Advertisement

“ರಣಭೂಮಿ’ಯಲ್ಲಿ ಆತ್ಮಗಳ ಹೋರಾಟ

09:47 AM Nov 11, 2019 | Lakshmi GovindaRaju |

“ಕಾಯೋಕ್ಕಂತಾನೇ ದೇವ್ರು ಇದ್ರೆ, ಕೊಲ್ಲೋಕ್ಕಂತಾನೇ ಯಮ ಇರ್ತಾನೆ. ನಾನು ನಿನ್ನ ಪಾಲಿನ ಯಮ…’ ಹೀಗೊಂದು ಡೈಲಾಗ್‌ ಬರುವ ಹೊತ್ತಿಗೆ, ಅಲ್ಲಿ ಮೂರು ಕೊಲೆಗಳು ನಡೆದಿರುತ್ತವೆ. ಆ ಕೊಲೆ ಮಾಡಿದ್ದು ಯಾರು, ನಾಲ್ಕನೆ ಕೊಲೆ ಯಾರಾಗುತ್ತಾರೆ, ಆ ಕೊಲೆಗಳು ಯಾತಕ್ಕಾಗಿ ನಡೆದಿರುತ್ತವೆ. ಎಂಬಿತ್ಯಾದಿ ಕುತೂಹಲದೊಂದಿಗೆ ಸಾಗುವ ಚಿತ್ರದಲ್ಲಿ ಒಂದಷ್ಟು ರೋಚಕತೆ ಇದೆ. ಅಲ್ಲಲ್ಲಿ ಭಯಪಡಿಸುವ ಗುಣವೂ ಇದೆ. ಹಾಗಾಗಿ ಇಲ್ಲೊಂದು ಥ್ರಿಲ್ಲಿಂಗ್‌ ಸ್ಟೋರಿ ಇದೆ. ಜೊತೆಗೊಂದು ಮುದ್ದಾದ ಲವ್‌ಸ್ಟೋರಿಯೂ ಇದೆ. ಇವುಗಳ ಜೊತೆಗೆ ಆಗಾಗ ಕಾಡುವ ಅಂಶಗಳು ಚಿತ್ರದ ಹೈಲೈಟ್‌.

Advertisement

ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ, ಒಮ್ಮೆ “ರಣಭೂಮಿ’ ನೋಡಲ್ಲಡ್ಡಿಯಿಲ್ಲ. ಶೀರ್ಷಿಕೆ ಕೇಳಿದವರಿಗೆ ಇಲ್ಲಿ ಯುದ್ಧದ ನೆನಪಾಗಬಹುದು. ಇಲ್ಲಿ ಯುದ್ಧವಿಲ್ಲ. ಬದಲಾಗಿ ದ್ವೇಷ, ಅಸೂಯೆ, ಭ್ರಷ್ಟತೆಯ ಮೂಟೆ ಇದೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಸಣ್ಣದ್ದೊಂದು ವಿಷಯವೂ ಅಡಗಿದೆ. ಕಥೆ ತುಂಬ ಸರಳವಾಗಿದೆ. ಚಿತ್ರಕಥೆ ಚಿತ್ರದ ವೇಗಕ್ಕೊಂದು ಹೆಗಲುಕೊಟ್ಟಿದೆ. ಹಾಗಾಗಿ, ಕೆಲವೆಡೆ ಇರುವ ಎಡವಟ್ಟುಗಳು ಹಿನ್ನೆಲೆ ಸಂಗೀತದಿಂದ ಪಕ್ಕಕ್ಕೆ ಸರಿಯುತ್ತವೆ. ಮೊದಲೇ ಹೇಳಿದಂತೆ ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ಸಿನಿಮಾ.

ಅದರೊಂದಿಗೆ ಹಾರರ್‌ ಕೂಡ ಇದೆ. ಅದೇ ಚಿತ್ರದ ಜೀವಾಳ. ಇಲ್ಲೂ ಆತ್ಮಗಳಿವೆ. ಆದರೆ, ಆ ಆತ್ಮಗಳು ಯಾರ ವಿರುದ್ಧ ಹೋರಾಡುತ್ತವೆ, ಹೇಗೆ ತಮ್ಮ ದ್ವೇಷ ತೀರಿಸಿಕೊಳ್ಳುತ್ತವೆ ಅನ್ನೋದನ್ನು ನಿರ್ದೇಶಕರು ಅಷ್ಟೇ ಭಯಾನಕವಾಗಿ ತೋರಿಸುವ ಪ್ರಯತ್ನ ಮಾಡುವುದರ ಜೊತೆಯಲ್ಲಿ ತುಂಬಾನೇ ಸಸ್ಪೆನ್ಸ್‌ನಲ್ಲಿಡುತ್ತಾರೆ. ಆ ತಾಕತ್ತು ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತೆ. ಇಂತಹ ಚಿತ್ರಗಳಿಗೆ ಎಫೆಕ್ಟ್ಸ್ ವಿಶೇಷವಾಗಿರಬೇಕು. ಅದು ಚಿತ್ರದುದ್ದಕ್ಕೂ ಅಲ್ಲಲ್ಲಿ ಕಾಣುತ್ತದೆ.

