Advertisement

ಪರಿಸರ ಪ್ರೇಮದ ಸಂದೇಶ ಸಾರಿದ ಬೇಸಿಗೆ ಶಿಬಿರದ ಮಕ್ಕಳ ಗುಬ್ಬಿಯ ಹಾಡು

08:32 AM May 31, 2019 | mahesh |

ವಿದ್ಯಾರ್ಥಿಗಳ ಬಹು ಆಯಾಮಿ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಬಲ್ಲ ರಂಗಕಲೆಯನ್ನು ಪ್ರೋತ್ಸಾಹಿಸುವ ಹಾಗೂ ಮುಂದಿನ ಪೀಳಿಗೆಗೆ ನಾಟಕ ಕಲೆಯನ್ನು ಹಸ್ತಾಂತರಿಸುವ ಉದ್ದೇಶದಿಂದ ಲಾವಣ್ಯ(ರಿ.) ಬೈಂದೂರು ಕೆಲವು ವರ್ಷಗಳಿಂದ ಚಿಣ್ಣರ ಬೇಸಿಗೆ ರಂಗ ತರಬೇತಿ ಶಿಬಿರ ನಡೆಸುತ್ತಾ ಬಂದಿದೆ. 5-6 ವರ್ಷದ ಪುಟಾಣಿಗಳಿಂದ ಮೊದಲ್ಗೊಂಡು ಹದಿ ಹರೆಯದ ವಯಸ್ಸಿನ ಮಕ್ಕಳನ್ನೊಳಗೊಂಡ ಸುಮಾರು 43 ಶಿಬಿರಾರ್ಥಿಗಳು ಪಾಲ್ಗೊಂಡ ಎರಡು ನಾಟಕಗಳು ಮನ ಮುದಗೊಳಿಸಿತು.

Advertisement

ಗುಬ್ಬಿಯ ಹಾಡು
ಪರಿಸರ ನಾಶ ಮತ್ತು ಮಾಲಿನ್ಯದಿಂದ ಮರ-ಗಿಡ, ಗುಡ್ಡ-ಬೆಟ್ಟ, ನದಿ-ತೊರೆ, ಪಶು-ಪಕ್ಷಿಸಂಕುಲ ತೀವ್ರ ಆಘಾತವನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ಮೂಡಿಬಂದ ನಾಟಕದಲ್ಲಿ ಪುಟಾಣಿ ಮಕ್ಕಳು ಪರಿಸರ ರಕ್ಷಣೆಯ ಸಂದೇಶ ನೀಡಿದರು. ಟೀವಿ- ಮೊಬೈಲ್‌ ಪ್ರಪಂಚದಲ್ಲಿ ಮುಳುಗಿ ಕಂದನ ಜಿಜ್ಞಾಸೆಗಳನ್ನು ಅಲಕ್ಷಿಸುವ ತಾಯಿ ಹಾಗೂ ಕಚೇರಿಯ ಕಾರ್ಯದಲ್ಲಿ ವ್ಯಸ್ತವಾಗಿರುವ ತಂದೆಯಿಂದಾಗಿ ಖನ್ನತೆಗೊಳಗಾಗುವ ಪುಟ್ಟ, ಮನುಷ್ಯರ ಕ್ರೌರ್ಯಕ್ಕೊಳಗಾದ ಗುಬ್ಬಿಯೊಂದರ ಸ್ನೇಹ ಸಂಪಾದಿಸುತ್ತಾನೆ. ಪ್ರಬಂಧಕ್ಕೆ ಬೇಕಾದ ಪರಿಸರ ಸಂಬಂಧಿಸಿದ ಜ್ಞಾನವನ್ನು ನೀಡುವ ಗುಬ್ಬಿ ಪುಟ್ಟನ ದಿನ ನಿತ್ಯ ಸಂಭಾಷಣೆ ನಡೆಸುವ ಪರಮಾಪ್ತ ಮಿತ್ರನಾಗುತ್ತದೆ. ಗುಬ್ಬಿಯ ಸ್ನೇಹದಲ್ಲಿ ದೊರೆತ ಪರಿಸರದ ಜ್ಞಾನದಿಂದ ಪುಟ್ಟ ಪ್ರಬಂಧ ಸ್ಪರ್ಧೆಯ ಪುರಸ್ಕಾರಕ್ಕೆ ಭಾಜನಾಗುತ್ತಾನೆ. ಪುರಸ್ಕಾರ ಸಮಾರಂಭಕ್ಕೆ ವಿಳಂಬವಾಗಿ ತಲುಪುವ ತಂದೆ-ತಾಯಿಗಳು ಅಲ್ಲಿಗೆ ಬರುವ ಮೊದಲು ಮನೆಯಲ್ಲಿದ್ದ ಗುಬ್ಬಿಯನ್ನು ಕೊಂದು ಹೊರಕ್ಕೆಸೆದು ಬಂದಿರುವರೆಂದು ತಿಳಿದು ಆಘಾತಕ್ಕೊಳಗಾಗುವ ಪುಟ್ಟ ತನ್ನ ಮನೆಯಲ್ಲೇ ತನಗೆ ಪರಿಸರ ಪ್ರಜ್ಞೆ ಮೂಡಿಸಲಾಗಲಿಲ್ಲವಲ್ಲ ಎಂದು ಮರುಗುತ್ತಾನೆ.

