Advertisement
ಸಾಮಾನ್ಯವಾಗಿ ಮನೆಯ ಕಾಲಂ ಸ್ಟ್ರಕ್ಚರ್‌ಗಳಲ್ಲಿ ಎಲ್ಲ ಭಾರವನ್ನೂ ಆರ್.ಸಿ.ಸಿ.ಯಿಂದ ಮಾಡಿದ ವ್ಯವಸ್ಥೆಯ ಮೂಲಕ ನಿಯೋಜಿಸಲಾಗಿದ್ದಾಗ, ಗೋಡೆಗಳಿಗೆ ಯಾವ ಭಾರ ಹೊರುವ ಪಾತ್ರವನ್ನೂ ನೀಡಿರುವುದಿಲ್ಲ. ಹೀಗೆ ಮಾಡುವುದರಿಂದ ನಾವು ಪ್ರತೀ ಕಾಲಂ ನಿರ್ದಿಷ್ಟ ಸ್ಥಳದಲ್ಲಿ ನಿಯಮಿತವಾಗಿ ಭಾರ ಹೊರುವಂತೆ ಮಾಡಬಹುದು. ಮಧ್ಯಮ ಗಾತ್ರದ ಮನೆಗಳಲ್ಲಿ ಹತ್ತರ ಆಸುಪಾಸಿನಲ್ಲಿ ಕಾಲಂಗಳ ಸಂಖ್ಯೆ ಇದ್ದರೆ, ಬಂಗಲೆಗಳಲ್ಲಿ ಹದಿನೈದರ ಆಸುಪಾಸಿನಲ್ಲಿ ಕಂಬಗಳು ಇರುತ್ತವೆ. ಇನ್ನು ಅವುಗಳ ಗಾತ್ರವನ್ನು ಆಯಾ ಪ್ರದೇಶದಲ್ಲಿ ಎಷ್ಟೆಷ್ಟು ಭಾರ ಬರುತ್ತದೆ ಎನ್ನುವುದನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಇವು ನೋಡಲು ಸಣ್ಣಗಿದ್ದರೂ ಒಳಗೆ ಸಾಕಷ್ಟು ಸಂಖ್ಯೆಯಲ್ಲಿ ಕಬ್ಬಿಣದ ಸರಳುಗಳನ್ನು ಹೊಂದಿರುತ್ತವೆ. ಹಾಗೆಯೇ ಕೆಲವೊಮ್ಮೆ ನೋಡಲು ದಪ್ಪಗಿದ್ದರೂ, ಭಾರ ಕಡಿಮೆ ಹೊರುವಂತಿದ್ದರೆ, ಅವುಗಳ ಒಳಗೆ ಸರಳುಗಳ ಸಂಖ್ಯೆ ಕಡಿಮೆ ಇರಬಹುದು!
ಈ ಹಿಂದೆ ಹತ್ತು ಅಡಿ ಉದ್ದದ ಗೋಡೆ ಹೊರುತ್ತಿದ್ದ ಭಾರವನ್ನು ಈಗ ಒಂದು ಅಡಿ ಉದ್ದದ ಆರ್.ಸಿ.ಸಿ ಕಂಬ ಹೊರುತ್ತದೆ. ಹಾಗಾಗಿ ನೋಡಲು ಸಣಕಲ ಕಡ್ಡಿಗಳ ಥರ ಇರುವ ಈ ಪೈಲ್ವಾನರು ಬಹು ಮುಖ್ಯ ಕಾರ್ಯ ನಿರ್ವಹಿಸುವ ಕಾರಣ, ನಾವು ಇವುಗಳ ಒಳಗೆ ಹಾಕುವ ಕಬ್ಬಿಣದ ಸರಳುಗಳಿಂದ ಹಿಡಿದು ಅವುಗಳಿಗೆ ಬಳಸುವ ಸಿಮೆಂಟ್ ಕಾಂಕ್ರೀಟ್ ಮಿಶ್ರಣವನ್ನೂ ಸರಿಯಾಗಿ ಮಾಡಬೇಕಾಗುತ್ತದೆ. ಇದರಲ್ಲಿ ಆಗುವ ಏರುಪೇರು, ಕಡೆಗೆ ಕಟ್ಟಡದ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕಟ್ಟಡಗಳು