Advertisement

ಕ್ವಾರಿಗಳ ಹಿಂದೆ ಬಿದ್ದ ಬಿಬಿಎಂಪಿ

12:16 PM Dec 17, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ ವಿಫ‌ಲವಾಗಿದ್ದು, ಮತ್ತೆ ತ್ಯಾಜ್ಯ ವಿಲೇವಾರಿಗೆ ಕ್ವಾರಿಗಳನ್ನೇ ಆಶ್ರಯಿಸಲು ಮುಂದಾಗಿದೆ.

Advertisement

ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 4 ಸಾವಿರ ಟನ್‌ ಘನತ್ಯಾಜ್ಯದ ಪೈಕಿ ಶೇ.50ರಷ್ಟನ್ನು ಯಲಯಂಕ ವಲಯದ ಬೆಳ್ಳಹಳ್ಳಿ ಕ್ವಾರಿಯಲ್ಲಿ ಸುರಿಯಲಗುತ್ತಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸದ್ಯ ನಿತ್ಯ 200-300 ಟನ್‌ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಆದರೆ, ಬೆಳ್ಳಹಳ್ಳಿ ಕ್ವಾರಿ ಜನವರಿ ಅಂತ್ಯಕ್ಕೆ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೆ ಕ್ವಾರಿಗಳ ಮೊರೆ ಹೋಗುತ್ತಿದ್ದಾರೆ.

ತ್ಯಾಜ್ಯ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗಿ ಮಾನ ಹರಾಜಾದ ಬಳಿಕವೂ ಬಿಬಿಎಂಪಿ ಎಚ್ಚೆತ್ತುಕೊಳ್ಳದೆ, ನಗರದಲ್ಲಿ ಸೃಷ್ಟಿಯಾಗುವ ತ್ಯಾಜ್ಯ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳ ಮೊರೆ ಹೋಗುತ್ತಿದೆ. ತ್ಯಾಜ್ಯ ವಿಂಗಡಣೆ ಹಾಗೂ ಸಂಸ್ಕರಣೆಗೆ ಆದ್ಯತೆ ನೀಡದ ಪಾಲಿಕೆ, ಕ್ವಾರಿಗಳಲ್ಲಿ ಸುಲಭವಾಗಿ ಸುರಿಯುವ ವಿಧಾನವನ್ನೇ ಅನುಸರಿಸುತ್ತಿರುವುದು ಆತಂಕ ಸೃಷ್ಟಿಸಿದೆ.

ನಗರದಲ್ಲಿ ಉತ್ಪತ್ತಿಯಾಗುವ 4000 ಟನ್‌ ತ್ಯಾಜ್ಯದ ಪೈಕಿ ಶೇ.50ರಷ್ಟು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಸಾಮರ್ಥಯ ಪಾಲಿಕೆ ಏಳು ಸಂಸ್ಕರಣಾ ಘಟಕಗಳು ಹೊಂದಿವೆ. ಆದರೆ, ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫ‌ಲರಾಗಿರುವ ಅಧಿಕಾರಿಗಳು, ತ್ಯಾಜ್ಯ ವಿಲೇವಾರಿಗೆ ಆನೇಕಲ್‌ ಬಳಿಯ ಹುಲ್ಲಹಳ್ಳಿ ಹಾಗೂ ಯಲಹಂಕದ ಮಾರೇನಹಳ್ಳಿಯಲ್ಲಿ ಎರಡು ಕ್ವಾರಿಗಳನ್ನು ಗುರುತಿಸಿ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಆದರೆ, ಪ್ರಸ್ತಾವನೆಗೆ ಈವರೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜನವರಿ ನಂತರ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುವ ಆತಂಕ ಸೃಷ್ಟಿಯಾಗಿದೆ. ನಗರದ ಜನಸಂಖ್ಯೆ 1.20 ಕೋಟಿ ಮೀರಿದ್ದು, ಒಟ್ಟು ತ್ಯಾಜ್ಯದಲ್ಲಿ ಶೇ.40ರಷ್ಟು ಹಸಿ ತ್ಯಾಜ್ಯವಷ್ಟೇ ವಿಂಗಡಣೆಯಾಗುತ್ತಿದೆ. ಉಳಿದ ತ್ಯಾಜ್ಯವನ್ನು ನೇರವಾಗಿ ಬೆಳ್ಳಹಳ್ಳಿ ಕ್ವಾರಿಗೆ ಸುರಿಯಲಾಗುತ್ತಿದ್ದು, ಮನೆ ಮನೆಯಿಂದ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹಿಸದ ಹಿನ್ನೆಲೆಯಲ್ಲಿ ನಾಗರಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಬ್ಲಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತಿವೆ.
 
ಸಿದ್ಧತೆಗೆ ತಿಂಗಳು ಬೇಕು: ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುವುದರಿಂದ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವ ತ್ಯಾಜ್ಯರಸದಿಂದಾಗಿ (ಲಿಚೆಟ್‌) ಅಂತರ್ಜಲ ಕಲುಷಿತಗೊಳ್ಳುವ ಅಪಾಯವಿದ್ದು, ಹಲವು ವೈಜ್ಞಾನಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಜತೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಪಡೆಯಬೇಕು. ತ್ಯಾಜ್ಯ ವಿಲೇವಾರಿಗೆ ಕ್ವಾರಿಯನ್ನು ಸಿದ್ಧಪಡಿಸಲು ಕನಿಷ್ಠ ಒಂದು ತಿಂಗಳ ಸಮಯಾವಕಾಶ ಬೇಕಾಗಲಿದ್ದು, ಪಾಲಿಕೆ ಗುರುತಿಸಿದ ಎರಡು ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸರ್ಕಾರ ಅನುಮೋದನೆ ಹಾಗೂ ಅನುದಾನ ನೀಡದಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. 

