ಬೆಂಗಳೂರು: ನಗರದಲ್ಲಿ ಫೆ. 14ರಿಂದ 18ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2017’ಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಯಲಹಂಕ ಸುತ್ತಮುತ್ತ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಬಿಬಿಎಂಪಿ ಯಲಹಂಕ ವ್ಯಾಪ್ತಿಯಲ್ಲಿ ಬರುವ ಮಾಂಸದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಮಾಂಸಾಹಾರಿ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ತಯಾರಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಯಲಹಂಕ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಸೋಮವಾರದಿಂದಲೇ ಮಾಂಸ ಮಾರಾಟ ಅಂಗಡಿಗಳು ಮತ್ತು ಮಾಂಸಾಹಾರಿ ಹೋಟೆಲ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಕಳೆದೆರಡು ದಿನಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಸೇರಿದಂತೆ 260 ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಲಾಗಿದೆ. ನೂರಾರು ಹೋಟೆಲ್‌ಗಳಲ್ಲಿ ಮಾಂಸಾಹಾರದ ಬದಲಿಗೆ ಸಸ್ಯಾಹಾರ ಪೂರೈಕೆ ಮಾಡುವಂತೆಯೂ ಆದೇಶಿಸಲಾಗಿದೆ ಎಂದು ಬಿಬಿಎಂಪಿ ಯಲಹಂಕ ವಲಯದ ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ರಮೇಶ್ ತಿಳಿಸಿದ್ದಾರೆ.
ತ್ಯಾಜ್ಯ ರಾಶಿಯ ಮೇಲೆ ಹೊದಿಕೆ: ಅದೇ ರೀತಿ, ಇದೇ ವ್ಯಾಪ್ತಿಯಲ್ಲಿ ಬರುವ ಮಾವಳ್ಳಿಪುರ ತ್ಯಾಜ್ಯ ಸಂಸ್ಕರಣಾ ಘಟಕಕ್ಕೂ ಹೊದಿಕೆ ಹಾಕಿ, ಹಕ್ಕಿಗಳು ಬರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಸ ಸಂಗ್ರಹ ಕೂಡ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಸುರಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದ್ದು, ಈ ಸಂಬಂಧ ಕರಪತ್ರ ಹಂಚಿಕೆ ಮತ್ತು ಧ್ವನಿವರ್ಧಕದಲ್ಲಿ ಮನವಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ನಾಗರಾಜ್ ತಿಳಿಸಿದ್ದಾರೆ.
ಬೆಂಕಿ ಮೇಲೂ ನಿಗಾ: ಇದಲ್ಲದೆ, ವೈಮಾನಿಕ ಪ್ರದರ್ಶನ ನಡೆಯುವ ಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸ್ಥಳೀಯರು ತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಚ್ಚುವ ಸಾಧ್ಯತೆ ಇದೆ. ಇದರಿಂದ ವಿಮಾನ ಹಾರಾಟಕ್ಕೆ ತೊಂದರೆ ಆಗಲಿದೆ. ಈ ಬಗ್ಗೆಯೂ ನಿಗಾ ವಹಿಸುವಂತೆ ಆಯಾ ಗ್ರಾ.ಪಂ. ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಾಂಸಕ್ಕೂ ವಿಮಾನಕ್ಕೂ ಏನು ಸಂಬಂಧ?
ಪ್ರಾಣಿಜನ್ಯ ತ್ಯಾಜ್ಯವನ್ನು ಅರಸಿ ಹದ್ದು ಮತ್ತಿತರ ಹಕ್ಕಿಗಳು ಬರುತ್ತವೆ. ಇದು ಫೆ. 14ರಿಂದ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಲೋಹದ ಹಕ್ಕಿಗಳ ಹಾರಾಟಕ್ಕೆ ಅಡ್ಡಿಯಾಗಲಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಲಿನ ಪ್ರದೇಶದಲ್ಲಿ ಕೋಳಿ ಸೇರಿದಂತೆ ಮತ್ತಿತರ ಪ್ರಕಾರದ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಆದಾಗ್ಯೂ ಮಾಂಸ ಮಾರಾಟಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆದೇಶ ಉಲ್ಲಂ ಸಿ ಮಾಂಸಾಹಾರ ಪೂರೈಸುತ್ತಿದ್ದ ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ. ಇದಲ್ಲದೆ, ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಡಾಬಾ, ಮಾಂಸಾಹಾರಿ ಹೋಟೆಲ್‌ಗಳನ್ನು ಮುಚ್ಚಲಾಗುತ್ತಿದೆ ಎಂದು ಅವರು ಹೇಳಿದರು.