Advertisement

ಅವಿದ್ಯಾವಂತ ಮಹಿಳೆಯರಿಂದಲೇ ಬ್ಯಾಂಕ್‌ ಆರಂಭಿಸಿದ ಚೇತನಾ

12:04 AM Feb 20, 2022 | Team Udayavani |

ನಾನು ಹುಟ್ಟಿ ಬೆಳೆದಿದ್ದು ಮುಂಬಯಿಯಲ್ಲಿ. ಕಾಲೇಜಿನಲ್ಲಿ ದ್ದಾಗ ಪ್ರಸಿದ್ಧ ಸಮಾಜ ಸೇವಕರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಸಾಕಷ್ಟು ಆಸಕ್ತಿ ಇದ್ದ ನನಗೆ ಅವರನ್ನು ಭೇಟಿಯಾಗಿದ್ದೇ ದೊಡ್ಡ ಸಾರ್ಥಕತೆಯಾಗಿತ್ತು. ಅನಂತರ ನಾನೂ ಅವರ ಜತೆಯಲ್ಲಿ ಕೆಲಸ ಮಾಡಲು ಆರಂಭಿಸಿದೆ. ಹಳ್ಳಿಗಳಿಗೆ ಹೋಗಿ ಅವರ ಜತೆ ಸಮಾಜಸೇವೆಗೆ ನಿಂತೆ.

Advertisement

ಯೌವನದಲ್ಲಿದ್ದ ನನಗೆ ಮಹಾರಾಷ್ಟ್ರದ ಹವೇಲಿಯ ಧಯಾರಿ ಗ್ರಾಮದ ಯುವ ಕೃಷಿಕನ ಜತೆ ಪ್ರೀತಿ ಹುಟ್ಟಿತು. ಅವನನ್ನೇ ಮದುವೆಯಾಗಿ, ಅದೇ ಹಳ್ಳಿಯಲ್ಲಿ ವಾಸ ಆರಂಭಿಸಿದೆ. ಆ ಕ್ಷಣಕ್ಕೆ ನನ್ನ ಪೂರ್ತಿ ಕುಟುಂಬ ಮತ್ತೆ ಸ್ನೇಹಿತರು ನನ್ನನ್ನು ಹುಚ್ಚಿ ಎಂದುಕೊಂಡಿ ದ್ದಂತೂ ಸುಳ್ಳಲ್ಲ.

ಮದುವೆಯಾಗಿ ಮೂರು ಮಕ್ಕಳಾಗಿತ್ತು. ಊರಲ್ಲಿ ಓದು, ಬರಹ ಗೊತ್ತಿದ್ದವಳು ನಾನೊಬ್ಬಳೇ ಆಗಿದ್ದರಿಂದ ಅದೊಂದು ದಿನ ನಮ್ಮದೇ ಊರಿನ ಕಾಂತಾಭಾಯಿ ನನ್ನ ಹತ್ತಿರ ಬಂದರು. “ನನಗೆ ಬ್ಯಾಂಕ್‌ ಅಲ್ಲಿ ಅಕೌಂಟ್‌ ತೆರೆಯಬೇಕು. ನನಗೆ ಸಹಾಯ ಮಾಡಿ’ ಎಂದು ಕೇಳಿದರು. ಆಗ ನನಗೆ ಆಶ್ಚರ್ಯವೋ ಆಶ್ಚರ್ಯ. ಇರೋದಕ್ಕೆ ನೆಟ್ಟಗಿನ ಮನೆ ಇಲ್ಲ, ಊಟಕ್ಕೂ ಒದ್ದಾಡುವ ಕಡು ಬಡತನವಿದೆ. ಹಾಗಿದ್ದರೂ ಇವರಿಗೆ ಬ್ಯಾಂಕ್‌ ಅಕೌಂಟ್‌ನ ಆವಶ್ಯಕತೆ ಏನು ಎನ್ನುವ ಕುತೂಹಲ ಹುಟ್ಟಿತು. ಕುತೂಹಲ ತಾಳಲಾರದೆ ನೇರವಾಗಿ ಅವರನ್ನೇ ಪ್ರಶ್ನಿಸಿಬಿಟ್ಟೆ. ಆಗ ಅವರು “ಇಲ್ಲ, ನನಗೆ ಬ್ಯಾಂಕ್‌ ಅಕೌಂಟ್‌ ಬೇಕೇ ಬೇಕು.

ದಿನಕ್ಕೆ 10 ರೂಪಾಯಿ ಆದರೂ ಉಳಿಸಬೇಕು. ಅದನ್ನು ಬ್ಯಾಂಕ್‌ನಲ್ಲಿಡಬೇಕು. ಇನ್ನೇನು ಮಳೆಗಾಲ ಆರಂಭವಾಗು ತ್ತದೆ ಎನ್ನುವಾಗ ಆ ಹಣ ತೆಗೆದು, ಅದರಿಂದ ಪ್ಲಾಸ್ಟಿಕ್‌ ಕವರ್‌ ತಂದು ಮನೆಗೆ ಹೊದಿಸಬೇಕು. ನನ್ನ ಮನೆಯನ್ನ ಮಳೆಯಿಂದ ಕಾಪಾಡಿ ಕೊಳ್ಳಬೇಕು’ ಎಂದರು. ಅವರ ಆ ಆಸೆಯನ್ನು ಕೇಳಿ ತಡಮಾಡದೆ ಬ್ಯಾಂಕ್‌ನತ್ತ ತೆರಳಿದೆವು. ಆದರೆ ಬ್ಯಾಂಕ್‌ ನಮ್ಮ ಆಸೆಗೆ ಕಿಂಚಿತ್ತೂ ಬೆಲೆ ಕೊಡಲೇ ಇಲ್ಲ. 10 ರೂಪಾಯಿಗೆಲ್ಲ ಬ್ಯಾಂಕ್‌ ಅಕೌಂಟ್‌ ತೆರೆಯಲು ಸಾಧ್ಯವಿಲ್ಲ ಎಂದು ಮುಖದ ಮೇಲೆ ಹೊಡೆದಂತೆ ಹೇಳಿ ವಾಪಸು ಕಳುಹಿಸಿದರು.

ಆದರೆ ನಮ್ಮ ಛಲ ಸುಮ್ಮನಾಗಿರಲಿಲ್ಲ. ನಾವೇ ಏಕೆ ಬ್ಯಾಂಕ್‌ ತೆರೆ ಯಬಾರದು ಎಂದು ಯೋಚಿಸಿ ಒಂದು ಹೆಜ್ಜೆ ಮುಂದೆ ಇಡಲು ಸಿದ್ಧರಾದೆವು. ಅದಕ್ಕೆಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿದೆವು. ಆದರೆ ಅವಿದ್ಯಾವಂತ ಮಹಿಳೆಯರನ್ನೇ ಇಟ್ಟು ಕೊಂಡು ಬ್ಯಾಂಕ್‌ ಮಾಡುತ್ತೇನೆ ಎಂದಿದ್ದ ನನ್ನ ಅರ್ಜಿಯನ್ನು ಆರ್‌ಬಿಐ ಒಪ್ಪಲಿಲ್ಲ. ನನ್ನ ಅರ್ಜಿ ತಿರಸ್ಕೃತಗೊಂಡಿತು. ಆ ತಿರಸ್ಕಾರ ದಿಂದಾಗಿ ನಾನು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ. ನನ್ನನ್ನು ಕಂಡ ನಮ್ಮೂರ ಹೆಂಗಳೆಯರು ನನಗೇ ಧೈರ್ಯ ತುಂಬಿದರು. “ಈಗ ಅರ್ಜಿ ತಿರಸ್ಕಾರ ಆದರೇನಾಯಿತು? ನಾವು ಓದೋದು, ಬರಿಯೋದು ಕಲಿಯುತ್ತೇವೆ. ಆಮೇಲೆ ಮತ್ತೆ ಅರ್ಜಿ ಸಲ್ಲಿಸೋಣ’ ಅಂದರು.

Advertisement

ಅವರ ಆ ಧೈರ್ಯವನ್ನೇ ನಂಬಿಕೊಂಡು ನಾನೂ ಅವರಿಗೆ ಓದುವುದು, ಬರೆಯುವುದನ್ನು ಹೇಳಿಕೊಡಲಾ ರಂಭಿಸಿದೆ. ಬೆಳಗ್ಗೆಯೆಲ್ಲ ಬದುಕಿಗಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸಂಜೆ ಹೊತ್ತು ಬ್ಯಾಂಕ್‌ಗಾಗಿ ನನ್ನ ಹತ್ತಿರ ಬಂದು ಓದುವುದಕ್ಕೆ, ಬರೆಯುವುದಕ್ಕೆ ಕುಳಿತುಕೊಳ್ಳು ತ್ತಿದ್ದರು. ಐದು ತಿಂಗಳ ನಿರಂತರ ಅಭ್ಯಾಸದ ಅನಂತರ ಮತ್ತೆ ನಾವು ಆರ್‌ಬಿಐಗೆ ಅರ್ಜಿ ಸಲ್ಲಿಸಿದೆವು.

