ಹೈಸ್ಕೂಲಿನಲ್ಲಿ ಜ್ಞಾನ ಕಲಿತವರಿಗೆಲ್ಲ ಆಂಪಿಯರ್ ಎಂಬ ಹೆಸರು ಗೊತ್ತಿರುತ್ತದೆ. ಎಲೆಕ್ಟ್ರಿಕ್ ಕರೆಂಟ್ ಅನ್ನು ಆಂಪಿಯರ್‌ಗಳಲ್ಲಿ ಅಳೆಯುತ್ತಾರೆ. ಆಂಪಿಯರ್ ಎಂಬುದು ಪ್ರಸಿದ್ಧ ಭೌತಜ್ಞಾನಿಯ ಹೆಸರು ಕೂಡ. ಆಂಪಿಯರ್ ಎಂಬ ಮಾನ (ಯುನಿಟ್) ಹುಟ್ಟಿದ್ದು ಅವನಿಂದಾಗಿಯೇ.
ಬಹುತೇಕ ಎಲ್ಲ ವಿಜ್ಞಾನಿಗಳಂತೆ ಆಂಪಿಯರ್ ಕೂಡ ಅನ್ಯಮನಸ್ಕ. ಅಂದರೆ, ಅವನಿಗೆ ಲೌಕಿಕ ಜಗತ್ತಿನ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಹೆಚ್ಚು ಗಮನ ಇರಲಿಲ್ಲ. ಊಟ, ನಿದ್ದೆ, ಸ್ನಾನ, ಅಲಂಕಾರಗಳಂಥ ವಿಷಯಗಳಲ್ಲಿ ಅವನಿಗೆ ಆಸಕ್ತಿಯೇ ಇರಲಿಲ್ಲ. ಮನೆಯಲ್ಲಿ ಅವನ ಕೈಯಲ್ಲಿ ಹತ್ತು ರುಪಾಯಿ ಇಟ್ಟು ಮಾರ್ಕೆಟ್ಟಿಗೆ ಹೋಗಿ ಕೊತ್ತಂಬರಿ ಸೊಪ್ಪು ತಗೊಂಡು ಬನ್ನಿ ಎಂದರೆ ಆತ ಅದರಲ್ಲಿ ಹತ್ತು ಚಾಕೊಲೇಟ್ ಕೊಂಡು ಮೈದಾನದಲ್ಲಿ ಆಡುವ ಮಕ್ಕಳಿಗೆ ಹಂಚಿಬಿಡುತ್ತಿದ್ದ. ಇಂಥ ಪೊ›ಫೆಸರ್ ಹುಚ್ಚಾರಾಯ ವಿಜ್ಞಾನದ ವಿಷಯಕ್ಕೆ ಬಂದಾಗ ಮಾತ್ರ ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದ. ವಿದ್ಯುತ್ತಿನ ವಿಚಾರದಲ್ಲಿ ಅವನ ಸಂಶೋಧನೆಗಳು ಉನ್ನತ ಮಟ್ಟದವು.
ಅದೊಂದು ದಿನ ಪ್ಯಾರಿಸ್ ಅಕಾಡೆಮಿಗೆ ನೆಪೋಲಿಯನ್ ಬಂದ. ನೆಪೋಲಿಯನ್‌ಗೆ ವಿಜ್ಞಾನಿಗಳು, ಗಣಿತಜ್ಞರು ಎಂದರೆ ವಿಚಿತ್ರ ಆಸಕ್ತಿ. ಪಂಡಿತರನ್ನು ಮಾತಾಡಿಸುವುದು, ಅವರ ಜೊತೆ ಚರ್ಚೆ ನಡೆಸುವುದು ಅವನ ಖಯಾಲಿಗಳಲ್ಲೊಂದು. ಪ್ಯಾರಿಸ್ ಅಕಾಡೆಮಿಯಲ್ಲಿ ಉಳಿದೆಲ್ಲ ಪಂಡಿತರನ್ನು ಮಾತಾಡಿಸಿ ನೆಪೋಲಿಯನ್ ಆಂಪಿಯರ್‌ನ ಕೊಠಡಿಗೆ ಬಂದ. ಬಂದು ನಿಂತಾಗ ಆಂಪಿಯರ್‌ಗೆ ಆತನ ಗುರುತೇ ಹತ್ತಲಿಲ್ಲ. ನಾನು ನೆಪೋಲಿಯನ್ ಎಂದು ಪರಿಚುಸಿಕೊಂಡಾಗ ಓಹ್! ಓಹ್! ನೀವಾ! ಬನ್ನಿ ಬನ್ನಿ ಎಂದು ಗೌರವಾದರಗಳಿಂದ ಸ್ವಾಗತಿಸಿದ ಆಂಪಿಯರ್. ನಮ್ಮ ದೇಶದ ಪ್ರಸಿದ್ಧ ಪಂಡಿತರಿಗೆ ದೇಶದ ರಾಜನ ಪರಿಚಯವೇ ಇಲ್ಲವಲ್ಲ! ಆಂಪಿಯರ್ ಅವರೇ, ನಾಳೆ ಅರಮನೆಗೆ ಮಧ್ಯಾಹ್ನದ ಭೊಜನಕ್ಕೆ ಬನ್ನಿ. ಇದು ನನ್ನ ವಿಶೇಷ ಆಮಂತ್ರಣ. ನಾವಿಬ್ಬರು ಸ್ವಲ್ಪ ಹೆಚ್ಚು ಹೊತ್ತು ಜೊತೆಯಾಗಿ ಕಳೆದರೆ ನನ್ನ ಮುಖಪರಿಚಯ ನಿಮಗೆ ಮನಸ್ಸಿನಲ್ಲಿ ಉಳಿಯಬಹುದು ಎಂದ ನೆಪೋಲಿಯನ್. ರಾಜನ ಜೊತೆ ಭೋಜನಕ್ಕೆ ಆಮಂತ್ರಣ ಎಂದರೆ ಸಾಮಾನ್ಯವೇ! ಓಹ್! ಖಂಡಿತ! ಖಂಡಿತ! ಎಂದ ಆಂಪಿಯರ್.
ಮರುದಿನ ಏನಾಯ್ತು ಗೊತ್ತಲ್ಲ? ಸಂಜೆಯವರೆಗೂ ಪ್ರಯೋಗಶಾಲೆಯಲ್ಲೇ ಇದ್ದ ಆಂಪಿಯರ್‌ಗೆ ಭೋಜನದ ನೆನಪಾದದ್ದು ಯಾರೋ ಬಂದು ಅರಮನೆ ಊಟ ಹೇಗಿತ್ತು? ಎಂದು ಕೇಳಿದಾಗಲೇ!
-ರೋಹಿತ್ ಚಕ್ರತೀರ್ಥ