Advertisement
ನವದೆಹಲಿ: ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ಭೂವಿವಾದದ ಕುರಿತ ತೀರ್ಪು ನೀಡಿದ ಬಳಿಕ ಭಾರತೀಯರು ನಡೆದುಕೊಂಡ ರೀತಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಾಣದ ಪರವಾಗಿ ಬಂದ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್’ ನಲ್ಲಿ ಮಾತನಾಡಿದ ಅವರು, “2010ರಲ್ಲಿ ಅಲಹಾಬಾದ್ ವಿಶೇಷ ನ್ಯಾಯಾಲಯ ಅಯೋಧ್ಯೆ ತೀರ್ಪು ನೀಡಿದಾಗ ಇಡೀ ದೇಶ ಶಾಂತಿಯಿಂದ ವರ್ತಿಸಿತ್ತು. ಈ ಬಾರಿ ಸರ್ವೋಚ್ಚ ನ್ಯಾಯಾಲಯ ನ.9ರಂದು ತೀರ್ಪನ್ನು ನೀಡಿದಾಗ, 130 ಕೋಟಿ ಭಾರತೀಯರು, ದೇಶದ ಹಿತವೇ ಸರ್ವೋಚ್ಚ ಎಂದು ಮತ್ತೂಮ್ಮೆ ಸಾಬೀತುಮಾಡಿದ್ದಾರೆ. ಶಾಂತಿ, ಏಕತೆ, ನಾಗರಿಕತೆಯಂತಹ ಮೌಲ್ಯಗಳು ನಮ್ಮ ದೇಶದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿವೆ. ಭಾರತೀಯರು ತೀರ್ಪನ್ನು ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ತೀರ್ಪನ್ನು ಸಹಜವಾಗಿ, ಶಾಂತಿಯಿಂದ ಸ್ವೀಕರಿಸಿದ್ದಾರೆ. ಅವರ ತಾಳ್ಮೆಗೆ, ಸಹಿಷ್ಣುತೆಗೆ, ಪ್ರಬುದ್ಧತೆಗೆ ನಾನು ಋಣಿಯಾಗಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಮಧ್ಯಪ್ರದೇಶದ 9 ವರ್ಷದ ಹುಡುಗಿ ಶ್ವೇತಾ, ನಮೋ ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ, ಪರೀಕ್ಷೆ ಎದುರಿಸಲು ಹೆದರುವವರಿಗಾಗಿ ಮುಂದಿನ ಜನವರಿಯಲ್ಲಿ ಸಂವಾದ ಇಟ್ಟುಕೊಳ್ಳಿ ಎಂದು ಕೋರಿದ್ದಾರೆ. ಅವರ ಅಭಿಪ್ರಾಯ ಸರಿಯಿದೆ. ನಾವೆಲ್ಲ ಸೇರಿ ಈ ಭಯ ನಿವಾರಿಸಬೇಕು. ನಮ್ಮ ಮಾನವಸಂಪನ್ಮೂಲ ಇಲಾಖೆ ಈ ಬಗ್ಗೆ ಕಾರ್ಯೋನ್ಮುಖರಾಗಿ ಜನವರಿ ಆರಂಭ, ಮಧ್ಯಭಾಗದಲ್ಲಿ ಸಂವಾದ ಏರ್ಪಡಿಸಲಿದೆ. ವಿದ್ಯಾರ್ಥಿಗಳು ತಂತಮ್ಮ ಶಾಲೆಗಳ ಮೂಲಕವೇ ಈ ಸಂವಾದದಲ್ಲಿ ಭಾಗವಹಿಸಬಹುದು ಅಥವಾ ದೆಹಲಿಗೂ ಬರಬಹುದು. ದೆಹಲಿಗೆ ಬರುವ ವಿದ್ಯಾರ್ಥಿಗಳನ್ನು ಮೈಗವರ್ನೆನ್ಸ್ ನಿರ್ಧರಿಸಲಿದೆ ಎಂದೂ ಮೋದಿ ಹೇಳಿದ್ದಾರೆ.