ಆದರೆ ಈ ಬಾರಿ ನಾನೊಬ್ಬಳೇ ಆರ್‌ಬಿಐಗೆ ಹೋಗಿರಲಿಲ್ಲ. ನನ್ನ ಜತೆ ನಮ್ಮೂರಿನ 15 ಹೆಂಗಳೆಯರು ಬಂದಿದ್ದರು. ಆರ್‌ಬಿಐನಲ್ಲಿ ನಾನೇನು ಮಾತನಾಡಿಲ್ಲ ವಾದರೂ ಅವರು ಮಾತಾಡಿದರು. “ನೀವು ನಾವು ಅವಿದ್ಯಾವಂತರು ಎನ್ನೋ ಒಂದೇ ಕಾರಣಕ್ಕೆ ಬ್ಯಾಂಕ್‌ಗೆ ಪರವಾನಿಗೆ ಕೊಡಲಿಲ್ಲ. ಆದರೆ ನಾವೇನು ಮಾಡುವುದು, ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ ಶಾಲೆಯೇ ಇರಲಿಲ್ಲ’ ಎಂದರು.

ಅಷ್ಟಕ್ಕೇ ನಿಲ್ಲಿಸದೆ ಬ್ಯಾಂಕ್‌ ಅಧಿಕಾರಿಗಳಿಗೇ ಒಂದು ಚಾಲೆಂಜ್‌ ಹಾಕಿದರು. “ನಮಗೆ ಓದುವುದಕ್ಕೆ, ಬರೆಯುವುದಕ್ಕೆ ಬರದೇ ಇರಬಹುದು. ಆದರೆ ಲೆಕ್ಕ ಮಾಡುವುದಕ್ಕೆ ಬರುತ್ತದೆ. ನೀವು ಯಾವುದೇ ಮೊತ್ತದ ಬಡ್ಡಿ ಲೆಕ್ಕ ಹಾಕಿಕೊಡುವುದಕ್ಕೆ ಹೇಳಿ. ಒಂದು ವೇಳೆ ಲೆಕ್ಕ ಹಾಕುವಲ್ಲಿ ನಾವು ಸೋತರೆ ನಮಗೆ ಪರವಾನಗಿ ಕೊಡಬೇಡಿ. ನಿಮ್ಮ ಸಿಬಂದಿಗೆ ಕ್ಯಾಲ್ಕುಲೇಟರ್‌ ಇಲ್ಲದೇ ಲೆಕ್ಕ ಮಾಡುವುದಕ್ಕೆ ಹೇಳಿ. ಯಾರು ಮೊದಲು ಲೆಕ್ಕ ಹಾಕುತ್ತಾರೆ ನೋಡೋಣ’ ಎಂದರು. ಸಂಶಯವಿಲ್ಲದೆ ನಮ್ಮ ಮಹಿಳೆ ಯರು ಗೆದ್ದು, ಪರವಾನಿಗೆ ಪಡೆದುಕೊಂಡರು.
ಅಂದು ಆ ರೀತಿ ಹೋರಾಟದೊಂದಿಗೆ ಆರಂಭವಾದ ನಮ್ಮ “ಮನ್‌ ದೇಶಿ ಬ್ಯಾಂಕ್‌’ಗೆ ಇಂದು ಲಕ್ಷಕ್ಕೂ ಅಧಿಕ ಮಹಿಳಾ ಗ್ರಾಹಕರಿದ್ದಾರೆ. ನಮ್ಮ ಬ್ಯಾಂಕ್‌ನಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಹಣವಿದೆ. ಅದು ಯಾವುದೇ ಹೂಡಿಕೆದಾರನ ಹಣವಲ್ಲ, ಬದಲಾಗಿ ನಮ್ಮ ಹಳ್ಳಿಗಳ ಹೆಣ್ಣು ಮಕ್ಕಳು ದುಡಿದ ಹಣ. ಅಂದು 10 ರೂಪಾಯಿ ಉಳಿಸುವು ದಕ್ಕೆ ಹೋರಾಡಿದ್ದ ಕಾಂತಾಬಾಯಿ ಇಂದು ಸ್ವಂತದ್ದೊಂದು ಗಟ್ಟಿ ಸೂರು ಕಟ್ಟಿಕೊಂಡು ನೆಮ್ಮದಿಯಾಗಿ ಬದುಕುತ್ತಿದ್ದಾಳೆ.

ಅಂದ ಹಾಗೆ, ಬ್ಯಾಂಕ್‌ಗೆ ಪರವಾನಿಗೆ ಪಡೆದ ತತ್‌ಕ್ಷಣ ನಮ್ಮ ಕೆಲಸ ಆಗಿರಲಿಲ್ಲ. ನಮಗಿದ್ದ ಗ್ರಾಹಕರು ದಿನಗೂಲಿ ಕೆಲಸಗಾರರು. ಅವರು ಅವರ ನಿತ್ಯದ ಕೂಲಿ ಕೆಲಸ ಬಿಟ್ಟು ನಮ್ಮ ಬ್ಯಾಂಕ್‌ಗೆ ಬರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರು ಬ್ಯಾಂಕ್‌ಗೆ ಬರುವುದಕ್ಕೆ ಸಾಧ್ಯವಿಲ್ಲವೆಂದರೆ ಬ್ಯಾಂಕೇ ಮಹಿಳೆಯರ ಹತ್ತಿರ ಹೋಗಬೇಕೆಂದು “ಡೋರ್‌ ಬ್ಯಾಂಕಿಂಗ್‌’ ಆರಂಭಿಸಿದೆವು.

ಇತ್ತೀಚೆಗೆ ಹೆಚ್ಚು ಪ್ರಸಿದ್ಧವಾದ ಡಿಜಿಟಲ್‌ ಬ್ಯಾಂಕಿಂಗ್‌ ಅನ್ನೂ ಆರಂಭಿಸಿದೆವು. ಆದರೆ ಡಿಜಿಟಲ್‌ ಬ್ಯಾಂಕಿಂಗ್‌ಗೆ ಪಿನ್‌ ಬೇಕು. ಪ್ರತಿಯೊಬ್ಬರೂ ಅವರ ಖಾತೆಯ ಪಿನ್‌ ನೆನಪಿಟ್ಟುಕೊಳ್ಳಬೇಕು. ಆದರೆ ಅದು ನಮ್ಮ ಮಹಿಳೆಯ ರಿಗೆ ಇಷ್ಟವಿರಲಿಲ್ಲ. ಪಿನ್‌ ನೆನಪಿಟ್ಟುಕೊಳ್ಳುವುದು ಕಷ್ಟ ಎನ್ನುವುದು ಅವರ ವಾದವಾಗಿತ್ತು. ನೆನಪಿಟ್ಟುಕೊಳ್ಳಲು ನಾವು ಸಹಾಯ ಮಾಡುತ್ತೇವೆಂದರೂ ಅದನ್ನು ಒಪ್ಪಲು ಅವರು ಬಿಲ್‌ಕುಲ್‌ ಸಿದ್ಧರಿರಲಿಲ್ಲ. ಬೇರೇನಾದರೂ ದಾರಿ ಇದ್ದರೆ ಹೇಳಿ ಎಂದರು. ಆಮೇಲೆ ಅವರೇ, “ಥಂಬ್‌ ಬಳಸಿದರೆ ಹೇಗೆ?’ ಎಂದು ಪ್ರಶ್ನಿಸಿದರು.

“ಪಿನ್‌ ಅನ್ನು ಯಾರು ಬೇಕಾದರೂ ಕದಿಯಬಹುದು. ನಮ್ಮ ಬೆರಳನ್ನ ಯಾರು ಕದಿಯುವುದಕ್ಕೆ ಸಾಧ್ಯ?’ ಎಂಬ ಅವರ ಮಾತು ನಿಜಕ್ಕೂ ಒಳ್ಳೆಯ ಐಡಿಯಾ ಆಗಿತ್ತು. ಅವರ ಮಾತನ್ನು ಕೇಳಿ ನಾವು ಥಂಬ್‌(ಬೆರಳಚ್ಚು) ಸಿಸ್ಟಂ ಅನ್ನು ಅಳವಡಿಸಿಕೊಂಡೆವು. ಆ ಮಹಿಳೆಯರಿಂದ ನಾನು ಕಲಿತಿ ದ್ದೇನೆಂದರೆ, “ಶ್ರೀಮಂತರಲ್ಲದವರಿಗೆ ಶ್ರೀಮಂತವಲ್ಲದ ಉಪಾಯಗಳನ್ನು/ಪರಿಹಾರವನ್ನು ಯಾವತ್ತೂ ಕೊಡಬಾ ರದು’ ಎನ್ನುವುದು. ನಿಜ ಜೀವನದಲ್ಲಿ ಬದುಕುವ ಅವರು ನಮ್ಮೆಲ್ಲರಿಗಿಂತ ನಿಜಕ್ಕೂ ಸ್ಮಾರ್ಟ್‌.

