಗೆ ಗುಂಡಿ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿ ಸ್ಥಳೀಯರಿಗೆ ತೊಂದರೆಯಾಗಿದೆ. ಈ ಸಂಬಂಧ ಕ್ರಮ ಜರುಗಿಸುವಂತೆ 2012ರಲ್ಲಿ ಬಿಬಿಎಂಪಿಗೆ ದೂರು ನೀಡಲಾಗಿದೆ.
2013ರಲ್ಲಿ ನ್ಯಾಯಾಲಯ ಸಹ ಕ್ರಮ ಕೈಗೊಳ್ಳಲು ಸೂಚಿಸಿದೆ. ಇಷ್ಟಾದರೂ ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರೆ ಏನರ್ಥ? ಬಿಬಿಎಂಪಿ ಕೋಮಾದಲ್ಲಿದೆ ಎಂದು ತಿಳಿದುಕೊಳ್ಳಬೇಕೇ ಅಥವಾ ಗುಂಡಿ ತೋಡಿದವರೊಂದಿಗೆ ಶಾಮೀಲಾಗಿದ್ದಾರೆ ಎಂದು ಭಾವಿಸಬೇಕೇ? ಎಂದು ಪೀಠ ಪ್ರಶ್ನಿಸಿತು.
ಅಲ್ಲದೆ ಈ ಪ್ರಕರಣ ಸಂಬಂಧ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಏನಾಯಿತು. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿಯಾದರೂ ಕ್ರಮ ಕೈಗೊಳ್ಳಿ, ಇಲ್ಲವೇ ಕೋರ್ಟ್ ನಗರಾಭಿವೃದ್ಧಿ ಇಲಾಖೆಯ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಪ್ರಕರಣ ಸಂಬಂಧ ಜುಲೈ 2013ರಿಂದ 2017ರ ಮಾ.8ರವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿತು.