Advertisement

ಬಸ್ಸಿನಿಂದ ಬಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ 

02:27 PM Oct 26, 2018 | Team Udayavani |

ಉಪ್ಪಿನಂಗಡಿ: ಬಸ್‌ನಲ್ಲಿ ಪ್ರಯಾಣಿಸುವಾಗ ರಸ್ತೆಗೆ ಬಿದ್ದಿದ್ದ ಅಮೂಲ್ಯ ಕಾಗದಪತ್ರಗಳು ಹಾಗೂ ಬಟ್ಟೆಗಳಿದ್ದ ದೊಡ್ಡ ಬ್ಯಾಗ್‌ ಅನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಶಿರಾಡಿ ಗ್ರಾಮದ ಯುವಕರು ಮಾನವೀಯತೆ ಮೆರೆದಿದ್ದಾರೆ. ಕುಣಿಗಲ್‌ ನಿವಾಸಿ ಗಿರೀಶ್‌ ಎಂಬವರು ಬುಧವಾರ ಬೆಳಗ್ಗೆ 6.30ಕ್ಕೆ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್‌ ನಲ್ಲಿ ಪ್ರಯಾಣಿಸಿದ್ದು, ಅವರ ಬ್ಯಾಗ್‌ ಅನ್ನು ಬಸ್ಸಿನ ಹೊರಭಾಗದಲ್ಲಿರುವ ಸೈಡ್‌ ಲಗೇಜ್‌ ಕ್ಯಾಬಿನ್‌ನಲ್ಲಿ ಇರಿಸಿದ್ದರು. ಅದರಲ್ಲಿ ಡೆಬಿಟ್‌ ಕಾರ್ಡ್‌, ಅಂಕಪಟ್ಟಿ, ಕ್ರೆಡಿಟ್‌ ಕಾರ್ಡ್‌, ಎಲ್‌ಐಸಿ ಬಾಂಡ್‌ ಸಹಿತ ಹತ್ತಾರು ದಾಖಲೆ ಪತ್ರಗಳೂ ಇದ್ದವು. ಗುಂಡ್ಯ ಕಳೆದು ಮುಂದಕ್ಕೆ ಹೋಗುವಾಗ ಬಸ್ಸಿನಿಂದ ಏನೋ ಬಿದ್ದಂತೆ ಸದ್ದು ನಿರ್ವಾಹಕನಿಗೆ ತಿಳಿಸಿದ್ದ. ಇದನ್ನು ಚಾಲಕನಿಗೆ ತಿಳಿಸಿದರೂ ಅವರು ಲಕ್ಷ್ಯ ಕೊಡದೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದರು. ಐದಾರು ಕಿ.ಮೀ. ಪ್ರಯಾಣಿಸಿದ ಬಳಿಕ ನಿರ್ವಾಹಕನ ಒತ್ತಾಯಕ್ಕೆ ಮಣಿದು ಚಾಲಕ ಬಸ್‌ ನಿಲ್ಲಿಸಿದ. ಈ ಸಂದರ್ಭ ತಪಾಸಣೆ ಮಾಡಿದಾಗ ಗಿರೀಶ್‌ ಅವರ ಬ್ಯಾಗ್‌ ನಾಪತ್ತೆಯಾಗಿತ್ತು. ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲ.

Advertisement

ಈ ಕುರಿತು ಗಿರೀಶ್‌ ಅವರು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಈ ನಡುವೆ ರಸ್ತೆ ಬದಿಯ ಪೊದೆಯಲ್ಲಿದ್ದ ಬ್ಯಾಗ್‌ ಶಿರಾಡಿ ಗ್ರಾಮದ ಪೇರಮಜಲಿನ ವಸಂತ, ಅಡ್ಡಹೊಳೆಯ ಬಾಲಚಂದ್ರ ಹಾಗೂ ಗುಂಡ್ಯದ ಭವಾನಿ ಶಂಕರ್‌ ಅವರಿಗೆ ದೊರೆತಿದ್ದು, ಅದನ್ನು ಠಾಣೆಗೆ ತಂದೊಪ್ಪಿಸಿದರು. ಬಳಿಕ ಎಎಸ್‌ಐ ರುಕ್ಮಯ ನಾಯ್ಕ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಬ್ಯಾಗ್‌ ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next