ಹಾರರ್‌ ದೃಶ್ಯಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತದೆಯೋ ಅಲ್ಲೆಲ್ಲಾ ಸಿಜಿ ಕೆಲಸ ಅಷ್ಟೇ ಪರಿಣಾಮಕಾರಿಯಾಗಿಯೂ ನೋಡುಗರನ್ನು ತಕ್ಕಮಟ್ಟಿಗೆ ಬೆಚ್ಚಿಬೀಳಿಸುವ ಪ್ರಯತ್ನ ಮಾಡಿದೆ. ಮೊದಲರ್ಧ ಒಂದು ಮುದ್ದಾದ ಪ್ರೀತಿ ಕಥೆ ಹೇಳುವ ನಿರ್ದೇಶಕರು, ಮಧ್ಯಂತರ ಹೊತ್ತಿಗೆ, ಅಲ್ಲೊಂದು ಟ್ವಿಸ್ಟ್‌ ಕೊಟ್ಟು ಟೆಸ್ಟ್‌ ಮಾಡುತ್ತಾರೆ. ಮೊದಲರ್ಧ ತಾಳ್ಮೆ ಕೆಡಿಸಿಕೊಳ್ಳದಿದ್ದರೆ, ದ್ವಿತಿಯಾರ್ಧ ಸಿನಿಮಾ ಸಮಾಧಾನಿಸುತ್ತದೆ. ಇಂತಹ ಚಿತ್ರಗಳಿಗೆ ಅವಧಿಯೂ ಅಷ್ಟೇ ಮುಖ್ಯ. ಎಷ್ಟು ಹೇಳಬೇಕೋ, ಏನು ತೋರಿಸಬೇಕೋ ಎಲ್ಲವನ್ನೂ ನಿರ್ಧಿಷ್ಟ ಅವಧಿಯೊಳಗೆ ಮುಗಿಸಿರುವುದು ಇನ್ನೊಂದು ಸಮಾಧಾನದ ಸಂಗತಿ.

ಹಾರರ್‌ ಅಂದಾಕ್ಷಣ, ಭಯಂಕರ ಹಿಂಸಿಸುವ ಅಂಶಗಳು ಇಲ್ಲಿಲ್ಲ. ಕ್ಲೈಮ್ಯಾಕ್ಸ್‌ವರೆಗೂ ಕೊಲೆಗಳು ಹೇಗೆ ನಡೆಯುತ್ತವೆ ಅನ್ನುವುದನ್ನು ತುಂಬ ಸಸ್ಪೆನ್ಸ್‌ ಆಗಿ ತೋರಿಸಿರುವ ಅಂಶ ಇಂಟ್ರೆಂಸ್ಟಿಂಗ್‌ ಎನಿಸುತ್ತದೆ. ಇಲ್ಲೂ ಆತ್ಮಗಳು ಕಾಟ ಕೊಡುವುದಷ್ಟೇ ಅಲ್ಲ, ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತವೆ. ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುತ್ತವೆ. ಅದು ಹೇಗೆ ಅನ್ನೋದೇ ಚಿತ್ರದ ಸಾರಾಂಶ. ಒಂದೇ ಒಂದು ವಿಡಿಯೋ, ಎರಡು ಜೀವಗಳ ಬಲಿಗೆ ಕಾರಣವಾಗುತ್ತೆ. ಆಮೇಲೆ ಅಲ್ಲೊಂದು ತನಿಖೆ ಶುರುವಾಗುತ್ತೆ. ತನಿಖೆಯ ಹಾದಿ ತಪ್ಪಿಸುತ್ತಲೇ, ಕೊಲೆಗಳು ನಡೆಯುತ್ತಾ ಹೋಗುತ್ತವೆ.

Advertisement

ಕೊನೆಯಲ್ಲಿ ಕೊಲೆಗಳಿಗೆ ಕಾರಣ ಯಾರು, ಯಾಕೆ ಅನ್ನೋದು ಗೊತ್ತಾಗುತ್ತೆ. ನಿರಂಜನ್‌ ಒಡೆಯರ್‌ ವಿಕ್ರಂ ಪಾತ್ರವನ್ನು ನೀಟ್‌ ಆಗಿ ನಿರ್ವಹಿಸಿದ್ದಾರೆ. ವೇದ ಪಾತ್ರದ ಮೂಲಕ ಕಾರುಣ್ಯರಾಮ್‌ ಒಂದಷ್ಟು ಗಮನಸೆಳೆಯುತ್ತಾರೆ. ಸುಮತಿಯಾಗಿ ಶೀತಲ್‌ಶೆಟ್ಟಿ ನಿರ್ದೇಶಕರ ಅಣತಿಯಂತೆ ಕೆಲಸ ಮಾಡಿದ್ದಾರೆ. ಡ್ಯಾನಿ ಕುಟ್ಟಪ್ಪ ಎಂದಿಗಿಂತಲೂ ಅಬ್ಬರಿಸಿದರೆ, “ರಥಾವರ’ ಲೋಕಿ ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ರಮೇಶ್‌ಭಟ್‌, ಮುನಿ ಇತರರು ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರದೀಪ್‌ ವರ್ಮ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ನಾಗಾರ್ಜುನ್‌ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ರಣಭೂಮಿ
ನಿರ್ಮಾಣ: ದೀಪಕ್‌, ಮಂಜುನಾಥ್‌ ಪ್ರಭು, ಹೇಮಂತ್‌
ನಿರ್ದೇಶನ: ಚಿರಂಜೀವಿ ದೀಪಕ್‌
ತಾರಾಗಣ: ನಿರಂಜನ್‌ ಒಡೆಯರ್‌, ಕಾರುಣ್ಯ ರಾಮ್‌, ಶೀತಲ್‌ಶೆಟ್ಟಿ, “ರಥಾವರ’ ಲೋಕಿ,ಡ್ಯಾನಿ ಕುಟ್ಟಪ್ಪ, ಮುನಿ, ರಮೇಶ್‌ಭಟ್‌ ಇತರರು.

* ವಿಭ

Advertisement

Udayavani is now on Telegram. Click here to join our channel and stay updated with the latest news.

Next