ಹೀಗೆ ಹಳ್ಳಿಯಲ್ಲೇ ಜೀವನ ನಡೆಸಿದ ನನಗೆ ನಮ್ಮ ಪಕ್ಕದಲ್ಲಿರುವ ಪ್ರತಿಯೊಬ್ಬರೂ ಜೀವನವನ್ನು ಹೇಳಿ ಕೊಡುತ್ತಲೇ ಹೋದರು. ಒಮ್ಮೆ ಒಂದು 10-11 ವರ್ಷದ ಬಾಲಕಿ ನನ್ನ ಬಳಿ ಕೆಲಸ ಕೇಳಿಕೊಂಡು ಬಂದಳು. ನನಗೆ ಬೇಸಗೆ ರಜೆಯಲ್ಲಿ ಏನಾದರೂ ಕೆಲಸ ಕೊಡಿ ಅಂದಳು. ಅವಳ ಆ ಕೆಲಸದ ಉತ್ಸಾಹಕ್ಕೆ ಹಿಂದಿನ ಕಾರಣ ಒಂದು ಸೈಕಲ್‌ ಆಗಿತ್ತು. ಅವಳಿಗೆ ಸೈಕಲ್‌ ಬೇಕಿತ್ತು. ಕೇವಲ ಪ್ರಾಥಮಿಕ ಶಾಲೆ ಮಾತ್ರವೇ ಇದ್ದ ಊರಲ್ಲಿ ಹುಟ್ಟಿ ಬೆಳೆದಿದ್ದ ಆ ಬಾಲಕಿಗೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಪ್ರತಿದಿನ ಓಡಾಡಬೇಕಿತ್ತು. ಅದಕ್ಕಾಗಿ ಅವಳಿ ಗೊಂದು ಸೈಕಲ್‌ ಬೇಕಿತ್ತು. ಅವಳು ಯಾವತ್ತೂ ನನ್ನ ಬಳಿ “ನಮ್ಮೂರಲ್ಲಿ ಶಾಲೆ ಇಲ್ಲ’ ಎಂದು ದೂರು ಹೇಳಲೇ ಇಲ್ಲ. ಆದರೆ ಆ ಸಮಸ್ಯೆಗೆ ತಾನಾಗೇ ಪರಿಹಾರ ಕಂಡುಕೊಳ್ಳುವುದಕ್ಕೆ ಮಾತ್ರ ಕಷ್ಟ ಪಡುತ್ತಿದ್ದಳು.

10 ವರ್ಷದ ಬಾಲಕಿಯಿಂದಲೂ ನಾನು ಕಲಿತೆ. ಆ ಕಲಿಕೆಯನ್ನು ಪ್ರತೀ ಹಂತದಲ್ಲೂ ಬಳಸುತ್ತ ಹೋದೆ. ಅದೇ ಇಂದು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಂದು ದೇಶದಲ್ಲಿ ಮೊದಲ ಮಹಿಳಾ ಬ್ಯಾಂಕ್‌, ಮೊದಲ ಮಹಿಳಾ ಬಿಸಿನೆಸ್‌ ಸ್ಕೂಲ್‌, ಮೊದಲ ಮಹಿಳಾ ರೇಡಿಯೋ ಬ್ರಾಡ್‌ಕಾಸ್ಟ್‌ ಆರಂಭಿಸಿದ ಮಹಿಳೆಯಾಗಿ ನಾನಿದ್ದೇನೆ. ಈ ಎಲ್ಲ ಮೊದಲಿಗೂ ಆ ಊರಿನ ಮಹಿಳೆಯರೇ ಜೀವ ತುಂಬಿದ್ದಾರೆ.

-ಚೇತನಾ ಗಲಾ, ಸಮಾಜ ಸೇವಕಿ,
ಮನ್‌ ದೇಶಿ ಬ್ಯಾಂಕ್‌ ಸ್ಥಾಪಕಿ

Advertisement

Udayavani is now on Telegram. Click here to join our channel and stay updated with the latest news.

Next