ಹುಣಸೂರು: 2015 ಡಿಸೆಂಬರ್‌ನಲ್ಲಿ ನಡೆದಿದ್ದ ಹನುಮ ಜಯಂತಿ ಬಳಿಕ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಿಷೇಧಿಸಿರುವ ಮೆರವಣಿಗೆ ತೆರವುಗೊಳಿಸುವ ಸಂಬಂಧ ನ.10 ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪûಾತೀತ ಸಭೆ ಆಯೋಜಿಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧಾರ್ಮಿಕ ಸಂಬಂಧಿತ ಹಾಗೂ ರಾಷ್ಟ್ರೀಯ ಹಬ್ಬಗಳ ಮೆರವಣಿಗೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಕಾರ್ಯಕ್ರಮಗಳ ಜಾಥಾಕ್ಕೆ ಅಹಿತಕರ ಘಟನೆನಗಳು ನಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೂರು ವರ್ಷಗಳಿಂದ ಬಜಾರ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ ಹಾಗೂ ಜೆ.ಎಲ್.ಬಿ.ರಸ್ತೆಗಳಲ್ಲಿ ಮೆರವಣಿಗೆ ನಿಷೇಧ ಹೇರಿದೆ.
ಅದನ್ನು ತೆರವುಗೊಳಿಸಬೇಕೆಂಬುದು ನಗರ ನಾಗರಿಕರ ಬೇಡಿಕೆಯಾಗಿದೆ. ತಾವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಹಾಗೂ ವಿವಿಧ ಸಮುದಾಯಗಳ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಶನಿವಾರ ಮಧ್ಯಾಹ್ನ 3ಕ್ಕೆ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಯಲಿದೆ.
ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಎಲ್ಲ ಧರ್ಮಗಳ ಧರ್ಮಾಧಿಕಾರಿಗಳು, ಮಾಜಿ ಶಾಸಕರು, ಸಂಸದರು, ಸಂಘ ಸಂಸ್ಥೆಗಳ ಹಾಗೂ ಎಲ್ಲ ಜನಾಂಗಗಳ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗುವುದು ಎಂದು ಹೇಳಿದರು.
ಸಮಾಜಘಾತುಕರ ನಿಗ್ರಹಕ್ಕೆ ಸೂಚನೆ: ಈಗಾಗಲೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ನಗರ ಹಾಗೂ ತಾಲೂಕಿನಲ್ಲಿ ಶಾಂತಿಗೆ ಭಂಗ ತರುವಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಕಟ್ಟಪ್ಪಣೆ ಮಾಡಿದ್ದೇನೆ ಎಂದರು.