ಮೂರ್ತಿ ಬಂಕೇಶ್ವರ ಅವರ ಸುಂದರ ಸ್ವರದಲ್ಲಿ ತಾರೆಗಳ ತೋಟ ಮಾಡಿದ್ದು ಯಾರು?ಯಾರು?… ಮರವನ್ನೇ ಕಡಿದ ಮನುಜಾ, ಈ ವಿಶಾಲ ಲೋಕದಲಿ ಎಲ್ಲರೂ ಬಾಳಿ ಬದುಕಬೇಕೆಂದುಕೊಂಡರು, ತನ್ನ ಸ್ವಾರ್ಥಾನೇ ಬಿಡಲಿಲ್ಲ, ಎಲ್ಲರ ಜೊತೆ ಬಾಳ್ಳೋದು ಕಲಿಯಲಿಲ್ಲ… ಮೊದಲಾದ ಹಾಡುಗಳಿಗೆ ಪುಟ್ಟ ಕಂದಮ್ಮಗಳು ಹೆಜ್ಜೆ ಹಾಕಿದ್ದನ್ನು ಕಲಾಪ್ರೇಮಿಗಳು ಆನಂದಿಸಿದರು. ಜಯತೀರ್ಥ ರಚನೆಯ ನಾಟಕದಲ್ಲಿ ಲಾವಣ್ಯದ ಉದಯೋನ್ಮುಖ ನಿರ್ದೇಶಕ ನಾಗೇಂದ್ರ ಬಂಕೇಶ್ವರ ಪರಿಶ್ರಮ-ಪರಿಪಕ್ವತೆ ಮಕ್ಕಳ ಪ್ರೌಢ ಅಭಿನಯದಲ್ಲಿ ಕಾಣಲು ಸಿಕ್ಕಿತು.

ತಾಯಿಯ ಕಣ್ಣು
ಭೌತಿಕ ಭೋಗವಾದದ ಅತಿಯಾದ ಪ್ರಭಾವದ ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳು ರಸಾತಲಕ್ಕಿಳಿಯುತ್ತಿರುವುದು ಎದ್ದು ಕಾಣಿಸುತ್ತಿದೆ. ತಂದೆ-ತಾಯಿಯ ಅನಾದರ, ಸಂಬಂಧಗಳ ಕೊಂಡಿ ಶಿಥಿಲವಾಗುತ್ತಿರುವ ನಮ್ಮ ಸಮಾಜದಲ್ಲಿ ತಾಯಿಯ ಮಮತೆ ಕೂಡಾ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಷಾದನೀಯವಾದರೂ ವಾಸ್ತವ. ಮಿತ್ರರ ಗೇಲಿಯಿಂದಾಗಿ ವಿಕಾರವಾದ ಕಣ್ಣು ಹೊಂದಿದ ತಾಯಿಯನ್ನು ದೂರವಿಡುವ ಬಾಲಕ ಆಕೆಯ ತ್ಯಾಗದ ಕಾರಣದಿಂದಲೇ ಸ್ವಂತ ಬದುಕನ್ನು ಕಟ್ಟಿಕೊಳ್ಳುತ್ತಾನಾದರೂ ತಾನು ಪ್ರೀತಿಸುವ ಯುವತಿಯ ಎದುರು ಆಕೆ ಬರಬಾರದೆಂದು ಸೂಚಿಸುತ್ತಾನೆ. ಮನನೊಂದ ತಾಯಿ ಮನೆಯನ್ನೇ ಬಿಟ್ಟು ಹೋದ ನಂತರ ಬಾಲ್ಯದಲ್ಲಿ ಆಟವಾಡುತ್ತಿ¨ªಾಗ ತಾನು ಕಳೆದುಕೊಂಡ ಕಣ್ಣಿನ ಬದಲಾಗಿ ತನ್ನ ತಾಯಿ ತನ್ನ ಕಣ್ಣನ್ನೇ ಕೊಟ್ಟಿದ್ದಳು ಎಂದು ತಿಳಿದಾಗ ಯುವಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತನ್ನ ಸುಂದರ ಬದುಕಿಗಾಗಿ ಎಷ್ಟೊಂದು ತ್ಯಾಗ ಮಾಡಿದ ತಾಯಿಯನ್ನು ಮನೆ ಬಿಟ್ಟು ಹೋಗುವಂತೆ ಮಾಡಿದೆನಲ್ಲಾ ಎಂದು ಪರಿತಪಿಸುತ್ತಾನೆ.

ಕೋಟೆ ನಾಗರಾಜ ರಚನೆಯ ನಾಟಕಕ್ಕೆ ಲಾವಣ್ಯದ ಗರಡಿಯಲ್ಲಿ ಪಳಗಿದ ರೋಶನ್‌ ಕುಮಾರ್‌ ನಿರ್ದೇಶನವಿತ್ತು. ಲಾವಣ್ಯದ ಸಂಪೂರ್ಣ ತಂಡದ ಪರಿಶ್ರಮದಿಂದಾಗಿ ಪುಟ್ಟ ಶಿಬಿರ ಸಾರ್ಥಕ್ಯವನ್ನು ಕಂಡಿತು

Advertisement

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next