ರಟ್ಟಿಹಳ್ಳಿ: ಬಡವರು, ದಿಧೀನ-ದಲಿತರು, ಹಿಂದುಳಿದ ವರ್ಗದವರೇ ನಮ್ಮ ಪಕ್ಷದ ಜೀವಾಳವಾಗಿದ್ದು, ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ
ಮೂಲಮಂತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಟ್ಟಿಹಳ್ಳಿ ಹೊಸ್ ಬಸ್ ನಿಲ್ದಾಣದ ಬಳಿಯ ಪ್ಯಾಟಿಗೌಡ್ರ ಕಣದ ಪಕ್ಕದ ಜಾಗೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಈ ಹಿಂದೆ ಹಾವೇರಿಗೆ ಬಂದಾಗ ಜಿಲ್ಲೆಯ 75 ರೈತ ಕುಟುಂಬಗಳ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಆಗ ಎಲ್ಲ ಕುಟುಂಬದವರಿಗೂ ಸಾಂತ್ವನ ಹೇಳಿ, ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಿದ್ದೆ. ನಾನು ಬಡವರ ಪರವಾಗಿದ್ದೇನೆ. 2004 ರಲ್ಲಿ ನಾನು ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಓರ್ವ ರೈತನ ಬಣವೆಗೆ ಬೆಂಕಿ ಬಿದ್ದಾಗ ಬಂದಿದ್ದೇನೆ. ನನ್ನ ರೈತರ ಸಾಲ ಮನ್ನಾ ಘೋಷಣೆಯಿಂದ 100 ಕೋಟಿಗೂ ಅಧಿಕ ಹಣ ಮನ್ನಾ ಆಗಿರುವುದನ್ನು ಮರೆಯಬೇಡಿ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 2006ರಲ್ಲಿ ಈಗಿನ ಕೃಷಿ ಸಚಿವರಾದ ಬಿ.ಸಿ.ಪಾಟೀಲ ನಿಮ್ಮ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದರು. ಏಳು ಬಾರಿ ನಿಮ್ಮ ತಾಲೂಕಿಗೆ ಭೇಟಿ ನೀಡಿದ ಮೊದಲ ಮುಖ್ಯಮಂತ್ರಿ ನಾನು. ನಿಮಗೋಸ್ಕರ ಇಲ್ಲಿಗೆ ಬಂದದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು. ನಾಡಿನ ಸಮಸ್ತ ರೈತ ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆಡಿಎಸ್ ಬೆಂಬಲಿಸಿ.
ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳ ಆಶಯ ಹೊಂದಿದ್ದು, ಎಲ್‌ಕೆಜಿ ಯಿಂದ 12ನೇ ತರಗತಿ ವರೆಗೆ ಎಲ್ಲಾ ಜಾತಿಯ ಮಕ್ಕಳಿಗೆ ಉಚಿತ ಗುಣಾತ್ಮಕ ಶಿಕ್ಷಣ ದೊರಕಿಸುವುದು, ನಾಡಿನ ಬಡ ಕುಟುಂಬದ ಜನರಿಗೆ 6000 ಗ್ರಾಪಂಗಳ ಪ್ರಮುಖ ಸ್ಥಳಗಳಲ್ಲಿ 30 ಬೆಡ್ ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಉಚಿತ ಆರೋಗ್ಯ ಸೇವೆ ನೀಡುವುದು, ರೈತರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು, ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದು ನಮ್ಮ ಉದ್ದೇಶವಾಗಿದೆ. ಬೇರೆ ಪಕ್ಷಗಳಂತೆ ಜಾತಿ ಧರ್ಮದ ನಡುವೆ ವಿಷ ಬೀಜ ಬಿತ್ತಿ ಮತ ಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ. ಸಮಾಜ ಒಡೆದು ಅಧಿ ಕಾರ ನಡೆಸುವುದು ಆ ಪಕ್ಷಗಳ ಕೆಲಸ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳನ್ನು ಟೀಕಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವುದು, ಋಣಮುಕ್ತ ಕಾಯ್ದೆ ಮೂಲಕ ಸರ್ವ ಜನಾಂಗದ ಅಭಿವೃದ್ಧಿ ನನ್ನ ಆಡಳಿತದ ಮೂಲ ಮಂತ್ರವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ ಮಾತ ನಾಡಿ, ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆಡಿಎಸ್ ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಅವರನ್ನು ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬಸವನಗೌಡ ಸಿದ್ದಪ್ಪಳವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಮಾತನಾಡಿ, ಹಿರೇಕೆರೂರ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಗುರುರಾಜ ಹುಣಸಿಮರದ, ಬಾಸೂರು ಚಂದ್ರೇಗೌಡ, ಶಮಸಾದ್ ಕುಪ್ಪೇಲೂರು, ಶಿಕಾರಿಪುರ ಕ್ಷೇತ್ರದ ಮುಂದಿನ ಚುನಾವಣೆ ಅಭ್ಯರ್ಥಿ ಬಳಿಗಾರ ಇತರರಿದ್ದರು.
ಹಿರೇಕೆರೂರ ಮತಕ್ಷೇತ್ರದ ಮುಂದಿನ ಜೆಡಿಎಸ್ ಅಭ್ಯರ್ಥಿ ಜಯಾನಂದ ಜ್ಯಾವಣ್ಣನವರ ಎಂದು ಘೋಷಿಸಲಾಗಿದ್ದು, ಹಿರೇಕೆರೂರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನೀವು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಒಂದು ಬಾರಿ ಸಂಪೂರ್ಣ ಬಹುಮತದೊಂದಿಗೆ ಯಾರ ಹಂಗಿಲ್ಲದೇ ಅಧಿಕಾರ ನಡೆಸಲು ಅವಕಾಶ ಕೊಡಿ.
ಎಚ್.ಡಿ.ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿಗಳು