Advertisement

ಬನ್ನಂಜೆ ಬಸ್‌ ನಿಲ್ದಾಣದಲ್ಲಿ ಬರಲಿದೆ ಬೇಬಿ ಫೀಡಿಂಗ್‌ ಸೆಂಟರ್‌

01:23 AM Oct 15, 2019 | Sriram |

ಉಡುಪಿ: ನಿರ್ಮಾಣದ ಹಂತದಲ್ಲಿರುವ ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಮಗುವಿಗೆ ಹಾಲುಣಿಸಲು ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಪ್ರಯಾಣದ ವೇಳೆ ಸಾರ್ವಜನಿಕವಾಗಿ ಬಸ್‌, ನಿಲ್ದಾಣದಲ್ಲಿ ಮಹಿಳೆಯರು ಮಗುವಿಗೆ ಹಾಲುಣಿಸಲು ಸಾಧ್ಯವಿಲ್ಲ. ಅದೂ ಆಕೆಯ ಗೌರವ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಈ ಸಮಸ್ಯೆಗಳನ್ನು ಮನಗೊಂಡ ಕೆಎಸ್‌ಆರ್‌ಟಿಸಿ, ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್‌ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು “ಬೇಬಿ ಫೀಡಿಂಗ್‌ ಸೆಂಟರ್‌’ ತೆರೆಯಲು ನಿರ್ಧರಿಸಿದೆ.

Advertisement

ತೊಟ್ಟಿಲೂ ಇದೆ
ಹಸುಗೂಸು ಕರೆದುಕೊಂಡು ಪ್ರಯಾಣಿಸಬೇಕಾದರೆ ಎಲ್ಲ ಕಡೆಗಳಲ್ಲಿ ತೊಟ್ಟಿಲು ಕೊಂಡೊಯ್ಯುವುದು ಕಷ್ಟ ಸಾಧ್ಯ. ಬಹುತೇಕ ಮಕ್ಕಳಿಗೆ ತೊಟ್ಟಿಲು ಅಭ್ಯಾಸ ಇರುವುದರಿಂದ ಮಲಗದೆ ಹಠ ಮಾಡುತ್ತವೆ. ಹೀಗಾಗಿ ಬೇಬಿ ಫೀಡಿಂಗ್‌ ಸೆಂಟರ್‌ನ ತೊಟ್ಟಿಲಿನಲ್ಲಿ ಮಕ್ಕಳನ್ನು ಮಲಗಿಸಬಹುದಾಗಿದೆ.ಪ್ರಸ್ತುತ ವ್ಯವಸ್ಥೆ ಇಲ್ಲ ಪ್ರಸ್ತುತ ನಗರದಲ್ಲಿ ಕಾರ್ಯಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ನಿಲ್ದಾಣದಲ್ಲಿ ಮಕ್ಕಳಿಗೆ ಹಾಲುಣಿಸಲು ಅಗತ್ಯವಿರುವ ವ್ಯವಸ್ಥೆ ಇಲ್ಲ.

ಮೇ ಅಂತ್ಯ ಕಾಮಗಾರಿ ಪೂರ್ಣ
ಬನ್ನಂಜೆಯಲ್ಲಿ 3 ಎಕರೆ ಜಾಗದಲ್ಲಿ ಸುಮಾರು 35 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಏನೆಲ್ಲ ವ್ಯವಸ್ಥೆ?
ಬಸ್‌ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಕೋಣೆಯ ಒಳಗಡೆ ಬೇಬಿ ಫೀಡಿಂಗ್‌ ಸೆಂಟರ್‌ ಕಾರ್ಯಾಚರಿಸಲಿದೆ. ಇಲ್ಲಿ ತಾಯಿ ಮಗುವಿಗೆ ಎದೆ ಹಾಲು ಕುಡಿಸಲು ಪ್ರತ್ಯೇಕ ಪರದೆ ವ್ಯವಸ್ಥೆ ಇರಲಿದೆ. ಬೆಡ್‌, ಮಗುವನ್ನು ಮಲಗಿಸಲು ಒಂದು ತೊಟ್ಟಿಲು, 15 ಮಂದಿ ಕೂರಲು ಕುರ್ಚಿ, ಹ್ಯಾಂಡ್‌ ವಾಶ್‌ ಬೇಸಿನ್‌, ಮಕ್ಕಳ ಆಟಿಕೆ, ಫ್ಯಾನ್‌, ಕೊಠಡಿಗೆ ಹೊಂದಿಕೊಂಡು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ.

ಉತ್ತಮ ವ್ಯವಸ್ಥೆ
ಬಸ್‌ ಮೂಲಕ ದೂರದ ಪ್ರಯಾಣ ಬೆಳೆಸುವ ಮಳೆಯರಿಗೆ ಹಾಲುಣಿಸುವುದೇ ದೊಡ್ಡ ಸವಾಲಿನ ಕೆಲಸ. ಶೌಚಾಲಯ ಮರೆಯಲ್ಲಾದರೂ ಹಾಲುಣಿಸಲು ಸಾಧ್ಯವೆ? ಇದೀಗ ಹೊಸ ನಿಲ್ದಾಣದಲ್ಲಿ ಹಾಲುಣಿಸುವ ಕೇಂದ್ರ ಪ್ರಾರಂಭಿಸಲು ಮುಂದಾಗಿರುವುದು ತಾಯಂದಿರಿಗೆ ಅನುಕೂಲವಾಗಲಿದೆ.
-ಪ್ರಿಯಾಂಕಾ ಶೆಟ್ಟಿ,
ಯಾತ್ರಾರ್ಥಿ. ಉಡುಪಿ.

Advertisement

ಮಹಿಳೆಯರ ಅನುಕೂಲಕ್ಕಾಗಿ
ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತೆ ಬೇಬಿ ಫೀಡಿಂಗ್‌ ಸೆಂಟರ್‌ ತೆರೆಯಲಾಗುತ್ತದೆ.
-ಉದಯಕುಮಾರ್‌ ಶೆಟ್ಟಿ,
ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌. ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next