ಸಾಮಾನ್ಯವಾಗಿ ಕುಸಿಯುವುದೇ ಈ ಕಂಬಗಳು ಭಾರ ಹೊರದೆ ಮುರಿದು ಬೀಳುವುದರಿಂದ! ಭಾರ ಹೊರುವ ಗೋಡೆಗಳು ಇದ್ದಾಗ, ಒಂದು ಭಾಗ ಸರಿಯಿಲ್ಲದಿದ್ದರೂ ಮತ್ತೂಂದು ಭಾಗ ಅದರ ಭಾರವನ್ನು ಹೊತ್ತು ಸಮತೋಲನ ಕಾಯ್ದುಕೊಳ್ಳುತ್ತಿದ್ದವು, ಆದರೆ ಈಗ ಹೀಗಿಲ್ಲ! ಒಂದು ಪ್ರದೇಶದ ಇಡೀ ಭಾರವನ್ನು ಅಲ್ಲಿರುವ ಒಂದು ಇಲ್ಲವೇ ಎರಡು ಕಾಲಂಗಳು ಮಾತ್ರ ಹೊರುತ್ತವೆ. ಇವೇನಾದರೂ ಸರಿಯಾಗಿ ತಯಾರಾಗಿರದಿದ್ದರೆ, ಇಡೀ ಕಟ್ಟಡವೇ ಕುಸಿಯುವ ಸಾಧ್ಯತೆ ಇರುತ್ತದೆ! ಲೆಕ್ಕಾಚಾರದ ಸಿಮೆಂಟ್ ಮಿಶ್ರಣ
ಗಾರೆಯವರಿಗೂ ಲೆಕ್ಕಾಚಾರ ಮಾಡಲು ಸರಿಯಾಗಿ ಬರುವುದಿಲ್ಲ. ಹಾಗಾಗಿ, ಕಾಲಂ ಮಿಶ್ರಣವನ್ನು ಅಂದಾಜಿಗೆ ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಜೊತೆಗೆ, ಸಿಮೆಂಟ್ ಚೀಲಗಳಲ್ಲಿ ಬರುವುದರಿಂದ, ಕೂಲಿಯವರು ಅದನ್ನೇ ನೇರವಾಗಿ ಮರಳಿಗೆ ಸುರಿಯುವ ಪರಿಪಾಠವನ್ನೂ ಇಟ್ಟುಕೊಂಡಿರುತ್ತಾರೆ. ಹಾಗಾಗಿ, ಸಿಮೆಂಟ್ ಮರಳು ಅನುಪಾತ ತಪ್ಪಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ಗುಣಮಟ್ಟ ಕಾಯ್ದುಕೊಂಡು ಹೋಗುವ ಜವಾಬ್ದಾರಿಯನ್ನು ನುರಿತ ತಜ್ಞರಿಗೆ ವಹಿಸಿ, ಕಾಲಂ ಮಿಶ್ರಣ ಸರಿಯಾಗಿ ಹಾಕಲಾಗುತ್ತಿದೆಯೇ? ಎಂದು ಗಮನಿಸುತ್ತಿರಬೇಕು. ಕಾಲಂ ಕಾಂಕ್ರೀಟ್ ಗುಣಮಟ್ಟ ಕಾಯ್ದುಕೊಳ್ಳಲು ಇರುವ ಸುಲಭ ಉಪಾಯ- ಮರಳು ಹಾಗೂ ಸಿಮೆಂಟ್‌ಅನ್ನು ಒಂದೇ ರೀತಿ ಅಳೆಯುವುದರಿಂದ! ಸಿಮೆಂಟ್‌ಅನ್ನು ಚೀಲದ ಲೆಕ್ಕದಲ್ಲಿ ಅಳೆಯುತ್ತಿದ್ದರೆ, ಮರಳನ್ನು ಕೂಡಾ ಖಾಲಿ ಸಿಮೆಂಟ್ ಚೀಲಗಳಿಗೆ ತುಂಬಿ ಒಂದು ಚೀಲ ಸಿಮೆಂಟ್‌ಗೆ ಒಂದು ಚೀಲ ಮರಳು ಇಲ್ಲವೇ ಒಂದೂವರೆ ಚೀಲ ಮರಳಿನಂತೆ ಲೆಕ್ಕ ಹಾಕಿ ಮಿಶ್ರಣವನ್ನು ತಯಾರು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಕಾಂಕ್ರೀಟಿಗೆ ಬಳಸುವ ಜೆಲ್ಲಿಕಲ್ಲುಗಳ ಲೆಕ್ಕ ಅಷ್ಟಾಗಿ ತಪ್ಪಾಗುವುದಿಲ್ಲ, ಏಕೆಂದರೆ ಹೆಚ್ಚಾದರೆ ಕಾಂಕ್ರೀಟ್ ಉಳುಕು ಉಳುಕಾಗಿ ಇರುತ್ತದೆ. ಸಾಮಾನ್ಯವಾಗಿ ಒಂದು ಪಾಲು ಸಿಮೆಂಟ್, ಒಂದು ಪಾಲು ಮರಳಿಗೆ ಎರಡು ಪಾಲು ಜೆಲ್ಲಿಕಲ್ಲು ಸಾಕಾಗುತ್ತದೆ. ಆದರೆ ಇದು ಜೆಲ್ಲಿಕಲ್ಲುಗಳ ಗಾತ್ರ ಹಾಗೂ ಅವುಗಳ ಜೊತೆಗೆ ಪುಡಿಯೂ ಸೇರಿದೆಯೇ? ಎಂಬುದನ್ನು ಆಧರಿಸಿ ಲೆಕ್ಕಾಚಾರ ಇರಬೇಕಾಗುತ್ತದೆ.
Related Articles
ಎಲ್ಲಕ್ಕಿಂತ ಫುಟಿಂಗ್ ಕಾಂಕ್ರೀಟ್ ಕ್ಯೂರಿಂಗ್ ಅತಿ ಸುಲಭ. ಒಮ್ಮೆ ನೀರು ಸುರಿದರೆ, ಕೆಳಮಟ್ಟದಲ್ಲಿ ಇರುವುದರಿಂದ ನೀರು ಸುಲಭದಲ್ಲಿ ಆವಿಯಾಗಿ ಹೋಗುವುದಿಲ್ಲ. ಸೂರಿನ ಕ್ಯೂರಿಂಗ್ ಸಹ ಅಂಥ ಕಷ್ಟ ಏನಲ್ಲ. ಪಾತಿ ಮಾಡಿ ನೀರು ನಿಲ್ಲಿಸುವುದರಿಂದ, ಸುಲಭದಲ್ಲಿ ಕೆಲಸ ಮುಗಿಯುತ್ತದೆ. ಆದರೆ, ಕಾಲಂ ಕತೆ ಹಾಗಲ್ಲ. ಇವು ನೇರವಾಗಿ ನಿಲ್ಲುವುದರಿಂದ, ಎಷ್ಟು ನೀರು ಸುರಿದರೂ ಕೆಳಗೆ ಹರಿದು ಹೋಗುತ್ತದೆ. ಒಮ್ಮೆ ಒಳಭಾಗ ಒಣಗಿ ಹೋದರೆ, ಮತ್ತೆ ಮೇಲೆ ಎಷ್ಟೇ ನೀರು ಸುರಿದರೂ ಪ್ರಯೋಜನ ಆಗುವುದಿಲ್ಲ. ಹಾಗಾಗಿ ನಾವು ಕಾಲಂಗಳಿಗೆ ಹಾಕಿದ ನೀರು ಆವಿಯಾಗಿ ಹೋಗದ ಹಾಗೆ ಮಾಡಬೇಕು. ಇದಕ್ಕೆ ಸಾಂಪ್ರದಾಯಿಕ ಉಪಾಯ ಭತ್ತ ಇಲ್ಲವೆ ರಾಗಿಯ ಹುಲ್ಲನ್ನು ಹಗ್ಗಗಳಂತೆ ತಿರುಗಿಸಿ, ಕಾಲಂಗಳಿಗೆ ಸುತ್ತಿದರೆ, ಅವು ನೆರಳನ್ನು ನೀಡುವುದರ ಜೊತೆಗೆ ನೀರನ್ನು ನಿಧಾನವಾಗಿ ಉಣಿಸುವ ಕೆಲಸವನ್ನೂ ಮಾಡುತ್ತದೆ. ಕೆಲವೊಮ್ಮೆ ಕಾಲಂಗಳ ಮೇಲೆ ಬಾಟಲಿಗಳಲ್ಲಿ ನೀರನ್ನು ತುಂಬಿಟ್ಟು ಸಣ್ಣದೊಂದು ರಂಧ್ರವನ್ನು ಮಾಡುವ ಪರಿಪಾಠವೂ ಇದೆ, ಆದರೆ ಈ ವ್ಯವಸ್ಥೆಯಲ್ಲಿ ನೀರು ಎಲ್ಲ ಕಡೆ ಹರಡುವುದೆಂದು ಹೇಳಲು ಆಗುವುದಿಲ್ಲ. ಹಾಗಾಗಿ, ನಾವು ನೀರು ತಾಗದ ಸ್ಥಳದಲ್ಲಿ, ಮಾಮೂಲಿಯಂತೆ ನೀರು ಹಾಕುವುದು ಅನಿವಾರ್ಯ ಆಗುತ್ತದೆ. ಮನೆ ಕಟ್ಟುವಾಗ ನಾವು ಯಾವ ಭಾಗವನ್ನೂ ಕಡೆಗಣಿಸುವ ಹಾಗಿಲ್ಲ, ಆದರೆ ಅತಿ ಮುಖ್ಯಭಾಗಗಳ ಬಗ್ಗೆ ಒಂದಷ್ಟು ಹೆಚ್ಚುವರಿ ಕಾಳಜಿ ವಹಿಸುವುದು ಅನಿವಾರ್ಯ.
Advertisement
ತಳಪಾಯದ ಕಾಂಕ್ರೀಟ್(ಫುಟಿಂಗ್), ಗೋಡೆ, ಸೂರು ಇತ್ಯಾದಿಗಳಿಗೆ ಹೋಲಿಸಿದರೆ ಕಾಲಂಗಳಿಗೆ ಬಳಸುವ ಸಿಮೆಂಟ್ ಮೊತ್ತ ಕಡಿಮೆ ಎಂದೇ ಹೇಳಬಹುದು, ಆದರೆ ಕಂಬಗಳು ನೇರವಾಗಿ ಭಾರ ಹೊರುವುದರಿಂದ ಇವುಗಳಿಗೆ ಮಿಶ್ರಣ ಮಾಡುವಾಗ ಹೆಚ್ಚುವರಿ ಅನುಪಾತದಲ್ಲಿ ಸಿಮೆಂಟ್ ಹಾಕಬೇಕಾಗುತ್ತದೆ. ಸಾಮಾನ್ಯ ಆರ್.ಸಿ.ಸಿ.ಗೆ ಒಂದು ಪಾಲು ಸಿಮೆಂಟಿಗೆ ಎರಡು ಪಾಲು ಮರಳು ಹಾಕಿದರೆ, ಕಾಲಂ ಕಾಂಕ್ರೀಟಿಗೆ ಒಂದು ಪಾಲು ಸಿಮೆಂಟಿಗೆ ಕೇವಲ ಒಂದು ಇಲ್ಲವೆ ಒಂದೂವರೆ ಪಾಲು ಮರಳು ಅಂದರೆ 1:1 ಅಥವಾ 1:1.5ರ ಅನುಪಾತದಲ್ಲಿ ಹಾಕಲಾಗುತ್ತದೆ. ಈ ರೀತಿಯಾಗಿ ಹೆಚ್ಚುವರಿ ಸಿಮೆಂಟ್ ಹಾಕಿದರೂ ಒಟ್ಟಾರೆಯಾಗಿ ಹೆಚ್ಚುವರಿಯಾಗಿ ಹತ್ತಾರು ಬ್ಯಾಗ್ ಸಿಮೆಂಟ್ ಮಾತ್ರ ಬಳಕೆಯಾಗಿರಬಹುದು. ಇದು ಕಾಲಂಗಳ ಭಾರ ಹೊರುವ ಗುಣ ವೃದ್ಧಿಗೆ ಅಗತ್ಯವಾಗಿರುವುದರಿಂದ ನಾವು ಹಾಕುವ ಹೆಚ್ಚುವರಿ ಸಿಮೆಂಟ್ ಸದ್ಬಳಕೆಯಾಗಿದೆ ಎಂದೇ ತಿಳಿಯಬೇಕು.
ಹೆಚ್ಚಿನ ಮಾಹಿತಿಗೆ ಫೋನ್: 9844132826
– ಆರ್ಕಿಟೆಕ್ಟ್ ಕೆ. ಜಯರಾಮ್