ಕಲಬುರಗಿ: ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿತವಾಗಿರುವ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಆರಂಭಿಸಲಾಗಿರುವ ತೊಗರಿ ಖರೀದಿ ಕೇಂದ್ರಗಳು ಚೀಲಗಳ ಕೊರತೆಯಿಂದ ಅರ್ಧಕರ್ಧದಷ್ಟು ಬಂದ್ ಆಗಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ 59 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಲ್ಲಿ ಅರ್ಧದಷ್ಟು ಖರೀದಿ ಕೇಂದ್ರಗಳು ಬಂದ್ ಆಗಿವೆ. ಇನ್ನು ಕೆಲವು ಕುಂಟುತ್ತಾ ಸಾಗಿವೆ. ತೊಗರಿ ಮಂಡಳಿ ಕೇಂದ್ರಗಳಲ್ಲಂತೂ ದಿನಕ್ಕೆ ಕೇವಲ 200 ಕ್ವಿಂಟಾಲ್ ತೊಗರಿ ಮಾತ್ರ ಮಾರಾಟವಾಗುತ್ತಿದೆ.
ಅತಿ ಹೆಚ್ಚು ರೈತರ ಅಸೋಷಿಯೇನ್‌ದ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟವಾಗಿದ್ದರೆ, ಈಗ ಈ ಕೇಂದ್ರಗಳು ಚೀಲದ ಕೊರತೆಯಿಂದ ಮಾರಾಟ ಪ್ರಕ್ರಿಯೆ ಸ್ಥಗಿತಗೊಂಡಿವೆ. ಮಾರಾಟ ಪ್ರಕ್ರಿಯೆ ಸ್ಥಗಿತಗೊಂಡಿದ್ದರೂ ಈ ಕೇಂದ್ರಗಳಲ್ಲಿ ರೈತರು ಸಾವಿರಾರು ತೊಗರಿ ಚೀಲಗಳನ್ನು ಟ್ರಾÂಕ್ಟರ್, ಎತ್ತಿನ ಗಾಡಿಗಳ ಮೂಲಕ ತಂದು ಚೀಲಗಳು ಯಾವಾಗ ಬರುತ್ತವೆಎಂದು ಕಾಯುತ್ತಿದ್ದಾರೆ.
ದಿನಾಂಕ ವಿಸ್ತರಣೆಗೆ ಮನವಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಏಪ್ರಿಲ್ 15ರವರೆಗೆ ಮಾತ್ರ ಎಂಬುದಾಗಿ ನಿಗದಿಯಾಗಿದೆ. ಆದರೆ ಈ ದಿನಾಂಕ ಮತ್ತೆ ವಿಸ್ತರಣೆಯಾಗಬೇಕು. ಜತೆಗೆ ಖರೀದಿ ಕೇಂದ್ರಗಳಿಗೆ ಅಗತ್ಯ ಚೀಲಗಳನ್ನು ಪೂರೈಸಬೇಕೆಂಬುದು ರೈತರ ಆಗ್ರಹವಾಗಿದೆ. ಖರೀದಿಗೆ ಕೊನೆ ದಿನಾಂಕ ಸಮೀಪಿಸುತ್ತಿದ್ದಂತೆ ರೈತರು ಖರೀದಿ ಕೇಂದ್ರಗಳತ್ತ ತೊಗರಿ ತರಲಾರಂಭಿಸಿದ್ದಾರೆ.
ಷರತ್ತು ವಿಧಿಸುವಿಕೆ: ಈ ಮೊದಲು ರೈತರ ತೊಗರಿಯನ್ನು ಎಷ್ಟು ಬೇಕಾದರೂ ಖರೀದಿ ಮಾಡಬಹುದಿತ್ತು. ಆದರೆ ಸರ್ಕಾರ ಇದೀಗ ಒಬ್ಬ ರೈತನಿಂದ ಕೇವಲ 25 ಕ್ವಿಂಟಾಲ್ ಮಾತ್ರ ಖರೀದಿ ಮಾಡಬೇಕೆಂದು ಷರತ್ತು ವಿಧಿಸಿ ಆದೇಶ ಹೊರಡಿಸಿದೆ. ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಕಡ್ಡಾಯಗೊಳಿಸಲಾಗಿದೆ. ಅವಶ್ಯಕ ತಕ್ಕಂತೆ ಚೀಲಗಳು ಬರುತ್ತಿಲ್ಲ. ತುಂಬಾ ಕೊರತೆ ಉಂಟಾಗಿರುವುದರಿಂದ ಖರೀದಿ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.