ಒಡೆಯರ ಆಳ್ವಿಕೆಯ ಕಾಲದ ಮೈಸೂರಿನ ಸೊಬಗು, ಲವಲವಿಕೆಯನ್ನು ಕಟ್ಟಿಕೊಡುವ ಈ ಪ್ರಸಂಗ ತುಮಕೂರಿನ ಗೋಮಿನಿ ಪ್ರಕಾಶನ ಹೊರತಂದ, “ಮರೆತುಹೋದ ಮೈಸೂರಿನ ಪುಟಗಳು’ ಕೃತಿಯ ತುಣುಕು….
ಅದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಳ್ವಿಕೆಯ ಕಾಲ. ಇವರನ್ನು ಅತ್ಯಂತ ಕ್ರೀಡಾಸಕ್ತಿ ಹೊಂದಿದ್ದ ಮಹಾರಾಜರು ಎಂದರೆ ತಪ್ಪಾಗಲಾರದು. ಆ ವೇಳೆ, ಅರಸು ಜನಾಂಗದ ಹೆಣ್ಣು ಮಕ್ಕಳೂ ಆಟಪಾಠಗಳಲ್ಲಿ ಭಾಗಿಯಾಗುತ್ತಿದ್ದರು. ಪಗಡೆ, ಇಸ್ಪೀಟು, ಚದುರಂಗ ಮತ್ತು ಗಂಜೀಫಾ- ಇವೇ ಆಗಿನ ಆಟಪಾಠಗಳು. ಭಕ್ಷಿ ಚಾಮಪ್ಪಾಜಿ, ಕಾಂತರಾಜೆ ಅರಸುರವರು, ಷಹ ನಂಜಪ್ಪನವರು, ನಂಜುಂಡ ಶಾಸ್ತ್ರಿಗಳು, ಗೊಮಟಂ ಶ್ರೀನಿವಾಸಾಚಾರ್ಯ, ಕರವಟ್ಟಿ ಶಿಂಗ್ಲಾಚಾರ್ಯರು- ಇವರೇ ಮೊದಲಾದವರು ಚದುರಂಗದಾಟದಲ್ಲಿ ನಿಸ್ಸೀಮರು. ಆದರೆ, ಭಕ್ಷಿ ಚಾಮಪ್ಪಾಜಿಯವರ ಮಗಳು ಇವರೆಲ್ಲರನ್ನೂ ಮೀರಿಸಿದ್ದವರಾಗಿದ್ದರು.
ಆಗಿನ ಕ್ಲೋಸ್‌ಪೇಟ್ ಅಂದರೆ ಈಗಿನ ರಾಮನಗರದಲ್ಲಿ ಒಂದು ಮಿಲಿಟರಿ ಕ್ಯಾಂಪ್ ಇತ್ತು. ಕಾಬೂಲ್‌ನಿಂದ ಕುದುರೆಗಳನ್ನು ಮಾರುವವನೊಬ್ಬ ವಿಕ್ರಯ ಮಾಡುವ ಸಲುವಾಗಿ ಕ್ಲೋಸ್‌ಪೇಟೆಗೆ ಬಂದ. ಆತನೂ ಚದುರಂಗದಲ್ಲಿ ಬಲು ಗಟ್ಟಿಗ. ಕ್ಯಾಂಪಿನಲ್ಲಿ ಇದ್ದ ಸೈನಿಕರಲ್ಲೊಬ್ಟಾತ ಬಹಳ ಚೆನ್ನಾಗಿ ಆಡುತ್ತಾನೆ ಎಂದವನಿಗೆ ತಿಳಿಯಿತು. ಇಬ್ಬರ ನಡುವೆ ಪಂದ್ಯಗಳು ನಡೆದವು. ಸೈನಿಕನ ಕೈಚಳಕವನ್ನು ಕಂಡ ಕಾಬೂಲಿನವ “ನಿನ್ನಆಟ ಬಲು ಅದ್ಭುತ’ ಎಂದು, ಕೊಂಡಾಡಿದ. ಅದಕ್ಕೆ “ಅಯ್ಯೋ ಹುಚ್ಚಾ, ನನ್ನ ಆಟಕ್ಕೇ ಇಷ್ಟು ಮರುಳಾದೆಯಲ್ಲ, ನೀನು ಚದುರಂಗದ ಅದ್ಭುತ ಆಟ ನೋಡುವುದೇಯಾದರೆ, ಮೈಸೂರಿಗೆ ಹೋಗಿ ಭಕ್ಷಿ ಚಾಮಪ್ಪಾಜಿಯವರ ಮಗಳ ಆಟವನ್ನು ನೋಡು’ ಎಂದು ಹೇಳಿದ ಸೈನಿಕ.