Advertisement

ಜಾಗೃತರಾಗದ ನಾಗರಿಕರು: ನಗರದಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ತಲೆದೋರದಂತೆ ತಡೆಯಲು ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆದಾರರು ಮುಂದಾಗದ ಹಿನ್ನೆಲೆಯಲ್ಲಿ ತ್ಯಾಜ್ಯ ವಿಂಗಡಣೆ ಪ್ರಮಾಣ ಕಡಿಮೆಯಾಗಿದ್ದು, ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಹಿನ್ನೆಲೆಯಲ್ಲಿ ಬ್ಲಾಕ್‌ಸ್ಪಾಟ್‌ ಮುಕ್ತ ಅಭಿಯಾನ, ಕಂಪೋಸ್ಟ್‌ ಸಂತೆ, ಸ್ವತ್ಛ ಬೆಂಗಳೂರು ಅಭಿಯಾನ ಸೇರಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಜನರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಮುಂದುವರಿದಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಪಾಲಿಕೆಗೆ ಶಾಶ್ವತ ಪರಿಹಾರ ಬೇಕಿಲ್ಲ: ನಗರದಲ್ಲಿ ತ್ಯಾಜ್ಯ ಸಮಸ್ಯೆ ಭುಗಿಲೆದ್ದು, ಸ್ಥಳೀಯರು ಉಗ್ರ ಹೋರಾಟಕ್ಕೆ ಇಳಿದಾಗ ಮಾತ್ರ ಪಾಲಿಕೆ ಪರಿಹಾರ ಕ್ರಮಗಳಿಗೆ ಮುಂದಾಗುತ್ತದೆ. ಪಾಲಿಕೆಯ ಅಧಿಕಾರಿಗಳು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡದೆ ಕ್ವಾರಿಗೆ ಕಸ ತುಂಬ ಪದ್ಧತಿಗೆ ಮಹತ್ವ ನೀಡುತ್ತಿರುವುದರಿಂದ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ನಗರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನೆಯಾಗಿಲ್ಲ ತ್ಯಾಜ್ಯದಿಂದ ವಿದ್ಯುತ್‌: ವರ್ಷದ ಹಿಂದೆಯೇ ತ್ಯಾಜ್ಯದಿಂದ ವಿದ್ಯುತ್‌ ತಯಾರಿಕಾ ಘಟಕ ನಿರ್ಮಾಣಕ್ಕೆ ಪಾಲಿಕೆ ಚಾಲನೆ ನೀಡಿದರೂ, ಈವರೆಗೆ ಒಂದೇ ಒಂದು ಘಟಕದ ನಿರ್ಮಾಣ ಕಾರ್ಯವೂ ಆರಂಭವಾಗಿಲ್ಲ. ಇನ್ನು ಇತ್ತೀಚೆಗೆ ಮೂರು ಕಡೆಗಳಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕಂಪೆನಿಗಳು ಮುಂದಾಗಿದ್ದು, ಘಟಕಗಳು ಕಾರ್ಯಾರಂಭ ಮಾಡಲು ಕನಿಷ್ಠ ಒಂದು ವರ್ಷ ಬೇಕಾಗಲಿದ್ದು, ಅಲ್ಲಿಯವರೆಗೆ ಕ್ವಾರಿಗಳನ್ನು ಅನಿವಾರ್ಯವಾಗಿ ಆಶ್ರಯಿಸಬೇಕಾಗಿದೆ.

ಬೆಳ್ಳಹಳ್ಳಿ ಕ್ವಾರಿ ಬಹುತೇಕ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಆನೇಕಲ್‌ ಬಳಿಯ ಹುಲ್ಲಹಳ್ಳಿ ಹಾಗೂ ಯಲಹಂಕ ಬಳಿಯ ಮಾರೇನಹಳ್ಳಿ ಕ್ವಾರಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ತ್ಯಾಜ್ಯ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು.
-ರಂದೀಪ್‌, ವಿಶೇಷ ಆಯುಕ್ತರು, ಘನ ತ್ಯಾಜ್ಯ ವಿಲೇವಾರಿ, ಬಿಬಿಎಂಪಿ

* ವೈಜ್ಞಾನಿಕ ಸಂಸ್ಕರಣಾ ಘಟಕಗಳು 7
* ಏಳು ಘಟಕಗಳ ಸಂಸ್ಕರಣಾ ಸಾಮರ್ಥಯ 2300 ಟನ್‌
* ನಿತ್ಯ ಸಂಸ್ಕರಣೆಯಾಗುವ ತ್ಯಾಜ್ಯ 200-300 ಟನ್‌
* ಜನವರಿ ಅಂತ್ಯಕ್ಕೆ ಬೆಳ್ಳಹಳ್ಳಿ ಕ್ವಾರಿ ಭರ್ತಿ
* ಹೊಸದಾಗಿ ಗುರುತಿಸಿರುವ ಕ್ವಾರಿಗಳು – ಹುಲ್ಲಹಳ್ಳಿ, ಮಾರನೇಹಳ್ಳಿ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next