ಆ ತೋಟದಲ್ಲೊಂದು ಬಾಳೆಯ ಗಿಡ. ನಿತ್ಯ ಒಬ್ಬಳು ಪುಟಾಣಿ ಹುಡುಗಿ ಬಂದು ಆ ಗಿಡದ ಬುಡಕ್ಕೆ ನೀರು ಹಾಕುತ್ತಿದ್ದಳು. ಒಮ್ಮೆ ಹೀಗೆ ನೀರು ಹಾಕಿ ವಾಪಸಾಗುವಾಗ, “ನನ್ನೊಂದಿಗೆ ನೀನು ಆಡಲು ಬರುತ್ತೀಯಾ?’ ಎಂಬ ಧ್ವನಿ ಆ ಬಾಳೆಗಿಡದಿಂದ ಬಂತು. ಪುಟಾಣಿ ಹುಡುಗಿ ದಿಗಿಲುಗೊಂಡು, ಅಲ್ಲಿಂದ ಓಡಿ ಅಮ್ಮನ ಮಡಿಲು ಸೇರಿದ್ದಳು.
“ಅಮ್ಮಾ, ಅಮ್ಮಾ… ಆ ಬಾಳೆ ಗಿಡ ಮಾತಾಡುತ್ತೆ. ನನ್ನನ್ನು ಆಡಲು ಕರೆಯಿತು’ ಎಂದು ಹೇಳಿದಳು. ನೀನು ಹೆದರಬೇಡ. “ಬಾಳೆ ಗಿಡದಲ್ಲಿ ದೇವತೆ ಲಕ್ಷ್ಮಿ ನೆಲೆಸಿರುತ್ತಾಳೆ. ಅವಳೇ ಮಾತಾಡಿರಬಹುದು’ ಎಂದು ಅಮ್ಮ ತಮಾಷೆ ಮಾಡುತ್ತಾ, ಮಗಳನ್ನು ಸಂತೈಸಿದಳು. ಮರುದಿನ ಮತ್ತೆ ಬಾಳೆ ಗಿಡಕ್ಕೆ ನೀರು ಹಾಕಲು ಹೋದಾಗ, “ನಾನು ಲಕ್ಷ್ಮಿ. ಈ ಬಾಳೆ ಗಿಡದಲ್ಲಿ ನೆಲೆಸುತ್ತೇನೆ. ನನಗೆ ನಿತ್ಯ ನೀರುಣಿಸುವ ನಿನಗೆ ಋಣ ಸಂದಾಯ ಮಾಡಲೇಬೇಕು. ನನ್ನ ಮನೆಗೆ ನೀನು ಊಟಕ್ಕೆ ಬರುತ್ತೀಯಾ?’ ಎಂದು ಕೇಳಿದಳು ಲಕ್ಷ್ಮಿ. ಪುಟಾಣಿ ಹುಡುಗಿ “ಹೂ’ ಎಂದು ತಲೆ ಅಲುಗಾಡಿಸಿ, ಲಕ್ಷ್ಮಿಯನ್ನು ಹಿಂಬಾಲಿಸಿ ಹೊರಟಳು.
ಸುಂದರ ಉದ್ಯಾನದಂಥ ಪ್ರದೇಶ. ಅಲ್ಲೊಂದು ಭವ್ಯ ಮನೆ. ಲಕ್ಷ್ಮಿ ಆ ಮನೆಯಲ್ಲಿ ಹುಡುಗಿಗೆ ಊಟ ಬಡಿಸಿದಳು. ಆಕೆ ಭಕ್ಷ್ಯ ಭೋಜನಗಳನ್ನು ಚಿನ್ನ, ಬೆಳ್ಳಿ ಪಾತ್ರೆಯಿಂದ ತಯಾರಿಸಿದ್ದಳು. ಹೊಟ್ಟೆ ಭರ್ತಿ ತಿಂದು ಹುಡುಗಿ ಮನೆಗೆ ಪಾಪಸು ಹೋಗಿ, ಅಮ್ಮನಿಗೆ ಎಲ್ಲ ಸಂಗತಿಯನ್ನು ಹೇಳಿದಳು.
ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಡುಗಿ ಹೇಳಿದಳು, “ಅಮ್ಮಾ… ನಮ್ಮ ಮನೆಗೂ ಲಕ್ಷ್ಮಿ ದೇವರನ್ನು ಊಟಕ್ಕೆ ಕರೆಯೋಣ ಅಮ್ಮಾ’ ಎನ್ನುತ್ತಾ ಹಠ ಮಾಡಿದಳು. “ಬೇಡಮ್ಮಾ, ನಾವು ತುಂಬಾ ಬಡವರು. ನಾವು ವಾಸವಿರುವುದು ಗುಡಿಸಲಿನಲ್ಲಿ. ಪಾತ್ರೆಗಳೆಲ್ಲ ಜಖಂ ಆಗಿವೆ. ನಮ್ಮ ಬಟ್ಟೆಗಳೆಲ್ಲ ಬಹಳ ಹಳೆಯವು ಮತ್ತು ಕೊಳಕಾಗಿವೆ. ಹೀಗೆಲ್ಲ ಇರೋವಾಗ ನಾವು ಹೇಗೆ ಆಕೆಯನ್ನು ಮನೆಗೆ ಆಹ್ವಾನಿಸುವುದು?’ ಎಂಬುದು ಅಮ್ಮನ ಪ್ರಶ್ನೆ. “ಅಮ್ಮ, ಚಿಂತೆ ಬೇಡ. ನಮ್ಮ ಪ್ರೀತಿ, ಆತಿಥ್ಯ ಕಂಡು ಆಕೆ ಸಂತೋಷ ಪಡುತ್ತಾಳೆ. ಅವಳಿಗೆ ನಮ್ಮ ಬಡತನ ಮುಖ್ಯ ವಿಚಾರ ಆಗುವುದೇ ಇಲ್ಲ’ ಎನ್ನುತ್ತಾ ಪುಟಾಣಿ ಅಮ್ಮನನ್ನು ಒಪ್ಪಿಸಿದಳು.
ಲಕ್ಷ್ಮಿ ಮರುದಿನ ಆ ಗುಡಿಸಲಿಗೆ ಬಂದಾಗ ಅದು ಭವ್ಯ ಬಂಗಲೆ ಆಗಿ ಪರಿವರ್ತನೆ ಆಗಿತ್ತು. ಜಖಂ ಆದ ಕಂಚು- ಹಿತ್ತಾಳೆಯ ಪಾತ್ರೆಗಳೆಲ್ಲ, ಬೆಳ್ಳಿ- ಚಿನ್ನದ ಪಾತ್ರೆಗಳಾಗಿ ಪಳಪಳನೆ ನಗುತ್ತಿದ್ದವು. ತಾಯಿ- ಮಗಳು ಧರಿಸಿದ್ದ ಬಟ್ಟೆ ಹೊಸದಾಗಿತ್ತು! ಲಕ್ಷ್ಮಿ ಹೊಟ್ಟೆ ಭರ್ತಿ ಊಟ ಸೇವಿಸಿ, ಸಂತೃಪೆಯಾದಳು. ದೇವತೆ ಲಕ್ಷ್ಮಿಗೆ ಪುಟಾಣಿಯ ತಾಯಿ, “ನೀವು ಸದಾ ನಮ್ಮ ಮನೆಯಲ್ಲಿಯೇ ನೆಲೆಸಿರಿ’ ಎಂದು ವಿನಮ್ರವಾಗಿ ಕೇಳಿಕೊಂಡಳು.
“ನೀವು ಇದೇ ರೀತಿ ಶ್ರಮ ಹಾಕಿ ದುಡಿಯಿರಿ. ನಿತ್ಯ ಬಾಳೆ ಗಿಡಕ್ಕೆ ನೀರು ಹುಯ್ಯಿರಿ. ನಾನು ಖಂಡಿತಾ ನಿಮ್ಮೊಂದಿಗೆ ನೆಲೆಸುವೆ’ ಎಂದು ಹೇಳಿ ಮಾಯವಾಗಿ, ಬಾಳೆಗಿಡವನ್ನು ಸೇರಿದಳು. ಆ ಪುಟಾಣಿ ನಿತ್ಯವೂ ಬಾಳೆ ಗಿಡಕ್ಕೆ ನೀರೆರೆಯ ತೊಡಗಿದಳು. ಅದು ಫಲವಾಗಿ, ಹಣವಾಗಿ ಬಂದು ಅವರ ಮನೆ ಸೇರುತ್ತಿತ್ತು. ಲಕ್ಷ್ಮಿ ಕೊಟ್ಟ ಮಾತಿನಂತೆ ಅವರ ಮನೆಯಲ್ಲಿಯೇ ನೆಲೆಸಿದಳು!
ಸೌರಭ