ವ್ಯಾಪಾರಿಯ ಕುತೂಹಲ ಕೆರಳಿತು. ಹೇಗಾದರೂ ಮಾಡಿ, ಅರಸರ ಮಗಳ ಆಟವನ್ನು ನೋಡಬೇಕೆಂಬ ಹೆಬ್ಬಯಕೆಯಾಯಿತು. ಮೈಸೂರಿಗೆ ಹೋಗಿ ನಿತ್ಯವೂ ಭಕ್ಷಿ ಚಾಮಪ್ಪಾಜಿಯವರ ಬಂಗಲೆಯ ಮುಂದೆ ನಿಲ್ಲುತ್ತಿದ್ದ. ಅವರು ಹೊರಗೆ ಬಂದಾಗ ಕೈ ಮುಗಿಯುವುದು ಮಾಡುತ್ತಿದ್ದ. ಹೀಗೆ ನಾಲ್ಕಾರು ದಿನಗಳು ಕಳೆದ ಮೇಲೆ ಒಂದು ದಿನ ಭಕ್ಷಿ ಚಾಮಪ್ಪಾಜಿಯವರು, “ಯಾರಯ್ಯ ನೀನು? ಏನಾಗಬೇಕು?’ ಎಂದರು. ಇವನು ತನ್ನಾಸೆಯನ್ನು ಹೇಳಿಕೊಂಡ. ನನ್ನ ಮಗಳಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಅವನನ್ನು ಕಳಿಸಿಕೊಟ್ಟರು.
ಒಳ ಬಂದು ಮಗಳಿಗೆ ಇದನ್ನು ತಿಳಿಸಿದರು. ಆಕೆ ಒಪ್ಪಿದಳು. “ನನ್ನ ಯಾವ ಪ್ಯಾದೆಯಿಂದ ನಿನ್ನ ಅರಸನನ್ನು ಹಿಡಿಯಲಿ?’ – ಈ ಮಾತು ಕೇಳೇ ಕಾಬೂಲಿನವ ಅರ್ಧ ಸೋತುಬಿಟ್ಟ. ಸರಿ, ಒಂದು ಕಾಯಿಯನ್ನು ತೋರಿಸಿದ. ಅದರಿಂದಲೇ ಆಟ ಶುರುಮಾಡಿದ ಅರಸರ ಮಗಳು, ಬರೀ ಆರೇ ಕಾಯಿಗಳನ್ನು ನಡೆಸಿ ಅವನೇ ತೋರಿಸಿದ್ದ ಪ್ಯಾದೆಯಿಂದ ಅವನ ಅರಸನನ್ನು ಕಟ್ಟಿ ಹಾಕಿದಳು. “ನನ್ನ ಜನ್ಮದಲ್ಲೇ ಇಂಥ ಸೋಲನ್ನು ನಾನು ಅನುಭವಿಸಿಲ್ಲ. ಎಂಥ ಚಮತ್ಕಾರ!’ ಎಂದು ಹೇಳಿ, ಎರಡೂ ಕೈಗಳನ್ನು ಜೋಡಿಸಿ, ಉಧ್ದೋ ಉದ್ದ ಅವಳ ಕಾಲಿಗೆ ಎರಗಿಬಿಟ್ಟ.
* ಧರ್ಮೇಂದ್ರ ಕುಮಾರ್ ಅರೇನಹಳ್ಳಿ