Advertisement

ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚಿದೆ

07:29 AM Feb 23, 2019 | |

ಹನೂರು: ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಮುಕ್ತಿ ಹೊಂದಿದ್ದು, ಮುಂದುವರಿಯುತ್ತಿರುವ ಜಿಲ್ಲೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಆರ್‌.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಹಂಪಿ ವಿಶ್ವವಿದ್ಯಾಲಯದ ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದದ ಅಧ್ಯಯನ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ತವರು: ಚಾಮರಾಜನಗರ ಜಿಲ್ಲೆ ಜಾನಪದದ ತವರೂರಾಗಿದ್ದು, ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಅದಕ್ಕೆ ಕಿರೀಟಪ್ರಾಯವಾಗಿದೆ. ಇಲ್ಲಿ ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಹನೂರು ಕ್ಷೇತ್ರದಲ್ಲಿ ಮಲೆ ಮಹದೇಶ್ವರರು, ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಅವರ ಬೀಡಾಗಿದ್ದು, ಹಲವು ಪವಾಡಗಳ ಮೂಲಕ ಜನಪದ ಕಲೆಯ ಜನನಕರಾಗಿದ್ದಾರೆ ಎಂದರು. 

ಜಿಲ್ಲೆ ಮುಂಚೂಣಿ: ಈ ಹಿಂದೆ ಚಾಮರಾಜನಗರ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಕೃಷಿ ಕಾಲೇಜುಗಳು ಮಂಜೂರಾಗಿದ್ದು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದಂತೆ ಕಾನೂನು ಮತ್ತು ಮಹಿಳಾ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಿತ್ತುಹಾಕಿ ಮುಂದುವರಿಯುತ್ತಿರುವ ಜಿಲ್ಲೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಶೈಕ್ಷಣಿಕ ಅಭಿವೃದ್ಧಿಗೆ ಒತ್ತು: ಯಾವುದೇ ಒಂದು ಗ್ರಾಮ, ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಾದಲ್ಲಿ ಶಿಕ್ಷಣದ ಪಾತ್ರ ಅತಿ ಮುಖ್ಯ. ಶೈಕ್ಷಣಿಕ ಅಭಿವೃದ್ಧಿ ಸಾಧಿಸಿದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ಸ್ಥಾನಮಾನಗಳು ತಾನಾಗಿಯೇ ಬರುತ್ತವೆ.  ಈ ನಿಟ್ಟಿನಲ್ಲಿ 1958ರಲ್ಲಿಯೇ ಶೈಕ್ಷಣಿಗೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೊಳ್ಳೇಗಾಲ ತಾಲೂಕಿನ 5 ಕಡೆ ಪ್ರೌಢಶಾಲೆಗಳನ್ನು ಪ್ರಾರಂಭಿಸಲಾಯಿತು.

Advertisement

ಅಲ್ಲದೆ ಇದೀಗ ಪ್ರತಿ ಹೋಬಳಿಮಟ್ಟದಲ್ಲೂ ಕೂಡ ಆದರ್ಶ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಏಕಲವ್ಯ ಶಾಲೆ, ಕೇಂದ್ರೀಯ ಶಾಲೆಗಳನ್ನು ತೆರೆಯಲಾಗಿದೆ. ಜೊತೆಗೆ ತಲಾ 17 ಕೋಟಿ ರೂ. ವೆಚ್ಚದಲ್ಲಿ ರಾಮಾಪುರ ಮತ್ತು ಪಾಳ್ಯಗಳಲ್ಲಿ ಇಂದಿರಾ ವಸತಿ ಶಾಲೆಗಳನ್ನು ತೆರೆಯಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಅನುದಾನ ಕೊರತೆ: ಜಾನಪದ ವಿದ್ವಾಂಸ ವೆಂಕಟೇಶ್‌ ಇಂದ್ವಾಡಿ ಮಾತನಾಡಿ, ಚಾಮರಾಜನಗರ ಹಿಂದುಳಿದ ಜಿಲ್ಲೆಯಾದರೂ ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಮತ್ತು ಜಾನಪದ ಕಲೆಯಲ್ಲಿ ಶ್ರೀಮಂತ ಜಿಲ್ಲೆಯಾಗಿದೆ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನಿರೀಕ್ಷಿತ ಮಟ್ಟದಲ್ಲಿ ಲಭಿಸುತ್ತಿಲ್ಲ ಎಂದು ವಿಷಾದಿಸಿದರು.

ಅಕಾಡೆಮಿ ಪ್ರಶಸ್ತಿ: ಇದೇ ವೇಳೆ ಭೈರನತ್ತ ಗ್ರಾಮದ ಮರಿಸಿದ್ದಮ್ಮ ಅವರಿಗೆ 2018ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಜಾನಪದ ಕಮ್ಮಟದಲ್ಲಿ ವಿವಿಧ ಜಿಲ್ಲೆಗಳ 24 ವಿದ್ಯಾರ್ಥಿಗಳಿಂದ ಜಾನಪದ ಕಲೆಗಳ ಕುರಿತು ವಿಚಾರ ಗೋಷ್ಠಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು, ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಜಾನಪದ ಕಲಾವಿದರಾದ ಪಿ.ಕೆ.ರಾಜಶೇಖರ್‌, ಕಾಳೇಗೌಡ ನಾಗವಾರ, ಜಾನಪದ ಅಕಾಡೆಮಿ ರಿಜಿಸ್ಟ್ರಾರ್‌ ಸಿದ್ರಾಮ್‌ ಸಿಂಧೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next